ಶನಿವಾರ, ಏಪ್ರಿಲ್ 4, 2020
19 °C
ಕಡಿಮೆ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ

ಹನಕನಹಳ್ಳಿಯಲ್ಲಿ ಪಟ್ಟಣ ಗ್ರಾಹಕರನ್ನೂ ಸೆಳೆವ ‘ಹಳ್ಳಿ ಹೋಟೆಲ್’

ಕೆ. ಸೋಮಶೇಖರ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಇಲ್ಲಿ ಉಪಾಹಾರದ ಬೆಲೆ ₹10, ಅನ್ನ ಸಂಬಾರ್ ಊಟದ ಬೆಲೆ ₹20. ಹಾಗೆಂದ ಮಾತ್ರಕ್ಕೆ ಇದೇನು ಸರ್ಕಾರಿ ಸಹಭಾಗಿತ್ವದ ಇಂದಿರಾ ಕ್ಯಾಂಟೀನ್ ಅಲ್ಲ. ತಾಲ್ಲೂಕಿನ ಹನಕನಹಳ್ಳಿ ಗ್ರಾಮದ ಸಿಂಗಟಾಲೂರು ವೀರಭದ್ರೇಶ್ವರ ಹೋಟೆಲ್‌ ಕಡಿಮೆ ಬೆಲೆಯಲ್ಲೇ ಶುಚಿ ರುಚಿಯಾದ ಊಟ, ತಿಂಡಿ ನೀಡುವ ಮೂಲಕ ತನ್ನದೇ ಆದ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ.

ಪಟ್ಟಣದಿಂದ ಮೂರು ಕಿ.ಮೀ. ದೂರದ ಹನಕನಹಳ್ಳಿ ಗ್ರಾಮದಲ್ಲಿರುವ ಈ ಹೋಟೆಲ್‌ನ ಊಟ, ಉಪಾಹಾರದ ಬೆಲೆ ಪಟ್ಟಣದ ಹೋಟೆಲ್‌ಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಹೀಗಾಗಿ ಈ ಹಳ್ಳಿ ಹೋಟೆಲ್‌ ಪಟ್ಟಣದ ಗ್ರಾಹಕರನ್ನೂ ತನ್ನತ್ತ ಸೆಳೆಯುತ್ತಿದೆ.

ಇಲ್ಲಿ ₹10ಕ್ಕೆ ನಾಲ್ಕು ಇಡ್ಲಿ, ₹10ಕ್ಕೆ ನಾಲ್ಕು ಪೂರಿ, ಚಿತ್ರಾನ್ನ, ಪುಳಿಯೊಗರೆ, ವಗ್ಗರಣೆ, ಖಾರ ಮಂಡಕ್ಕಿಯ ಪ್ರತಿ ಪ್ಲೇಟ್‌ಗೆ ₹10. ವಡಾ ಒಂದಕ್ಕೆ ₹5, ಮಿರ್ಚಿಗೆ ₹3, ಮಧ್ಯಾಹ್ನದ ವೇಳೆ ಅನ್ನ, ಸಾಂಬರ್ ಊಟಕ್ಕೆ ₹20. ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಿಸುವ ಈ ಹೋಟೆಲ್‌ನಲ್ಲಿ ದಿನದ ಎಲ್ಲ ಸಮಯದಲ್ಲೂ ಗ್ರಾಹಕರು ಇರುತ್ತಾರೆ.

ಹನಕನಹಳ್ಳಿ ಗ್ರಾಮದ ಉತ್ತಂಗಿ ಕೋಗಳಿ ಗುರುಬಸವರಾಜ, ಸುಧಾ ದಂಪತಿ ಕಳೆದ 15 ವರ್ಷಗಳಿಂದ ಈ ಹೋಟೆಲ್‌ನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ತಿಂಡಿ, ಊಟದ ಬೆಲೆ ಕಡಿಮೆ ಇದ್ದರೂ ಗುಣಮಟ್ಟದಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ. ಕಾರ್ಮಿಕರು, ವಿದ್ಯಾರ್ಥಿಗಳು ಈ ಹೋಟೆಲ್‌ಗೆ ಕಾಯಂ ಗ್ರಾಹಕರು. ಮಧ್ಯಾಹ್ನದ ವೇಳೆ ಪಟ್ಟಣದ ಕೆಲ ನೌಕರ ವರ್ಗದವರೂ ಊಟಕ್ಕೆ ಇಲ್ಲಿಗೇ ಬರುತ್ತಾರೆ. ಬೆಳಿಗ್ಗೆ, ಸಂಜೆ ವಾಯು ವಿಹಾರಕ್ಕೆ ತೆರಳುವ ಪಟ್ಟಣದ ಜನರು ಈ ಹೋಟೆಲ್‌ಗೆ ತೆರಳಿ ಉಪಾಹಾರ, ಚಹಾ, ಕಾಫಿ ಸೇವಿಸಿ ಬರುತ್ತಾರೆ.

ಈ ಹೋಟೆಲ್‌ನಲ್ಲಿ ಬೆಳಿಗ್ಗೆ ಇಡ್ಲಿ, ವಡಾ, ಪೂರಿ, ಮಿರ್ಚಿ, ವಗ್ಗರಣೆ, ಮಧ್ಯಾಹ್ನ ಊಟಕ್ಕೆ ಅನ್ನ ಸಾಂಬರ್, ಉಪಾಹಾರಕ್ಕೆ ಪಲಾವ್, ಚಿತ್ರಾನ್ನ, ಪುಳಿಯೊಗರೆ, ಮೊಸರು ಅವಲಕ್ಕಿ, ಈರುಳ್ಳಿ ಬಜಿ ಸಿಗುತ್ತದೆ. ಸಂಜೆ ವೇಳೆ ಖಾರಾ ಮಂಡಕ್ಕಿ, ಅಲಸಂದಿ ವಡಾ, ಮಿರ್ಚಿ ಸಿದ್ಧವಿರುತ್ತದೆ. ಉಪ್ಪು, ಜೀರಿಗೆ ತುಂಬಿದ ಮಿರ್ಚಿ ಈ ಹೋಟೆಲ್‌ನ ಮತ್ತೊಂದು ಸ್ಪೆಷಲ್.

ರಾಷ್ಟ್ರೀಯ ಹಬ್ಬ, ವಿಶೇಷ ದಿನಾಚರಣೆ ಸಂದರ್ಭಗಳಲ್ಲಿ ಉಪಾಹಾರ ಪೂರೈಸಲು ಪಟ್ಟಣದ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಮುಖ್ಯಸ್ಥರು ಇದೇ ಹೋಟೆಲ್‌ಗೆ ಆರ್ಡರ್ ನೀಡುತ್ತಾರೆ. ಪಟ್ಟಣದ ಜಿ.ಬಿ.ಆರ್. ಕಾಲೇಜಿನ ಎನ್‌.ಸಿ.ಸಿ, ಎನ್‌.ಎಸ್‌.ಎಸ್‌. ವಿದ್ಯಾರ್ಥಿಗಳಿಗೆ ಇಲ್ಲಿಂದಲೇ ತಿಂಡಿಯ ಪಾರ್ಸಲ್‌ ಕಳಿಸಿಕೊಡಲಾಗುತ್ತಿದೆ.

‘ಕೆ.ಎಸ್‌.ಆರ್‌.ಟಿ.ಸಿ.ಯಲ್ಲಿ ಅಪ್ರೆಂಟಿಸ್‌ ತರಬೇತಿ ಪಡೆದರೂ ಉದ್ಯೋಗ ಸಿಗದ ಕಾರಣ ಹೋಟೆಲ್‌ ವೃತ್ತಿಗೆ ಬರಬೇಕಾಯಿತು. ಮನೆ ಮಂದಿಯಲ್ಲಾ ಹೋಟೆಲ್‌ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಗ್ರಾಮದಲ್ಲಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೇವೆ’ ಎಂದು ಗುರುಬಸವರಾಜ ಹೇಳಿದರು.

‘ಮಾರುಕಟ್ಟೆಯಲ್ಲಿ ಕಲಬೆರಕೆ ಪದಾರ್ಥಗಳ ಹಾವಳಿ ಹೆಚ್ಚಾಗಿರುವುದರಿಂದ ಉತ್ತಮ ದರ್ಜೆಯ ದಿನಸಿಗಳನ್ನು ನಾವೇ ಖರೀದಿಸಿ ತಂದು ಸಿದ್ಧಪಡಿಸಿಕೊಳ್ಳುತ್ತೇವೆ. ನಮಗೆ ಲಾಭ, ನಷ್ಟಕ್ಕಿಂತ ಗ್ರಾಹಕರನ್ನು ಸಂತೃಪ್ತಿಗೊಳಿಸುವುದು ಮುಖ್ಯ’ ಎನ್ನುತ್ತಾರೆ ಅವರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)