ಶುಕ್ರವಾರ, ಮಾರ್ಚ್ 5, 2021
30 °C
ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ

ನಿತ್ಯ ಸಂವಿಧಾನದ ಪೀಠಿಕೆ ಪಠಣವಾಗಲಿ: ಸಿದ್ದರಾಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕು ಆಡಳಿತದಿಂದ ಮಂಗಳವಾರ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ ಸರಳ, ಸಂಭ್ರಮದ ನಡುವೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಪೊಲೀಸ್‌, ಗೃಹರಕ್ಷಕ ದಳ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪಿವಿಎಸ್‌ಬಿಸಿ ಶಾಲೆ ಪ್ರಥಮ, ಅಶ್ವಿನಿ ಶಾಲೆ ದ್ವಿತೀಯ ಹಾಗೂ ಸರ್ಕಾರಿ ಪಿಯು ಕಾಲೇಜಿನ ತಂಡ ತೃತೀಯ ಸ್ಥಾನ ಪಡೆಯಿತು.

ಬಳಿಕ ಮಾತನಾಡಿದ ಸಿದ್ದರಾಮೇಶ್ವರ, ‘1950ರ ಜ. 26ರಂದು ಸಂವಿಧಾನ ಜಾರಿಗೆ ಬಂದ ದಿನ. ಅಂದಿನಿಂದ ಪ್ರತಿವರ್ಷ ಗಣರಾಜ್ಯೋತ್ಸವ ದಿನವಾಗಿ, ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. ವಿಶ್ವದಲ್ಲಿಯೇ ಭಾರತದ ಸಂವಿಧಾನದ ಶ್ರೇಷ್ಠವಾಗಿದೆ. ಇಡೀ ಜಗತ್ತಿಗೆ ಪ್ರಜಾಪ್ರಭುತ್ವ, ಜಾತ್ಯತೀತೆಯ ಮಹತ್ವ ಸಾರಿದೆ. ಸಂವಿಧಾನದ ಮಹತ್ವಪೂರ್ಣವಾದ ಪೀಠಿಕೆಯನ್ನು ಶಾಲಾ ವಿದ್ಯಾರ್ಥಿಗಳು ನಿತ್ಯ ಪ್ರಾರ್ಥನೆಯಲ್ಲಿ ಪಠಿಸಬೇಕು’ ಎಂದು ಹೇಳಿದರು.

‘ದೇಶದಲ್ಲಿ 200ಕ್ಕೂ ಹೆಚ್ಚು ಭಾಷೆಗಳಿವೆ. ಅನೇಕ ಮತ, ಪಂಥ, ಧರ್ಮಗಳಿವೆ. ಭೌಗೋಳಿಕ, ಸಾಮಾಜಿಕ, ಧಾರ್ಮಿಕ ವೈವಿಧ್ಯ ಇದೆ. ಆದರೆ, ಇಡೀ ದೇಶಕ್ಕೊಂದೇ ಸಂವಿಧಾನ ಇದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಭಾರತ. ಎಲ್ಲ ರಂಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಅಪಾರ ಸೈನ್ಯ ಬಲ ಹೊಂದಿದೆ. ವಿಶ್ವ ಗುರುವಾಗುವತ್ತ ಹೆಜ್ಜೆ ಇರಿಸಿದೆ’ ಎಂದು ತಿಳಿಸಿದರು.

‘2025ರ ವೇಳೆಗೆ ವಿಶ್ವದ ಅತಿ ದೊಡ್ಡ ಆರ್ಥಿಕ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂಬ ಚರ್ಚೆ ನಡೆಯುತ್ತಿದೆ. ಆ ಗುರಿ ಆದಷ್ಟು ಬೇಗ ತಲುಪೋಣ. ಸ್ವದೇಶಿ ವಸ್ತುಗಳನ್ನು ಬಳಸುತ್ತ ದೇಶದ ಪ್ರಗತಿಗೆ ಕಾರಣೀಭೂತರಾಗೋಣ. ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪ ರಾಷ್ಟ್ರಪತಿ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದರು.

‘ತುಂಗಭದ್ರಾ ನದಿ ದಂಡೆಯಲ್ಲಿ 15ನೇ ಶತಮಾನದಲ್ಲಿ ಸ್ಥಾಪನೆಗೊಂಡಿದ್ದ ವಿಜಯನಗರ ಸಾಮ್ರಾಜ್ಯ ಕಲೆ, ವಾಣಿಜ್ಯ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ. ಬೀಜಿಂಗ್‌ ನಂತರ ವಿಶ್ವದ ಅತಿ ದೊಡ್ಡ, ಸಿರಿವಂತ ನಗರವಾಗಿತ್ತು. ಅದರ ಹಿರಿಮೆ ಸಾರುವ ಸ್ತಬ್ಧಚಿತ್ರ ಈ ಸಲ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಕೊರೊನಾ ಮಹಾಮಾರಿಗೆ ಜಗತ್ತಿನ ಅನೇಕ ರಾಷ್ಟ್ರಗಳು ಲಸಿಕೆಗಾಗಿ ಹೆಣಗಾಡುತ್ತಿವೆ. ಆದರೆ, ಭಾರತದಲ್ಲಿ ಲಸಿಕೆ ಬಂದಿದೆ. ಕರ್ನಾಟಕ ಲಸಿಕೆ ವಿತರಣೆಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ದೇಶದ ಲಸಿಕೆ ಅನೇಕ ದೇಶಗಳಿಗೆ ಕಳುಹಿಸಿಕೊಡಲಾಗಿದೆ. ಈ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಎಲ್ಲರೂ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ಇರಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಡಿವೈಎಸ್ಪಿ ವಿ. ರಘುಕುಮಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು