ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಉಪಕಾಲುವೆಯಲ್ಲಿ ತ್ಯಾಜ್ಯದ ರಾಶಿ: ಹೆಚ್ಚಿದ ದುರ್ನಾತ, ಸೊಳ್ಳೆ ಕಾಟ, ರೋಗಭೀತಿ

ಜಯಪ್ಪ ರಾಥೋಡ್ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಇಲ್ಲಿನ ತಾಳೂರು ರಸ್ತೆಯಲ್ಲಿರುವ ತುಂಗಭಧ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಉಪಕಾಲುವೆಯಲ್ಲಿ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದ್ದು, ಕಾಲುವೆಯ ಎರಡೂ ಬದಿಯಲ್ಲಿರುವ ನಿವಾಸಿಗಳಿಗೆ ಇದು ನುಂಗಲಾರದ ತುತ್ತಾಗಿದೆ.

ಇಲ್ಲಿನ ಜನ ತಾವೇ ಕಸ ಹಾಕಿ, ತಾವೇ ವ್ಯಥೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ವಾಹನವೂ ಎರಡು ದಿನಗಳಿಗೊಮ್ಮೆ ಬರುವುದರಿಂದ ಜನರು ಕಸವನ್ನು ಕಾಲುವೆಯಲ್ಲಿ ಸುರಿದು ಬಿಡುತ್ತಾರೆ. ಇನ್ನೂ ಕೆಲವರು ಜಾನುವಾರುಗಳು ಸತ್ತರೂ ಇದೇ ಕಾಲುವೆಗೆ ಬಿಸಾಕುತ್ತಾರೆ. ಸೊಳ್ಳೆಗಳ ಕಾಟ ಮತ್ತು ಕೊಳಚೆ ನೀರಿನ ದುರ್ನಾತ ಇಲ್ಲಿ ಹೆಚ್ಚಿದೆ.

ನಗರದ ಅವಂಭಾವಿ ಭಾಗದಿಂದ ಸಂಗನಕಲ್ಲು ರಸ್ತೆವರೆಗೂ ಈ ಚಿತ್ರಣ ಕಂಡು ಬರುತ್ತದೆ. ತಾಳೂರು ರಸ್ತೆ, ಬೀಚಿ ನಗರ, ಶ್ರೀನಗರ, ಭಗತ್‌ಸಿಂಗ್ ನಗರ, ವಿಶ್ವೇಶ್ವರಯ್ಯ ನಗರ, ಸಿದ್ದಾರ್ಥ ಕಾಲೊನಿ, ಸಂಗನಕಲ್ಲು ರಸ್ತೆ ವಾಜಪೇಯಿ ಬಡಾವಣೆ ಸೇರಿ ಕಾಲುವೆಯುದ್ದಕ್ಕೂ ಇರುವ ಬಡಾವಣೆಗಳಲ್ಲಿ ಕಸದ ತೊಟ್ಟಿ ಸೇರಿ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ, ಕಾಲುವೆಯಲ್ಲಿ ನೀರಿನ ಬದಲು ಚರಂಡಿ, ತ್ಯಾಜ್ಯ ಹರಿಯುತ್ತಿರುವ ಚಿತ್ರಣ ಕಾಣಿಸುತ್ತದೆ.

‘ಕಾಲುವೆ ಬದಿಯಲ್ಲೇ ಮನೆಗಳಿರುವುದರಿಂದ ಜನರು ತ್ಯಾಜ್ಯವನ್ನು ಹಾಕುವುದಲ್ಲದೇ ಕೊಳಚೆ ನೀರನ್ನೂ ಬಿಡುತ್ತಾರೆ. ಸಣ್ಣ ಮಕ್ಕಳು ಅಕ್ಕಪಕ್ಕದಲ್ಲೇ ಆಟ ಆಡುತ್ತಾರೆ. ಕಾಲುವೆಯು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿದೆ’ ಎಂದು ತಾಳೂರು ರಸ್ತೆಯ ನಿವಾಸಿ ಚಂದ್ರಶೇಖರ್ ಅಲವತ್ತುಕೊಂಡರು.

‘ಈಚೆಗೆ ತಿಂಗಳ ಹಿಂದೆ ಕಾಲುವೆಯಲ್ಲಿರುವ ತ್ಯಾಜ್ಯವನ್ನು ಜೆಸಿಬಿಯಿಂದ ತೆಗೆಸಿ, ಶುಚಿಗೊಳಿಸಲಾಗಿತ್ತು. ಆದರೆ, ಮತ್ತೆ ಅದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಾಲುವೆಯಲ್ಲಿ ಕಸ ಹಾಕುವವರನ್ನು ಹಿಡಿದು ದಂಡ ವಿಧಿಸಿದರೆ ಕಸ ಸುರಿಯುವುದನ್ನು ತಡೆಯಬಹುದು. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯೂ ಇದೆ. ಪಾಲಿಕೆ ವಾಹನವೂ ಪ್ರತಿದಿನ ಬಂದರೆ ಕಾಲುವೆಯಲ್ಲಿ ಕಸ ಸುರಿಯುವವರ ಸಂಖ್ಯೆ ಕಡಿಮೆಯಾಗಲಿದೆ. ಈ ಕುರಿತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಚಂದ್ರಶೇಖರ ಆಗ್ರಹಿಸಿದರು.

ಮ್ಯಾನಹೋಲ್ ನೀರೂ ಕಾಲುವೆಗೆ!

ಕಾಲುವೆ ಬದಿಯಲ್ಲಿರುವ ಮ್ಯಾನ್‌ಹೋಲ್‌ಗಳು ಶಿಥಿಲಗೊಂಡಿವೆ. ಅವುಗಳು ತುಂಬಿದಾಗ ನೀರು ಕಾಲುವೆಗೆ ಹರಿಯುತ್ತದೆ. ಶ್ರೀನಗರದಲ್ಲಿ ಕಬ್ಬಿಣದ ಸೇತುವೆ ಸಮೀಪ ಮ್ಯಾನ್‌ಹೋಲ್ ಒಡೆದಿದ್ದು, ಮ್ಯಾನ್‌ಹೋಲ್‌ನಿಂದ ಶೌಚಾಲಯ, ಕೊಳಚೆ ನೀರೂ ಇದೇ ಕಾಲುವೆಗೆ ಹರಿಯುತ್ತದೆ. ಕಾಲುವೆಯಲ್ಲಿ ಬಿಸಾಡುವ ತ್ಯಾಜ್ಯದಿಂದ ದುರ್ನಾತ ಬೀರುತ್ತದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿದಿಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ ಎಂದು ಶ್ರೀನಗರ ನಿವಾಸಿ ಚಂದ್ರಶೇಖರ್ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು