ಬುಧವಾರ, ಸೆಪ್ಟೆಂಬರ್ 22, 2021
22 °C

ಫಲಿಸದ ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ ಯತ್ನ; ಬಳ್ಳಾರಿಗೆ ಸಿಗದ ಸಚಿವ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಗೆ ಸಿಗಲಿಲ್ಲ ಪ್ರಾತಿನಿಧ್ಯ. ಸಚಿವ ಸ್ಥಾನ ಗಿಟ್ಟಿಸಲು ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಕೈಗೂಡಲಿಲ್ಲ.

ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ತಕ್ಷಣದಿಂದಲೇ ಇಬ್ಬರೂ ಶಾಸಕರು ತೀವ್ರ ‘ಲಾಬಿ’ ನಡೆಸಿದ್ದರು. ಬಿಜೆಪಿ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರು ಸೋಮಶೇಖರರೆಡ್ಡಿಗೆ ಬೆಂಬಲವಾಗಿ ನಿಂತಿದ್ದರು. ವಿವಿಧ ಸಂಘಸಂಸ್ಥೆಗಳೂ ಜಿಲ್ಲೆಗೆ ಸಚಿವ ಸ್ಥಾನ ಬೇಕೇಬೇಕು ಎಂದು ಒತ್ತಾಯಿಸಿದ್ದವು.

2008ರಲ್ಲಿ ಅಧಿಕಾರದಲ್ಲಿದ್ದ ಬಿ.ಎಸ್‌.ಯಡಿಯೂರಪ್ಪನವರ ಸಂಪುಟದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಸಚಿವರಾಗಿದ್ದರು. ಅಲ್ಲದೆ, ಸೋಮಶೇಖರ ರೆಡ್ಡಿ ಕೆಎಂಎಫ್‌ ಅಧ್ಯಕ್ಷರಾಗಿದ್ದರು. ಅವರಿಗೂ ಕ್ಯಾಬಿನೆಟ್‌ ದರ್ಜೆ ಸ್ಥಾನಮಾನವಿತ್ತು.

ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಆರೋಪದ ಮೇಲೆ ಬಿ.ಎಸ್‌. ಯಡಿಯೂರಪ್ಪ ಸರ್ಕಾರ 2011ರಲ್ಲಿ ರಾಜೀನಾಮೆ ನೀಡಿದಾಗ ರೆಡ್ಡಿ ಸಹೋದರರ ಸಚಿವ ಸ್ಥಾನವೂ ಹೋಯಿತು. ಜನಾರ್ದನರೆಡ್ಡಿ ಸೆಪ್ಟೆಂಬರ್‌ 4ರಂದು ಬಂಧನಕ್ಕೊಳಗಾದರು. ಮರುದಿನವೇ, ಅಕ್ರಮ ಗಣಿಗಾರಿಕೆ ವರದಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರಿಂದ ಸ್ವಾಭಿಮಾನ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ ಎಂದು ಶ್ರೀರಾಮುಲು ರಾಜೀನಾಮೆ ಸಲ್ಲಿಸಿದ್ದರು. ಆನಂತರದ್ದು ಇತಿಹಾಸ...

ಹಿಂದಿನ ಬಿಎಸ್‌ವೈ ಸರ್ಕಾರದಲ್ಲಿ ಶ್ರೀರಾಮುಲು ಸಚಿವರಾಗಿದ್ದರು. ಈಗ ಬೊಮ್ಮಾಯಿ ಸಂಪುಟದಲ್ಲೂ ಅವರು ಸಚಿವರಾಗಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ್ದರಿಂದ ಚಿತ್ರದುರ್ಗ ಜಿಲ್ಲೆ ಪ್ರತಿನಿಧಿಸಿದ್ದಾರೆ. ಈಚೆಗೆ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಬೇರ್ಪಟ್ಟಿದ್ದು, ಅಲ್ಲಿಗೂ ಸಂಪುಟದಲ್ಲಿ ‍ಅವಕಾಶ ಸಿಕ್ಕಿದೆ. ಆನಂದ್‌ಸಿಂಗ್‌ ಮತ್ತೆ ಆ ಜಿಲ್ಲೆಯ ಪ್ರತಿನಿಧಿ.

ಬಳ್ಳಾರಿ ಜಿಲ್ಲೆಯಲ್ಲಿರುವ ಐವರು ಶಾಸಕರ ಪೈಕಿ ಇಬ್ಬರು ಬಿಜೆಪಿಯವರು. ಸೋಮಶೇಖರರೆಡ್ಡಿ 2008, 2018ರಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಸೋಮಲಿಂಗಪ್ಪ ಮೂರು ಸಲ (2004, 2008 ಮತ್ತು 2013) ಸಿರಗುಪ್ಪದಿಂದ ಆಯ್ಕೆಯಾಗಿದ್ದಾರೆ. ಆದರೂ ತಮ್ಮ ನಾಯಕರನ್ನು ಬಿಜೆಪಿ ವರಿಷ್ಠರು ಪರಿಗಣಿಸಲಿಲ್ಲ ಎಂಬ ಅಸಮಾಧಾನ ಅವರ ಬೆಂಬಲಿಗರಲ್ಲಿದೆ.

‘ಜಿಲ್ಲೆಯಲ್ಲಿ ಬಿಜೆಪಿ ಬೆಳೆಸುವಲ್ಲಿ ರೆಡ್ಡಿ ಸಹೋದರರ ಮಹತ್ವದ ಪಾತ್ರವಿದೆ. ಅವರನ್ನು ಜಡೆಗಣಿಸಿರುವುದರಿಂದ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಸೋಮಶೇಖರರೆಡ್ಡಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳದಿದ್ದರೆ ಜಿಲ್ಲೆಯಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸುವುದು ಕಷ್ಟ’ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ. ಸೋಮಶೇಖರರೆಡ್ಡಿ ಇದೇ ’ಗೇಮ್‌ ಕಾರ್ಡ್‌’ ಅನ್ನು ವರಿಷ್ಠರ ಮುಂದೆ ಬಳಸಿದ್ದರು. ಆದರೂ ಬಿಜೆಪಿ ನಾಯಕತ್ವ ಒತ್ತಡಕ್ಕೆ ಮಣಿದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು