ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಇನ್‌ ಮೈನಿಂಗ್‌ ಎಂಜಿನಿಯರಿಂಗ್‌ ಕೋರ್ಸ್‌ ಸೇರಿದ ಮೊದಲ ಹೆಣ್ಣು ಮಗಳು

ಮೈನಿಂಗ್‌ ಕೋರ್ಸ್‌ಗೆ ಗ್ರಾಮೀಣ ಬಾಲೆ!
Last Updated 1 ಜುಲೈ 2022, 8:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗ್ರಾಮೀಣ ಪ್ರದೇಶದ ಹೆಣ್ಣು ಮಗಳೊಬ್ಬಳು ಮೊದಲ ಬಾರಿಗೆ ‘ಡಿಪ್ಲೊಮಾ ಇನ್‌ ಮೈನಿಂಗ್‌ ಎಂಜಿನಿಯರಿಂಗ್‌’ ಕೋರ್ಸ್‌ಗೆ ಪ್ರವೇಶ ಪಡೆಯುವುದರ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರದಲ್ಲಿ ಹೊಸಪೇಟೆಯ ಟಿ.ಎಂ.ಎ.ಇ ಸಂಸ್ಥೆಯ ಪಾಲಿಟೆಕ್ನಿಕ್‌ನಲ್ಲಿ 2008ರಲ್ಲಿ ಈ ಕೋರ್ಸ್‌ ಆರಂಭಿಸಲಾಗಿದೆ. ಆದರೆ, ಇದುವರೆಗೆ ಅಲ್ಲಿ ಓದಿದವರೆಲ್ಲರೂ ಗಂಡು ಮಕ್ಕಳೇ. ಆದರೆ, ತಾಲ್ಲೂಕಿನ ಜಂಬುನಾಥಹಳ್ಳಿ ಎಂ.ಎಂ.ಎಲ್‌. ಕ್ಯಾಂಪಿನ ತಾಯಮ್ಮ ಅವರು ಪ್ರಸಕ್ತ ಸಾಲಿನಲ್ಲಿ ಈ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಈ ಕೋರ್ಸ್‌ ಆಯ್ಕೆ ಮಾಡಿಕೊಂಡ ಮೊದಲ ಹೆಣ್ಣು ಮಗಳು ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಒಟ್ಟು 60 ಮಕ್ಕಳು ಪ್ರವೇಶ ಪಡೆದಿದ್ದಾರೆ. ತಾಯಮ್ಮ ಹೊರತುಪಡಿಸಿ ಮಿಕ್ಕಳಿದವರೆಲ್ಲರೂ ಗಂಡು ಮಕ್ಕಳೇ. ಆದರೆ, ಇದೇ ಕೋರ್ಸ್‌ ಮಾಡಬೇಕೆಂಬ ಹಟದಿಂದ ಇದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

‘ರಾಜ್ಯದ ಹಟ್ಟಿ, ಕೆ.ಜಿ.ಎಫ್‌ ಹಾಗೂ ಹೊಸಪೇಟೆಯಲ್ಲಿ ಮಾತ್ರ ಈ ಕೋರ್ಸ್‌ ಇದೆ. ಇದುವರೆಗೆ ಯಾವುದೇ ಹೆಣ್ಣು ಮಕ್ಕಳು ಈ ಕೋರ್ಸ್‌ ಆಯ್ಕೆ ಮಾಡಿಕೊಂಡಿರಲಿಲ್ಲ. ಆದರೆ, ತಾಯಮ್ಮ ಅವರು ಇದೇ ಕೋರ್ಸ್‌ ಕೇಳಿಕೊಂಡು ಬಂದಿದ್ದರು. ‘ಕೋರ್ಸ್‌ಗೆ ಪ್ರವೇಶ ಪಡೆದವರೆಲ್ಲರೂ ಹುಡುಗರಿದ್ದಾರೆ. ನೀವೊಬ್ಬರೇ ಹುಡುಗಿ. ಒಮ್ಮೆ ಯೋಚಿಸಿ‘ ಎಂದಾಗ, ‘ನೀವೆಲ್ಲರೂ ಇರುತ್ತೀರಲ್ಲ’ ಎಂದು ತಾಯಮ್ಮ ಒಂದೇ ಮಾತು ಹೇಳಿದರು. ತಾಯಮ್ಮಳ ಆತ್ಮವಿಶ್ವಾಸ ಹೇಳತೀರದು. ಖಂಡಿತವಾಗಿಯೂ ಅವರು ಯಶಸ್ಸು ಕಾಣುತ್ತಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ವಿ.ವೈ. ಉಮಾಶಂಕರ್‌ ಹೇಳಿದರು.

ಕೋರ್ಸ್‌ ಆಯ್ಕೆಗೆ ಕಾರಣವೇನು?:

ಅಂದಹಾಗೆ, ತಾಯಮ್ಮ ತಾಲ್ಲೂಕಿನ ಜಂಬುನಾಥಹಳ್ಳಿಯ ಎಂ.ಎಂ.ಎಲ್‌. ಕ್ಯಾಂಪಿನ ನಿವಾಸಿ. ಆ ಪ್ರದೇಶದ ಸುತ್ತಮುತ್ತ ಹಗಲು ರಾತ್ರಿ ಗಣಿಗಾರಿಕೆ ನಡೆಯುತ್ತದೆ. ಅದಿರು ಸಾಗಣೆ, ಸ್ಫೋಟದ ಶಬ್ದದ ನಡುವೆ ಬೆಳೆದವಳು. ಅಲ್ಲಿ ಕೆಲಸ ನಿರ್ವಹಿಸುತ್ತಿದ್ದವರೆಲ್ಲರೂ ಗಂಡು ಮಕ್ಕಳೇ. ಡಿಪ್ಲೊಮಾ ಇನ್‌ ಎಂಜಿನಿಯರಿಂಗ್‌ ಕೋರ್ಸ್‌ ಮಾಡಿದರೆ ಉದ್ಯೋಗಾವಕಾಶಕ್ಕೆ ಹೆಚ್ಚಿನ ಸಾಧ್ಯತೆಗಳಿವೆ ಎಂದು ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಂದ ತಿಳಿದುಕೊಂಡಿದ್ದಾಳೆ. ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ನಂತರ ಮೂರು ವರ್ಷದ ಕೋರ್ಸ್‌ ಮುಗಿಸಿದರೆ ತಕ್ಷಣವೇ ಉದ್ಯೋಗ ಸಿಗಬಹುದು. ಪೋಷಕರಿಬ್ಬರು ಕೂಲಿ ಕೆಲಸ ಮಾಡುತ್ತಾರೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಕುಟುಂಬಕ್ಕೆ ನೆರವಾಬಹುದು ಎಂಬ ಕಾಳಜಿ ತಾಯಮ್ಮ ಅವಳದು.

ಎಸ್ಸೆಸ್ಸೆಲ್ಸಿಯಲ್ಲಿ ಶೇ 80ರಷ್ಟು ಅಂಕಗಳನ್ನು ತಾಯಮ್ಮ ಗಳಿಸಿದ್ದಾರೆ. ಪೋಷಕರಿಗೆ ಐದು ಜನ ಹೆಣ್ಣು, ಒಬ್ಬ ಮಗನಿದ್ದಾನೆ. ತಾಯಮ್ಮ ನಾಲ್ಕನೆಯವಳು. ತಾಯಮ್ಮ ಇದೇ ಕೋರ್ಸ್‌ ಮಾಡುತ್ತಾನೆ ಎಂದಾಗ ಕುಟುಂಬದ ಎಲ್ಲ ಸದಸ್ಯರು ಬೆಂಬಲಕ್ಕೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT