ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಬಳ್ಳಾರಿಗೆ ಮೊಳಕಾಲ್ಮುರು ಸೇರ್ಪಡೆ ಸಲ್ಲದು’

ವಿಭಜನೆಗೆ ಮುನ್ನ ಸಂವಿಧಾನ ತಜ್ಞರ ಸಲಹೆ ಪಡೆಯಲಿ: ಆಗ್ರಹ
Last Updated 27 ನವೆಂಬರ್ 2020, 6:41 IST
ಅಕ್ಷರ ಗಾತ್ರ

ಬಳ್ಳಾರಿ: ‘ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ಪ್ರಸ್ತಾಪವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಬಲವಾಗಿ ವಿರೋಧಿಸುತ್ತದೆ’ ಎಂದು ಸಮಿತಿಯ ಸಂಚಾಲಕ ಎಸ್‌.ಪನ್ನರಾಜ್‌ ಪ್ರತಿಪಾದಿಸಿದರು.

'371 (ಜೆ) ವಿಶೇಷ ಮೀಸಲಾತಿ ದೊರಕುತ್ತದೆ ಎಂಬ ಕಾರಣಕ್ಕೆ ಹಿಂದೆ, ಕೊಪ್ಪಳ ಸುತ್ತಮುತ್ತಲಿನ 60 ಊರುಗಳನ್ನು ಆ ಜಿಲ್ಲೆಗೆ ಸೇರಿಸುವ ಪ್ರಯತ್ನ ನಡೆದಿತ್ತು. ಅದರೊಂದಿಗೆ ವಿಜಯಪುರವನ್ನು ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ತರುವ ಪ್ರಯತ್ನವನ್ನೂ ತಡೆಯಲಾಗಿತ್ತು. ಈಗ ಮೊಳಕಾಲ್ಮುರು ಸೇರ್ಪಡೆಗೂ ಸಮಿತಿ ಅವಕಾಶ ಕೊಡುವುದಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಶೇಷ ಮೀಸಲಾತಿಯನ್ನು ಪಡೆಯಲು ಬಳ್ಳಾರಿ ಜಿಲ್ಲೆಯು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅಂಥ ಜಿಲ್ಲೆಗೆ ಸೇರಿದ್ದು ವಿಭಜನೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ವಿಜಯನಗರಕ್ಕೂ ಅದನ್ನೂ ಪಡೆಯುವ ಹಕ್ಕಿದೆ. ಆದರೆ ಏಳನೇ ಜಿಲ್ಲೆಯಾಗಿ ಸೇರ್ಪಡೆಯಾಗಿರುವ ಬಗ್ಗೆ ಸಂವಿಧಾನ ತಿದ್ದುಪಡಿಯಾಗಬೇಕು’ ಎಂದು ಆಗ್ರಹಿಸಿದರು.

’ತಿದ್ದುಪಡಿಯಾಗದೇ ಇದ್ದು, ನ್ಯಾಯಾಲಯದಲ್ಲಿ ಯಾರಾದರೂ ಆಕ್ಷೇಪಣೆ ದಾಖಲಿಸಿದರೆ ತಾಂತ್ರಿಕ ಕಾರಣದಿಂದಾಗಿ ಮೀಸಲಾತಿಗೆ ತಾತ್ಕಾಲಿಕ ತಡೆ ಬೀಳುವ ಸಾಧ್ಯತೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹೀಗಾಗಿ, ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ವಿಶೇಷ ಮೀಸಲಾತಿ ಸೌಕರ್ಯ ಎಂದಿನಂತೆ ಮುಂದುವರಿಯುತ್ತದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರವು ಸಂವಿಧಾನ ತಜ್ಞರ ವರದಿಯನ್ನು ಪಡೆಯಬೇಕು. ನಂತರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಬೇಕು. ಈ ವಿಷಯದಲ್ಲಿ ಸರ್ಕಾರ ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.

‘ವಿಜಯನಗರ ಜಿಲ್ಲೆಗೆ ವಿಶೇಷ ಮೀಸಲಾತಿ ತೊಂದರೆಯಾಗದು. ವದಂತಿಗಳಿಗೆ ಕಿವಿ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಹೇಳಿಕೆ ನೀಡಿದ್ದಾರೆ. ಆದರೆ, ಕಾನೂನಾತ್ಮಕವಾಗಿ ಸ್ಪಷ್ಟನೆ ನೀಡಿದರೆ ಮಾತ್ರ ಅದನ್ನು ಒಪ್ಪಬಹುದು’ ಎಂದು ಹೇಳಿದರು.

ಗೊಂದಲ:’ಹೊಸ ಜಿಲ್ಲೆಗೆ ಯಾವ ತಾಲ್ಲೂಕು ಸೇರಬೇಕು? ಬಳ್ಳಾರಿ ಜಿಲ್ಲೆಯಲ್ಲಿ ಯಾವ ತಾಲ್ಲೂಕುಗಳು ಉಳಿಯಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ವಿಭಜನೆಯ ನಿರ್ಧಾರ ಮಾಡಿರುವ ಸರ್ಕಾರ ಆ ಬಗ್ಗೆ ಗೊಂದಲವನ್ನು ಮೊದಲು ಪರಿಹರಿಸಿ, ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ವಿಭಜನೆ ವಿರುದ್ಧ ಹೋರಾಟ ನಡೆದಿದ್ದರೂ, ಅದನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುವ ವಿಸೃತ ವೇದಿಕೆ ಮಾತ್ರ ಇನ್ನೂ ಸಂಪೂರ್ಣವಾಗಿ ನಿರ್ಮಾಣವಾಗಿಲ್ಲ. ಇನ್ನು ಎರಡು ದಿನದೊಳಗೆ ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

28ರಂದು ರಸ್ತೆ ತಡೆ

‘ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಲೇಖಕ ಗುತ್ತಿ ಚಂದ್ರಶೇಖರ್‌ ನ.28ರಂದು ತಾಲ್ಲೂಕಿನ ಜೋಳದರಾಶಿ ಗ್ರಾಮದಲ್ಲಿ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಿದ್ದು ಸಮಿತಿಯೂ ಬೆಂಬಲ ನೀಡಲಿದೆ . ಕೋಲಾರದ ಲೇಖಕ ಸ.ರಘುನಾಥ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು. ವಿದ್ಯಾರ್ಥಿಗಳು, ಸಾಹಿತಿ, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು’ ಎಂದು ಕೋರಿದರು.

ಮುಖಂಡರಾದ ಟಿ.ಜಿ.ವಿಠಲ್. ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಾನಯ್ಯ, ರಿಜ್ವಾನ್‌ಖಾನ್‌‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT