ಪಶ್ಚತ್ತಾಪಕ್ಕೆ ಚೆಕ್ ಕಳಿಸಿದ ವಿದೇಶಿ ಪ್ರವಾಸಿ!

7
ಹಂಪಿಯಲ್ಲಿ ನಡೆದ ಮದುವೆ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಅರಿವಿಲ್ಲದೆ ಕ್ಲಿಕ್ಕಿಸಿದ್ದ ಇಂಗ್ಲೆಂಡ್‌ನ ಪೀಟರ್‌ ಡೆವೆರೆಲ್‌

ಪಶ್ಚತ್ತಾಪಕ್ಕೆ ಚೆಕ್ ಕಳಿಸಿದ ವಿದೇಶಿ ಪ್ರವಾಸಿ!

Published:
Updated:
Deccan Herald

ಹೊಸಪೇಟೆ: ಅರಿವಿಲ್ಲದೆ ಮದುವೆ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದ ಇಂಗ್ಲೆಂಡ್‌ ಪ್ರಜೆ ಪೀಟರ್‌ ಡೆವೆರೆಲ್‌ ಎಂಬುವರು ಅದರ ಪಶ್ಚತ್ತಾಪಕ್ಕಾಗಿ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ವ್ಯವಸ್ಥಾಪಕರಿಗೆ ₨30 ಸಾವಿರ ಚೆಕ್‌ ಕಳಿಸಿದ್ದಾರೆ.

ವಿವಾಹ ಮಾಡಿಕೊಂಡ ವಧು–ವರರಿಗೆ 251 ಪೌಂಡ್‌, ಮದುವೆ ನಡೆಸಿಕೊಟ್ಟ ಅರ್ಚಕರಿಗೆ 51 ಪೌಂಡ್‌ ಹಾಗೂ ದೇವಸ್ಥಾನದ ಹೆಸರಿನಲ್ಲಿ 11 ಪೌಂಡ್‌ ಹೀಗೆ ಮೂರು ಪ್ರತ್ಯೇಕ ಚೆಕ್‌ಗಳನ್ನು ವ್ಯವಸ್ಥಾಪಕರಿಗೆ ಜು. 27ರಂದು ಕಳಿಸಿಕೊಟ್ಟಿದ್ದಾರೆ. ಆ ಚೆಕ್‌ಗಳು ಸೋಮವಾರ (ಆ.13) ದೇಗುಲದ ವ್ಯವಸ್ಥಾಪಕರ ಕೈಸೇರಿವೆ. ಈ ಒಟ್ಟು ಚೆಕ್‌ಗಳ ಮೊತ್ತ ಭಾರತದಲ್ಲಿ ಸುಮಾರು ₨30 ಸಾವಿರ ಆಗಲಿದೆ.

ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ಪೀಟರ್‌ 2017ರ ನವೆಂಬರ್‌ 17ರಂದು ಹಂಪಿಗೆ ಭೇಟಿ ಕೊಟ್ಟಿದ್ದರು. ಆ ದಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಮದುವೆ ನಡೆಯುತ್ತಿತ್ತು. ವಧು–ವರರು ಸೇರಿದಂತೆ ಅವರ ಕುಟುಂಬದವರು ಹೊಸ ಉಡುಪು ಹಾಗೂ ಮೈತುಂಬ ಆಭರಣಗಳನ್ನು ಧರಿಸಿಕೊಂಡಿದ್ದರು. ಅದನ್ನು ನೋಡಿದ ಪೀಟರ್‌, ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರಬಹುದು. ಅದಕ್ಕಾಗಿ ಎಲ್ಲರೂ ಸ್ಥಳೀಯ ಸಾಂಪ್ರದಾಯಿಕ ದಿರಿಸು ಧರಿಸಿರಬಹುದು ಎಂದು ಭಾವಿಸಿ ಮದುವೆ ಮನೆ ಪ್ರವೇಶಿಸಿ ವಧು–ವರರು ಹಾಗೂ ಅವರ ಸಂಬಂಧಿಕರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ನಂತರ ಅವರು ಅಲ್ಲಿದ್ದವರ ಪೈಕಿ ಒಬ್ಬರನ್ನು ಮಾತನಾಡಿಸಿದಾಗ ಮದುವೆ ಕಾರ್ಯಕ್ರಮ ಎಂಬುದು ಗೊತ್ತಾಗಿದೆ. ಇದು ಸಂಪೂರ್ಣ ಖಾಸಗಿ ಸಮಾರಂಭ ಎಂದು ಗೊತ್ತಾಗುತ್ತಿದ್ದಂತೆ ಮೌನ ವಹಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.

‘ಗೊತ್ತಿಲ್ಲದೆಯೇ ಮದುವೆ ಸಮಾರಂಭದಲ್ಲಿ ಮನಬಂದಂತೆ ಓಡಾಡಿ, ಅಲ್ಲಿದ್ದವರ ಛಾಯಾಚಿತ್ರಗಳನ್ನು ತೆಗೆದು ಅವರ ಮನಸ್ಸಿಗೆ ನೋವುಂಟು ಮಾಡಿದ್ದೇನೆ. ಅವರಿಗೆ ಅಗೌರವ ಸೂಚಿಸಿದ್ದೇನೆ. ಅದರ ಪಶ್ಚತ್ತಾಪಕ್ಕಾಗಿ ಚೆಕ್‌ಗಳನ್ನು ಕಳಿಸಿದ್ದೇನೆ. ವಧು–ವರರು, ಪೂಜಾರಿಯ ವಿಳಾಸ ನನಗೆ ಗೊತ್ತಿಲ್ಲ. ಹಾಗಾಗಿ ಈ ಚೆಕ್‌ಗಳನ್ನು ದೇಗುಲಕ್ಕೆ ಕಳಿಸಿದ್ದೇನೆ. ಅವುಗಳನ್ನು ಸಂಬಂಧಿಸಿದವರಿಗೆ ತಲುಪಿಸಬೇಕು. ಚೆಕ್‌ ಸ್ವೀಕರಿಸಿದ ನಂತರ ಎಲ್ಲರೂ ನಾನು ಮಾಡಿರುವ ತಪ್ಪು ಕ್ಷಮಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಎರಡು ಪುಟಗಳ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !