ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಬದಲಾವಣೆ: ಕೊನೆಗೂ ಮಣಿದ ಆನಂದ್‌ ಸಿಂಗ್‌

ಖಾತೆ ಬದಲಾವಣೆಗೆ ಸೊಪ್ಪು ಹಾಕದ ಮುಖ್ಯಮಂತ್ರಿ ಬೊಮ್ಮಾಯಿ
Last Updated 24 ಆಗಸ್ಟ್ 2021, 9:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಖಾತೆ ಬದಲಿಸಬೇಕೆಂದು ಪಟ್ಟು ಹಿಡಿದಿದ್ದ ಸಚಿವ ಆನಂದ್‌ ಸಿಂಗ್‌ ಕೊನೆಗೂ ಮಣಿದಿದ್ದಾರೆ.

ಈ ಹಿಂದೆ ಹಂಚಿಕೆ ಮಾಡಲಾಗಿದ್ದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯನ್ನೇ ಮಂಗಳವಾರ ಬೆಂಗಳೂರಿನಲ್ಲಿ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವರಿಗೆ ಆ. 6ರಂದು ಖಾತೆ ಹಂಚಿಕೆ ಮಾಡಿದ್ದರು. ಎಲ್ಲರೂ ಕೊಟ್ಟ ಖಾತೆ ಸ್ವೀಕರಿಸಿದ್ದರು. ಆದರೆ, ಆನಂದ್‌ ಸಿಂಗ್‌ ಮಾತ್ರ ಸ್ವೀಕರಿಸಿರಲಿಲ್ಲ. ಖಾತೆ ಬಗ್ಗೆ ಬಿ.ಎಸ್‌. ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಭೇಟಿಯಾಗಿ ಗೋಳು ತೋಡಿಕೊಂಡಿದ್ದರು. ಆದರೆ, ಯಶಸ್ಸು ಸಿಕ್ಕಿರಲಿಲ್ಲ.

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಬಂದಾಗ ಹಾಜರಿದ್ದ ಆನಂದ್‌ ಸಿಂಗ್‌ ಸಾರ್ವಜನಿಕ ಸಭೆ, ಸಮಾರಂಭಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಕಚೇರಿಯ ನಾಮಫಲಕ ಕೂಡ ತೆಗೆಸಿ ಅಸಮಾಧಾನ ತೋಡಿಕೊಂಡಿದ್ದರು. ಇತ್ತೀಚೆಗೆ ಜಿಂದಾಲ್‌ ವಾಯುನೆಲೆಗೆ ಮುಖ್ಯಮಂತ್ರಿ ಬಂದಾಗ, ಕ್ಷೇತ್ರದಲ್ಲೇ ಇದ್ದರೂ ಅವರನ್ನು ಸ್ವಾಗತಿಸಲು ಹೋಗಿರಲಿಲ್ಲ.

ಖಾತೆ ಬದಲಿಸದಿದ್ದರೆ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಮಾತುಗಳನ್ನು ಆಪ್ತರು, ಬೆಂಬಲಿಗರ ಬಳಿ ಹೇಳಿಕೊಂಡಿದ್ದರು. ಆದರೆ, ಅವರ ಯಾವುದೇ ಒತ್ತಡ ತಂತ್ರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ಪಕ್ಷ ಸೊಪ್ಪು ಹಾಕಿಲ್ಲ.

ಮಂಗಳವಾರ ಖಾತೆ ಸ್ವೀಕರಿಸುವುದಕ್ಕೂ ಮುನ್ನ ಆನಂದ್‌ ಸಿಂಗ್‌, ಬೊಮ್ಮಾಯಿ, ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಭೇಟಿಯಾಗಿದ್ದಾರೆ. ಖಾತೆ ಸ್ವೀಕರಿಸುವಾಗ ಅವರೊಂದಿಗೆ ಸುರಪುರ ಶಾಸಕ ರಾಜೂಗೌಡ ಇದ್ದರು. ಆದರೆ, ಆನಂದ್‌ ಸಿಂಗ್‌ ಅವರ ಮೊಗದಲ್ಲಿ ಖುಷಿ ಕಾಣಿಸಲಿಲ್ಲ. ನಗರದಲ್ಲಿ ಅವರ ಕಚೇರಿ ಎದುರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಹಾಗಿದ್ದರೆ ಆಗಿದ್ದೇನು?:

‘ಆನಂದ್‌ ಸಿಂಗ್‌ ಸೇರಿದಂತೆ ಯಾವುದೇ ಶಾಸಕರ ಒತ್ತಡ ತಂತ್ರಕ್ಕೆ ಸೊಪ್ಪು ಹಾಕಬಾರದು. ಒಂದುವೇಳೆ ಅವರು ರಾಜೀನಾಮೆ ಕೊಟ್ಟರೆ ತಕ್ಷಣವೇ ಅದನ್ನು ಸ್ವೀಕರಿಸಬೇಕು. ಈ ರೀತಿ ಮಾಡಿದರೆ ಬೇರೆ ಯಾರೂ ಕೂಡ ಬ್ಲ್ಯಾಕ್‌ಮೇಲ್‌ ಮಾಡುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ ಸ್ಪಷ್ಟವಾಗಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ತಿಳಿಸಿತ್ತು. ಹೀಗಾಗಿ ಆನಂದ್‌ ಸಿಂಗ್‌ ಆಟ ನಡೆಯಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹೈಕಮಾಂಡ್‌ ಪ್ರತಿಯೊಬ್ಬ ಶಾಸಕರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದರಲ್ಲೂ ಎರಡೆರಡು ಸಲ ಪಕ್ಷಾಂತರ ಮಾಡಿರುವ ಆನಂದ್‌ ಸಿಂಗ್‌ ಬಗ್ಗೆ ಪಕ್ಷದಲ್ಲಿ ಒಳ್ಳೆಯ ಅಭಿಪ್ರಾಯಗಳಿಲ್ಲ. ಪಕ್ಷಕ್ಕಿಂತ ತಮ್ಮದೇ ಬೆಂಬಲಿಗರ ಪಡೆ ರಚಿಸಿಕೊಂಡಿರುವುದು ಪಕ್ಷದ ಗಮನಕ್ಕೆ ಬಂದಿದ್ದು, ಅದನ್ನು ಗಂಭೀರವಾಗಿ ತೆಗೆದುಕೊಂಡಿದೆ’ ಎಂದೂ ಅವರು ತಿಳಿಸಿದ್ದಾರೆ.

––––––

ಇರದ ಹೆಚ್ಚಿನ ಆಯ್ಕೆ
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಇರುವುದರಿಂದ ಆನಂದ್‌ ಸಿಂಗ್‌ ಅವರಿಗೆ ಕೊಟ್ಟ ಖಾತೆ ವಹಿಸಿಕೊಳ್ಳುವುದು ಬಿಟ್ಟರೆ ಹೆಚ್ಚಿನ ಆಯ್ಕೆ ಇರಲಿಲ್ಲ.ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್‌ ಸಿಂಗ್‌ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಈಗಲೂ ವಿಚಾರಣೆ ನಡೆಯುತ್ತಿದೆ. ಬಿಜೆಪಿಯನ್ನು ಎದುರು ಹಾಕಿಕೊಂಡು ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನ್ಯ ಪಕ್ಷಕ್ಕೆ ಹೋಗುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಇಷ್ಟೇ ಅಲ್ಲ, ಅನಗತ್ಯವಾಗಿ ಗೊಂದಲ ಮೈಮೇಲೆ ಎಳೆದುಕೊಳ್ಳುವುದರ ಬದಲು ಎರಡು ವರ್ಷ ಅಧಿಕಾರ ಅನುಭವಿಸಿ, ಮುಂದಿನ ಹೆಜ್ಜೆ ಇಡುವ ದೃಷ್ಟಿಯಿಂದ ಮನಸ್ಸು ಬದಲಾಯಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ರಾಜೀನಾಮೆ ಕೊಟ್ಟರೆ ವಿಜಯನಗರ ಜಿಲ್ಲೆ ಕಟ್ಟಲು ಸಾಧ್ಯವಾಗುವುದಿಲ್ಲ. ಕೊಟ್ಟ ಖಾತೆ ವಹಿಸಿಕೊಳ್ಳದೆ ಇರುವುದು ಸರಿಯಲ್ಲ ಎಂಬ ಭಾವನೆ ಜನರಲ್ಲಿ ದಟ್ಟವಾಗಿ ಬಂದದ್ದರಿಂದ ನಿಲುವು ಬದಲಾಯಿಸಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್‌ ಸೇರ್ಪಡೆಗೆಸಿದ್ದರಾಮಯ್ಯ ಅಸಮ್ಮತಿ
ಒಂದುವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ತೊರೆದು ಪುನಃ ಕಾಂಗ್ರೆಸ್‌ ಸೇರುವ ಯೋಚನೆಯಲ್ಲಿ ಆನಂದ್‌ ಸಿಂಗ್‌ ಇದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಜತೆ ಚರ್ಚಿಸಿದ್ದಾರೆ. ಅವರು ಸಮ್ಮತಿ ಕೂಡ ಸೂಚಿಸಿದ್ದಾರೆ. ಆದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ‘ಪಕ್ಷವನ್ನು ಧಿಕ್ಕರಿಸಿ ಹೋದವರನ್ನು ಯಾವುದೇ ಕಾರಣಕ್ಕೂ ಪುನಃ ಬರಮಾಡಿಕೊಳ್ಳುವುದು ಬೇಡ’ ಎಂದು ಖಡಾಖಂಡಿತವಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT