ಬುಧವಾರ, ಮೇ 12, 2021
17 °C
ಜನರಿಗೆ ಅನಾನುಕೂಲ; ಸರ್ಕಾರವೇ ಹೊಣೆ

ಆರನೇ ವೇತನ ಆಯೋಗ ಜಾರಿ, ಕಿರುಕುಳ ತಡೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿ ಸಾರಿಗೆ ನೌಕರರ ಮುಷ್ಕರ ಕೊನೆಗೊಳಿಸಿ, ಜನರಿಗಾಗುತ್ತಿರುವ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿದರು.

‘ಸಾರಿಗೆ ನೌಕರರು ಈ ಹಿಂದೆ ಮುಷ್ಕರ ನಡೆಸಿದಾಗ ಹತ್ತು ಬೇಡಿಕೆಗಳ ಪೈಕಿ ಒಂಬತ್ತು ಬೇಡಿಕೆಗಳನ್ನು ಈಡೇರಿಸುವ ಭರವಸೆ ಸರ್ಕಾರ ನೀಡಿತು. ಆದರೆ, ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸುತ್ತೋಲೆ ಹೊರಡಿಸಿ, ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಇದರಿಂದ ರೋಸಿ ಹೋದ ಸಾರಿಗೆ ನೌಕರರು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಏ. 7ರಿಂದ ರಾಜ್ಯದಾದ್ಯಂತ ಮುಷ್ಕರ ನಡೆಸಲಾಗುವುದು ಎಂದು 22 ದಿನಗಳ ಮುಂಚೆಯೇ ಸರ್ಕಾರಕ್ಕೆ ತಿಳಿಸಿದ್ದರು. ಆದರೆ, ಸರ್ಕಾರ ಮೈಮರೆತು ಕುಳಿತಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಜನ ಅವರ ಊರುಗಳಿಗೆ ತೆರಳಲು ಬಹಳ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಸರ್ಕಾರವೇ ಹೊಣೆ’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಆರೋಪಿಸಿದ್ದಾರೆ.

‘ಸಾರಿಗೆ ನೌಕರರು ಬಹಳ ಕಡಿಮೆ ಸಂಬಳದಲ್ಲಿ ಸಂಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದ ಯಾವ ನಿಗಮದಲ್ಲೂ ಅವರಿಗೆ ಪೂರ್ಣ ವೇತನ ಕೈಸೇರುತ್ತಿಲ್ಲ. ಅವರ ಪರ ನಿಲ್ಲುವುದು ಸರ್ಕಾರದ ಕರ್ತವ್ಯ. ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಬೆಳಗಾವಿಯಲ್ಲಿ ಇತ್ತೀಚೆಗೆ ಸಭೆ ನಡೆಸಲು ಬಂದಿದ್ದ ರೈತ ಸಂಘದ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಬಂಧಿಸಿರುವ ಕ್ರಮ ಸರಿಯಲ್ಲ. ಇದು ಹಿಟ್ಲರ್‌ ಸರ್ಕಾರ’ ಎಂದು ಟೀಕಿಸಿದ್ದಾರೆ.

‘ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಮುಷ್ಕರ ನಿರತ ಸಾರಿಗೆ ನೌಕರರನ್ನು ಹೆದರಿಸುತ್ತಿದ್ದಾರೆ. ಬೇರೆಡೆ ವರ್ಗಾವಣೆ ಮಾಡಲಾಗುವುದು, ಅಮಾನತುಗೊಳಿಸಲಾಗುವುದು ಎಂದು ಬೆದರಿಸಿ ಒತ್ತಡ ಹೇರುತ್ತಿದ್ದಾರೆ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸರ್ಕಾರ ಈ ಕಡೆ ಗಮನಹರಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಸರ್ಕಾರ ರಸಗೊಬ್ಬರ ಬೆಲೆ ಏಕಾಏಕಿ ಏರಿಸಿ, ವಿರೋಧ ವ್ಯಕ್ತವಾಗುತ್ತಿದ್ದಂತೆ ತಾತ್ಕಾಲಿಕವಾಗಿ ಆದೇಶ ಹಿಂಪಡೆದಿದೆ. ಇದು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ನಿರ್ಧಾರ ಅನಿಸುತ್ತಿದೆ. ಬರುವ ದಿನಗಳಲ್ಲಿ ಒಂದುವೇಳೆ ರಸಗೊಬ್ಬರ ದರ ಹೆಚ್ಚಿಸಿದರೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್, ಮುಖಂಡರಾದ ಜೆ.ಮಲ್ಲಿಕಾರ್ಜುನ, ಅಯ್ಯಣ್ಣ, ಎಲ್.ಎಸ್.ರುದ್ರಪ್ಪ, ಜಗನ್, ಟಿ.ನಾಗರಾಜ್, ರಾಮಾಂಜಿನಿ, ಹೊಸಕೇರಿ ಸತೀಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು