ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊರಕೆ ತಡೆಗೆ ಅನಂತಕುಮಾರ ಹೆಬ್ಬೆರಳಿಗೆ ದಾರ!

Last Updated 12 ನವೆಂಬರ್ 2018, 20:13 IST
ಅಕ್ಷರ ಗಾತ್ರ

ಹೊಸಪೇಟೆ: ‘ಅನಂತಕುಮಾರ ಅವರು ನಿದ್ರೆ ಮಾಡುವಾಗ ವಿಪರೀತ ಗೊರಕೆ ಹೊಡೆಯುತ್ತಿದ್ದರು. ಆ ಶಬ್ದದಿಂದ ನಾನು ಹಾಗೂ ನನ್ನ ಗೆಳೆಯರಿಗೆ ನಿದ್ರೆ ಬರುತ್ತಿರಲಿಲ್ಲ. ಅವರಿಗೆ ಗೊತ್ತಿಲ್ಲದ ಹಾಗೆ ಅವರ ಹೆಬ್ಬೆರಳಿಗೆ ದಾರ ಕಟ್ಟಿ, ಅದನ್ನು ಕಿಟಕಿಗೆ ಕಟ್ಟುತ್ತಿದ್ದೆವು. ಅದು ಸ್ವಲ್ಪ ಬಿಗಿಯಾದಾಗ ಗೊರಕೆ ಕಮ್ಮಿಯಾಗುತ್ತಿತ್ತು’

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ (ಎ.ಬಿ.ವಿ.ಪಿ.) ಅನೇಕ ವರ್ಷಗಳ ಕಾಲ ಅನಂತಕುಮಾರ ಅವರೊಂದಿಗೆ ಕೆಲಸ ನಿರ್ವಹಿಸಿದ ಮಂಜುನಾಥ ಷಾ ಅವರು ಅಗಲಿದ ಸ್ನೇಹಿತನನ್ನು ನೆನಪು ಮಾಡಿಕೊಂಡಿದ್ದು ಹೀಗೆ.

ಮಂಜುನಾಥ ಷಾ ಅವರು, ಅನಂತಕುಮಾರ ಅವರನ್ನು ತಮಾಷೆಯ ವಿಷಯದೊಂದಿಗೆ ನೆನಕೆ ಮಾಡಿಕೊಂಡರು. ಆದರೆ, ಅವರ ಮುಖದಲ್ಲಿ ನಗುವಿನ ಬದಲು ದುಃಖ ಮಡುಗಟ್ಟಿತ್ತು. ಪ್ರಿಯ ಮಿತ್ರನನ್ನು ಕಳೆದುಕೊಂಡ ಸಂಕಟ ಅವರ ಮುಖಚರ್ಯೆಯಲ್ಲಿ ಎದ್ದು ಕಾಣಿಸುತ್ತಿತ್ತು. ಮಾತು ಮೌನವಾಗಿ, ದುಃಖ ಉಮ್ಮಳಿಸಿ ಬರುತ್ತಿತ್ತು. ಅನಂತಕುಮಾರ ಜತೆಗೆ ಕಳೆದ ಪ್ರತಿಯೊಂದು ಕ್ಷಣಗಳನ್ನು ದುಃಖ ಭರಿತರಾಗಿಯೇ ‘ಪ್ರಜಾವಾಣಿ’ಯೊಂದಿಗೆ ಮುಕ್ತವಾಗಿ ಹಂಚಿಕೊಂಡರು.

‘ಹೆಬ್ಬೆರಳಿಗೆ ಕಟ್ಟಿದ ದಾರ ಬಿಗಿಯಾಗಿ, ಎಚ್ಚರವಾಗುತ್ತಿದ್ದಂತೆ, ‘ಏನ್ರೋ ಏನ್‌ ತಮಾಷೆ ಮಾಡ್ತೀರಿ. ಸುಮ್ಮನೆ ಮಲಗಲು ಸಹ ಬಿಡೊಲ್ಲ. ಇದೆಲ್ಲ ಸುಟ್ಟ ಮಂಜನ ಕಾರುಬಾರು. ಇದನ್ನು ಅವನು ಬಿಟ್ಟರೆ ಬೇರೆ ಯಾರು ಮಾಡುವುದಿಲ್ಲ’ ಎಂದು ಅನಂತಕುಮಾರ ಹೇಳಿ ಮತ್ತೆ ನಿದ್ರೆಗೆ ಜಾರುತ್ತಿದ್ದರು. ಅವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಎಲ್ಲರ ಜತೆಗೂ ಸದಾ ಹಸನ್ಮುಖಿಯಾಗಿ ಮಾತನಾಡುತ್ತಿದ್ದರು. ಎಂತಹ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ತಮಾಷೆ ಮಾಡುತ್ತಲೇ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

‘1984ರಲ್ಲಿ ಅವರು ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿದ್ದರು. ಆ ಸಂದರ್ಭದಲ್ಲಿ ನಾನು ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿದ್ದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಜತೆಯಾಗಿ ಪ್ರವಾಸ ಮಾಡಿ ಅನೇಕ ತರುಣರು ಪರಿಷತ್ತು ಸೇರುವಂತೆ ಮಾಡಿದೆವು. ಪ್ರವಾಸ ಮುಗಿದ ನಂತರ ಒಂದೇ ಸಣ್ಣ ಕೋಣೆಯಲ್ಲಿ ಮಲಗಿಕೊಳ್ಳುತ್ತಿದ್ದೆವು. ಏನು ಕೊಟ್ಟರೂ ಹೊಟ್ಟೆ ತುಂಬ ತಿನ್ನುತ್ತಿದ್ದರು. ಒಂದು ದಿನ ಪ್ರಚಾರ ಮುಗಿಸಿಕೊಂಡು ಬರುವಾಗ, ಇಬ್ಬರೂ ಸೇರಿಕೊಂಡು ಅರ್ಧ ಬಕೆಟ್‌ ಮೊಸರನ್ನ ತಿಂದಿದ್ದೆವು. ಆ ನೆನಪು ಸದಾ ನನಗೆ ಕಾಡುತ್ತಿರುತ್ತದೆ. ಅದು ಹೀಗೆ, ಇದು ಹೀಗೆ ಎಂದು ಯಾವುದಕ್ಕೂ ಹೆಸರಿಡುವ ಗುಣ ಅವರದಾಗಿರಲಿಲ್ಲ. ಅನ್ನ, ತಿಳಿ ಸಾಂಬಾರ ಕೊಟ್ಟರೂ ಮನಸ್ಸಿನಿಂದ ತಿನ್ನುತ್ತಿದ್ದರು’ ಎಂದರು.

‘ಅವರಿಗೆ ಜಾಮೂನು ಎಂದರೆ ಬಹಳ ಇಷ್ಟದ ಖಾದ್ಯವಾಗಿತ್ತು. ನಮ್ಮ ಅನೇಕ ಕಾರ್ಯಕರ್ತರು ಅವರಿಗೆ ಜಾಮೂನು ಮನೆಯಿಂದ ತಂದುಕೊಡುತ್ತಿದ್ದರು. ಮುದ್ದೆ ಸಹ ಅಷ್ಟೇ ಪ್ರೀತಿಯಿಂದ ತಿನ್ನುತ್ತಿದ್ದರು. ವಿದ್ಯಾರ್ಥಿ ಪರಿಷತ್ತಿನಲ್ಲಿದ್ದ ದಿನಗಳಿಂದಲೇ ಅವರು ಅದ್ಭುತ ವಾಗ್ಮಿಯಾಗಿದ್ದರು. ನಾನು ನಿಮ್ಮಂತೆ ಯಾವಾಗ ಮಾತನಾಡುತ್ತೇನೆ ಎಂದು ಒಂದು ಸಲ ಅವರನ್ನು ಕೇಳಿದೆ. ಅದಕ್ಕವರು ಮುಂದೊಂದು ದಿನ ನನಗಿಂತ ಒಳ್ಳೆಯ ಭಾಷಣಕಾರನಾಗುತ್ತಿ ಎಂದು ಹೇಳಿದ್ದರು. ಈಗಲೂ ನನಗೆ ಅವರಂತೆ ಅದ್ಭುತವಾಗಿ ಮಾತನಾಡುವ ಕಲೆ ಗೊತ್ತಿಲ್ಲ. ಒಂದು ಹಂತಕ್ಕೆ ಜನರಿಗೆ ತಿಳಿಯುವಷ್ಟರ ಮಟ್ಟಿಗೆ ಮಾತನಾಡುತ್ತೇನೆ’ ಎನ್ನುತ್ತಾರೆ ಮಂಜುನಾಥ.

‘ನಂತರ ಅವರು ಬಿಜೆಪಿಯಲ್ಲಿ ಸಕ್ರಿಯರಾದರು. ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ನಿನಗೆ ಏನು ಬೇಕು ಮಂಜು ಎಂದು ಕೇಳಿದರು. ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ರೆ ಮಾಡುತ್ತೇನೆ. ನನಗೆ ಏನು ಬೇಡ ಎಂದು ನಯವಾಗಿ ನಾನು ಹೇಳಿದ್ದೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದರು ಅವರ ಸ್ನೇಹಿತರು, ಜತೆಗೆ ಕೆಲಸ ಮಾಡಿದವರನ್ನು ಮರೆತಿರಲಿಲ್ಲ. ಅದು ಅವರ ದೊಡ್ಡ ಗುಣ’ ಎಂದು ವಿವರಿಸಿದರು.

‘ಶಿವಮೊಗ್ಗದಲ್ಲಿ ಒಂದು ಸಲ ಅಭ್ಯಾಸ ವರ್ಗ ಹಮ್ಮಿಕೊಂಡಿದ್ದಾಗ ಗೀತೆಯೊಂದರ ಮೊದಲ ಮೂರು ಸಲ ನಾನು ಬರೆದು ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದೆ. ಇನ್ನುಳಿದ ಎರಡು ಸಾಲು ಅವರು ಬರೆದು ಪೂರ್ಣಗೊಳಿಸಿದ್ದರು. ಅಂತಹ ಚಾಣಾಕ್ಷಮತಿ ಅವರಾಗಿದ್ದರು. ನಿಜವಾಗಲೂ ಇದು ಅವರು ಸಾಯುವ ವಯಸ್ಸು ಆಗಿರಲಿಲ್ಲ. ಆದರೆ, ವಿಧಿಯಾಟಕ್ಕೆ ಎಲ್ಲರೂ ತಲೆಬಾಗಲೇಬೇಕು’ ಎಂದು ಹೇಳಿ ಮೌನಕ್ಕೆ ಜಾರಿದರು.

ಮಂಜುನಾಥ ಷಾ ಅವರು ಸದ್ಯ ನಗರದ ಮಹಾವೀರ ಶಾಲೆಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಅವರನ್ನು ವಿದ್ಯಾರ್ಥಿ ಪರಿಷತ್ತಿಗೆ ಸೇರಿಸಿದವರೇ ಈ ಮಂಜುನಾಥ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT