ಕನ್ನಡಕ್ಕಾಗಿ ಎಲ್ಲರೂ ಜವಾಬ್ದಾರಿ ಹೊರಲಿ

7
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿಕೆ

ಕನ್ನಡಕ್ಕಾಗಿ ಎಲ್ಲರೂ ಜವಾಬ್ದಾರಿ ಹೊರಲಿ

Published:
Updated:
Deccan Herald

ಹೊಸಪೇಟೆ: ‘ಕನ್ನಡ ಭಾಷೆಯ ಬೆಳವಣಿಗೆಗೆ ಎಲ್ಲರೂ ಸಮಾನ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ಭಾನುವಾರ ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಕನ್ನಡಿಗರು ಚರಿತ್ರೆಯಿಂದ ವಿಸ್ಮೃತಿಗೆ ಒಳಗಾಗಿದ್ದಾರೆ. ಆದರೆ, ಅನ್ಯ ಭಾಷಿಕರು ಹಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಶೇ 30ಕ್ಕಿಂತ ಕಡಿಮೆ ಕನ್ನಡ ಭಾಷಿಕರಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಅಗ್ರ ಭಾಷೆ ಆಗದಿರುವುದು ವಿಷಾದದ ಸಂಗತಿ’ ಎಂದರು.

‘ಅನೇಕ ಕನ್ನಡದ ಅರಸರು ಕನ್ಯಾಕುಮಾರಿ ವರೆಗೆ ಕನ್ನಡ ನಾಡನ್ನು ವಿಸ್ತರಿಸಿದ್ದರು ಎನ್ನುವುದು ಚರಿತ್ರೆಯಿಂದ ಗೊತ್ತಾಗುತ್ತದೆ. ಹಲವು ರಾಜ್ಯಗಳಲ್ಲಿ ಕನ್ನಡದ ಶಾಸನಗಳು ಸಿಕ್ಕಿವೆ. ಹೀಗಿದ್ದಾಗಲೂ ಗಡಿ ಭಾಗಗಳಲ್ಲಿ ಕನ್ನಡ ಬಲಿಷ್ಠವಾಗಿಲ್ಲ’ ಎಂದು ತಿಳಿಸಿದರು.

‘ತಂತ್ರಜ್ಞಾನದಿಂದ ಪುಸ್ತಕ, ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗಿದೆ. ಮೊಬೈಲ್‌ ಯಾವುದಕ್ಕೆ ಬಳಸಬೇಕು. ಯಾವುದಕ್ಕೆ ಬಳಸಬಾರದು ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಮೊಬೈಲ್‌ ಬಂದ ನಂತರ ಮಾನವೀಯ ಪ್ರಜ್ಞೆ ಕಡಿಮೆಯಾಗಿದೆ. ತಂತ್ರಜ್ಞಾನ ಮನುಷ್ಯ ಮನುಷ್ಯರ ನಡುವೆ ಕಂದಕ ಸೃಷ್ಟಿಸಿದೆ’ ಎಂದರು.

ಪ್ರಾಧ್ಯಾಪಕ ದಯಾನಂದ ಕಿನ್ನಾಳ್‌ ಅವರು ಬರೆದಿರುವ ‘ಸಂಬಳ’ ಕೃತಿ ಬಿಡುಗಡೆಗೊಳಿಸಿದ ಸಾಹಿತಿ ಚೋರನೂರು ಕೊಟ್ರಪ್ಪ, ‘ಸಮಕಾಲೀನ ಆಗು ಹೋಗು ಆಧರಿಸಿ ಕವನ, ಚುಟುಕು ಬರೆದರೆ ಅದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಕಿನ್ನಾಳ್‌ ಅವರ ಕೃತಿ ಅಂತಹ ಅನೇಕ ವಿಷಯಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

‘ಚುಟುಕುಗಳ ಮೂಲಕ ಕಿನ್ನಾಳ್‌ ಅವರು ಸಮಾಜವನ್ನು ವಿಡಂಬನೆ ಮಾಡಿದ್ದಾರೆ. ಚುಟುಕು ಅದು ಕುಟುಕು ಸಾಹಿತ್ಯ ಕೂಡ ಹೌದು. ಕಾರಣ ಅವುಗಳು ಅಷ್ಟು ಪರಿಣಾಮಕಾರಿಯಾಗಿ ಇರುತ್ತವೆ’ ಎಂದು ತಿಳಿಸಿದರು.

ಸಾಹಿತಿ ಹುರಕಡ್ಲಿ ಶಿವಕುಮಾರ ಮಾತನಾಡಿ, ‘ಸಾಮಾಜಿಕ ಪ್ರಜ್ಞೆ, ಮನುಷ್ಯನ ಸ್ವಭಾವ, ಭ್ರಷ್ಟಾಚಾರ, ಸಾಮಾಜಿಕ ಮಾನವೀಯತೆ, ವ್ಯಂಗ್ಯ–ವಿಡಂಬನೆ ‘ಸಂಬಳ’ ಕೃತಿಯಲ್ಲಿ ನೋಡಬಹುದು. ಎಲ್ಲ 168 ಚುಟುಕುಗಳು ಬಹಳ ಸೊಗಸಾಗಿವೆ. ಕೆಲವು ಚುಟುಕುಗಳು ಕವನಗಳಂತೆ ಭಾಸವಾಗುತ್ತವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ, ‘ದಯಾನಂದ ಕಿನ್ನಾಳ್‌ ಅವರು ಚೌಕಟ್ಟು ಮೀರಿ ಚುಟುಕುಗಳನ್ನು ರಚಿಸಿದ್ದಾರೆ. ಕಂದಾಯ ಇಲಾಖೆ ಭ್ರಷ್ಟ ಎಂಬಂತೆ ಚುಟುಕೊಂದರಲ್ಲಿ ಬರೆದಿದ್ದಾರೆ. ಆದರೆ, ಇಂದು ಎಲ್ಲ ವಲಯಗಳು ಭ್ರಷ್ಟಗೊಂಡಿವೆ. ಯಾವುದೋ ಒಂದನ್ನು ಉಲ್ಲೇಖಿಸಿ ಭ್ರಷ್ಟಾಚಾರದ ಆರೋಪ ಮಾಡುವುದು ತರವಲ್ಲ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರಿಗಳ ಜತೆಗೆ ಪ್ರಾಮಾಣಿಕರೂ ಇದ್ದಾರೆ’ ಎಂದರು.

‘ಇಂದು ಪ್ರತಿಯೊಂದು ಕ್ಷೇತ್ರಗಳು ಬಿಕ್ಕಟ್ಟು, ಸಮಸ್ಯೆ ಎದುರಿಸುತ್ತಿವೆ. ಸಾಹಿತಿಗಳಾದವರು ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ ಜನರ ಮುಂದಿಡುವ ಕೆಲಸ ಮಾಡಬೇಕು. ಅವಕಾಶ ಸಿಕ್ಕರೆ ರಾಜಕೀಯ ಪ್ರವೇಶಿಸಿ ಅದನ್ನು ಸರಿಪಡಿಸಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ ರಾಜಕಾರಣಿಗಳಾಗಿರಲಿಲ್ಲವೇ? ವ್ಯವಸ್ಥೆ ಭ್ರಷ್ಟಗೊಳ್ಳುತ್ತಿದೆ ಎಂದು ನೋಡಿ ಮಾತಾಡುವುದಕ್ಕಿಂತ ಅದರ ಒಳಹೊಕ್ಕು ಕೆಲಸ ಮಾಡಿ, ಶುದ್ಧೀಕರಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ಗೌರವ ಸಲಹೆಗಾರ್ತಿ ಎಸ್‌.ಡಿ. ಸುಲೋಚನಾ, ಗೌರವ ಅಧ್ಯಕ್ಷ ಜಿ. ಲಿಂಗಾರೆಡ್ಡಿ, ಸಾಹಿತಿಗಳಾದ ದಯಾನಂದ ಕಿನ್ನಾಳ್‌, ಮ.ಬ. ಸೋಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !