ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಾಹು ಕೃಪೆಗಾಗಿ ನಿಕಟ ಪ್ರಾರ್ಥನೆಗೆ ‘ಇತಿಕಾಫ್‌’,ಹತ್ತು ದಿನ ಮಸೀದಿಯಲ್ಲೇ ವಾಸ!

Last Updated 5 ಜೂನ್ 2019, 5:21 IST
ಅಕ್ಷರ ಗಾತ್ರ

ಬಳ್ಳಾರಿ: ರಂಜಾನ್‌ ಮಾಸದ ಕೊನೆಯ ದಿನ ಚಂದ್ರನನ್ನು ನೋಡಿದ ವ್ರತನಿಷ್ಠ ಮುಸ್ಲಿಮರಲ್ಲಿ ಧನ್ಯತೆಯ ಭಾವ ಮೂಡಿದೆ. ಅವರಿಗಿಂತಲೂ ಹೆಚ್ಚು ಶ್ರದ್ಧೆ ಮತ್ತು ಏಕಾಗ್ರತೆಯಿಂದ ಕೊನೆಯ ಹತ್ತು ದಿನಗಳ ಕಾಲ ಮನೆ ತೊರೆದು ಮಸೀದಿಯಲ್ಲೇ ವಾಸ್ತವ್ಯ ಹೂಡಿದ ಹಲವು ಮಂದಿ ಅಲ್ಲಾಹುವನ್ನು ಒಲಿಸಿಕೊಂಡ ಸಂತಸದಲ್ಲಿದ್ದಾರೆ!

ಹೌದು. ರಂಜಾನ್‌ ಮಾಸದ ಮೂವತ್ತು ದಿನಗಳನ್ನು ಸಮನಾಗಿ ಮೂರು ಭಾಗ ಮಾಡಿದರೆ ಉಳಿಯುವ ಕೊನೆಯ ಹತ್ತು ದಿನಗಳ ಕಾಲ ಮನೆ ತೊರೆದು, ಮನೆ ವಾರ್ತೆಯಿಂದ ದೂರವಾಗಿ, ಮಸೀದಿಯಲ್ಲೇ ಉಳಿದು ಪ್ರಾರ್ಥನೆ, ಜಪಗಳಲ್ಲಿ ತೊಡಗುವ ಮಂದಿಯೂ ಇದ್ದಾರೆ.

ಇದೊಂದು ಕಠಿಣ ವ್ರತ ಎಂದೇ ಹೇಳಬೇಕು. ಮನೆಯಿಂದ ಬರುವ ಊಟ, ಉಪಾಹಾರ ಹೊರತುಪಡಿಸಿದರೆ, ಮನೆಯವರೊಂದಿಗೆ, ಮಸೀದಿಯಲ್ಲಿ ತಂಗುವವರೊಂದಿಗೆ ಅವರು ಹೆಚ್ಚು ಮಾತನಾಡುವುದಿಲ್ಲ.

ದಿನದ ಐದು ಹೊತ್ತು ಇತರರ ಜೊತೆ ಸೇರಿ ನಮಾಜು ಮಾಡುವುದರ ಜೊತೆಗೆ, ಬೆಳಗಿನ ಜಾವ 3.30ರಿಂದ 4.30ರವರೆಗೆ ವಿಶೇಷ ಪ್ರಾರ್ಥನೆ, ರಾತ್ರಿ ಅಲ್ಲಾಹುವಿನ ಜಪವನ್ನೂ ಅವರು ನಿಷ್ಠೆಯಿಂದ ಮಾಡುತ್ತಾರೆ. ಸಹವರ್ತಿ ಮುಸ್ಲಿಮರಿಗಿಂತಲೂ ಅವರು ಕಡಿಮೆ ನಿದ್ದೆ ಮಾಡುತ್ತಾರೆ. ಹೆಚ್ಚು ಪ್ರಾರ್ಥನೆ ಮಾಡುತ್ತಾರೆ. ಈ ಹತ್ತು ದಿನದ ವಿಶೇಷವೆಂದರೆ, ವ್ರತನಿಷ್ಠರೇ ಕುರಾನ್‌ ಪಠಣ ಮಾಡುವುದು. ಈ ವ್ರತ ಆಚರಣೆ ಮಾಡದವರು ಮಸೀದಿಗಳಲ್ಲಿ ಕುರಾನ್ ಓದುವುದನ್ನು ಆಲಿಸುತ್ತಾರೆ.

ನಗರದ ಪೊಲೀಸ್‌ ವಸತಿ ಗೃಹಕ್ಕೆ ‘ಪ್ರಜಾವಾಣಿ’ ಮಂಗಳವಾರ ಭೇಟಿ ನೀಡಿದ ಸಮಯದಲ್ಲಿ 42 ವಯಸ್ಸಿನ ಕೆ.ಎಂ.ಶೇಖ್‌ ಗಂಭೀರವದನರಾಗಿ ನಮಾಜ್‌ ಮಾಡುತ್ತಿದ್ದರು.

ಪ್ರಾರ್ಥನೆ ಮುಗಿಸಿ ಮಾತನಾಡಿದ ಅವರು, ‘ಈ ಹತ್ತು ದಿನಗಳಲ್ಲಿ ನಾವು ಮಸೀದಿಯ ಆವರಣವನ್ನು ದಾಟುವುದಿಲ್ಲ. ದೈಹಿಕವಾಗಿ ಅಷ್ಟೇ ಅಲ್ಲದೆ, ನಸಿಕವಾಗಿಯೂ ನಾವು ಮನೆ, ಸಂಬಂಧಿಕರಿಂದ ದೂರವಿರುತ್ತೇವೆ. ಅದು ಅಲ್ಲಾಹುವನ್ನು ಒಲಿಸಿಕೊಳ್ಳುವ ಏಕೈಕ ನಿಕಟ ಧ್ಯಾನ, ಪ್ರಾರ್ಥನೆಯ ದಾರಿ’ ಎಂದರು.

‘ಹತ್ತು ದಿನ ಆತ್ಮಶೋಧಕ್ಕೇ ಮೀಸಲು. ಪ್ರಾಯಶ್ಚಿತ್ತಕ್ಕೆ ಮೀಸಲು. 20ನೇ ದಿನದ ಸಂಜೆಯಿಂದ 29ನೇ ದಿನದ ರಾತ್ರಿ ಚಂದ್ರನನ್ನು ನೋಡುವವರೆಗೂ ಈ ವ್ರತ ಮಾಡುತ್ತೇವೆ’ ಎಂದು ಅವರು ವಿವರಿಸಿದರು.

ಐವರು ಬಾಲಕರ ವ್ರತ: ಹೈಸ್ಕೂಲ್‌ ವಿದ್ಯಾರ್ಥಿಗಳಾದ ಆರ್‌.ಶ್ವಾಯಬ್‌ ಅಹ್ಮದ್‌, ಮೊಹ್ಮದ್ ಮುಜಮಿಲ್‌, ಮೊಹ್ಮದ್‌ ಫರ್ಹಾನ್‌ ಮತ್ತು ಮೊಹ್ಮದ್‌ ಜಾವಿದ್‌ ಕೂಡ ಮೂರು ದಿನಗಳ ಕಾಲ ಅದೇ ವ್ರತವನ್ನು ಆಚರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಹಿರಿಯರಾದ ಮೊಹ್ಮದ್‌ ಖಲೀಲ್‌, ‘ಹತ್ತು ದಿನ ಕಡ್ಡಾಯವಾಗಿ ವ್ರತ ಆಚರಿಸಬೇಕು. ಆದರೆ ಆಗದೆ ಇದ್ದವರು ತಮಗೆ ಆಗುವಷ್ಟು ದಿನ ವ್ರತಾಚರಣೆ ಮಾಡಬಹುದು.

ಈ ನಾಲ್ವರು ಹುಡುಗರು ಮೂರು ದಿನ ಕಾಲ ಮಸೀದಿಯಲ್ಲೇ ಇದ್ದು ಪ್ರಾರ್ಥನೆ ಮಾಡಿದರು. ನಾನು ಮಾತ್ರ ಒಂದು ದಿನದ ಮಟ್ಟಿಗೆ ವಾಸವಿದ್ದೆ’ ಎಂದು ತಿಳಿಸಿದರು.

ಏನಿದು ‘ಇತಿಕಾಫ್‌’?

ಅಲ್ಲಾಹುವಿನ ನಿರಂತರ ಆರಾಧನೆ, ಘಟಿಸಿದ ಪಾಪಗಳಿಗೆ ಪ್ರಾಯಶ್ಚಿತಃ ಬೇಡುವುದು, ತಾಕ್‌ನ ಶೋಧ ಕೊನೆಯ 10 ದಿನಗಳನ್ನು ಮಸೀದಿಯಲ್ಲಿ ಕಳೆಯುವ ಉದ್ದೇಶ ಹೊಂದಿರುತ್ತವೆ.

ಕೆ.ಎಂ.ಶೇಖ್‌
ಕೆ.ಎಂ.ಶೇಖ್‌

ಷಬ್‌–ಎ–ಕದ್ರ್ ರಾತ್ರಿಯು ರಂಜಾನ್‌ ಮಾಸದ ಕೊನೆಯ ಐದು ರಾತ್ರಿಗಳಲ್ಲಿ ಅಂದರೆ, 21, 23,25,27 ಹಾಗೂ 29ನೇ ರಾತ್ರಿಯಲ್ಲಿ ಒಂದು ರಾತ್ರಿ ಆಗಿರುತ್ತದೆ. ಹೀಗಾಗಿ ಈ ರಾತ್ರಿಯ ಶೋಧಕ್ಕಾಗಿ ಹಾಗೂ ಅಲ್ಲಾಹುವಿನ ಆರಾಧನೆಗಾಗಿ ಬಹುತೇಕ ಮುಸ್ಲಿಮರು ಕೊನೆಯ 10 ದಿನಗಳನ್ನು ಮಸೀದಿಯಲ್ಲೆ ಕಳೆಯುತ್ತಾರೆ. ಅದಕ್ಕೆ ‘ಇತಿಕಾಫ್‌’ (ಒಂದು ಬಗೆಯ ವ್ರತ) ಎನ್ನುತ್ತಾರೆ.

* ತಿಕಾಫ್‌ ಆಚರಣೆ ಸಲುವಾಗಿ ಹತ್ತು ದಿನದಿಂದ ಮಸೀದಿಯಲ್ಲೇ ವಾಸವಿರುವುದು ಧನ್ಯತೆ ಮೂಡಿಸಿದೆ. ‍ಪಾಪಗಳಿಂದ ಪ್ರಾಯಶ್ಚಿತಃಕ್ಕೆ

ಇದು ಉತ್ತಮ ಮಾರ್ಗ

-ಕೆ.ಎಂ.ಶೇಖ್‌, ಡಿಎಆರ್‌ ಲೈನ್‌ ಮಸೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT