ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಡಿವೈಎಸ್ಪಿ ಎಸ್‌.ಎಸ್‌. ಕಾಶಿಗೌಡ ರಾಜೀನಾಮೆ?

ವಿಶ್ವ ಪ್ರಸಿದ್ಧ ಹಂಪಿ ಕೋರ್‌ ಜೋನ್‌ನಲ್ಲಿ ಸ್ಫೋಟಕ್ಕೆ ಐಜಿಪಿ ತೀವ್ರ ಅಸಮಾಧಾನ
Last Updated 24 ಅಕ್ಟೋಬರ್ 2020, 5:38 IST
ಅಕ್ಷರ ಗಾತ್ರ
ADVERTISEMENT
""

ಹೊಸಪೇಟೆ: ಹಂಪಿ ಡಿವೈಎಸ್ಪಿ ಎಸ್‌.ಎಸ್‌. ಕಾಶಿಗೌಡ ಅವರು ತಮ್ಮ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

‘ಹಂಪಿ ಕೋರ್‌ ಜೋನ್‌ನಲ್ಲಿ ನಿತ್ಯ ಸ್ಫೋಟ’ ಶೀರ್ಷಿಕೆ ಅಡಿ ಅ. 20ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಮರುದಿನ ಈ ಕುರಿತು ಸಂಪಾದಕೀಯವೂ ಪ್ರಕಟಗೊಂಡಿತ್ತು. ಬಳ್ಳಾರಿಯಲ್ಲಿ ಅ. 22ರಂದು (ಗುರುವಾರ) ಡಿವೈಎಸ್ಪಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆದಿದೆ. ಒಂದು ಹಂತದಲ್ಲಿ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅವರು ಡಿವೈಎಸ್ಪಿ ಕಾಶಿಗೌಡ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಮನನೊಂದು ಕಾಶಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ದೃಢಪಡಿಸಿವೆ.

‘ರಾಯಚೂರಿನ ಯಾಪಲದಿನ್ನಿ ಠಾಣೆಯಿಂದ ಕೆಲಸ ಆರಂಭಿಸಿದ ನಾನು ರಾಜ್ಯದ ಸುಮಾರು 37 ಕಡೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಕೀರ್ತಿ, ಅಪಕೀರ್ತಿ ಎಲ್ಲವನ್ನೂ ಇಲಾಖೆಯಲ್ಲಿ ಪಡೆದಿರುವೆ. ಪಿಎಸ್‌ಐ ಇದ್ದಾಗ ಎರಡು ಸಲ ರಾಜೀನಾಮೆ ಕೊಟ್ಟಿದ್ದೆ. ರಾಜೀನಾಮೆ ನೀಡಿ ಓಡಿ ಹೋಗುವುದು ಹೇಡಿಗಳ ಲಕ್ಷಣವೆಂದು ತಿಳಿದು ಆ ವಿಚಾರ ಕೈಬಿಟ್ಟಿದ್ದೆ. ಆದರೆ, ಐಜಿಪಿ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದರಿಂದ ಹಂಪಿಯಲ್ಲಿ ನನ್ನ ಕೆಲಸ ಮುಕ್ತಾಯಗೊಳಿಸಲು ನಿರ್ಧರಿಸಿ ಈ ತೀರ್ಮಾನಕ್ಕೆ ಬಂದಿರುವೆ’ ಎಂದು ಶುಕ್ರವಾರ ಅವರು ಸಲ್ಲಿಸಿರುವ ರಾಜೀನಾಮೆಯಲ್ಲಿ ತಿಳಿಸಿದ್ದಾರೆ.

ಅವರು ವಾಟ್ಸ್ಯಾಪ್‌ನಲ್ಲಿ ಬರೆದುಕೊಂಡಿರುವ ಈ ಪತ್ರದ ಸಾರಾಂಶ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಕುರಿತು ಐಜಿಪಿ ನಂಜುಂಡಸ್ವಾಮಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. ಕಾಶಿಗೌಡ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ.

ಸ್ಥಳಕ್ಕೆ ಭೇಟಿ: ಹಂಪಿಗೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಕಾಳಘಟ್ಟ, ಧರ್ಮದಗುಡ್ಡದಲ್ಲಿ ನಿತ್ಯ ಸ್ಫೋಟ ನಡೆಸಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಜೀವ ಸಂಕುಲಕ್ಕೆ ಕಂಟಕ ಎದುರಾಗಿದೆ ಎಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವಿಷಯವನ್ನು ಸ್ಥಳೀಯ ರೈತರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

**
ಹಂಪಿ ಡಿವೈಎಸ್ಪಿ ರಾಜೀನಾಮೆ ಕೊಟ್ಟಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಅಧಿಕೃತವಾಗಿ ನನಗೆ ರಾಜೀನಾಮೆ ಪತ್ರ ಕೊಟ್ಟಿಲ್ಲ.
–ಸೈದುಲ್ಲಾ ಅಡಾವತ್‌, ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ವಾಟ್ಸಾಪ್‌ನಲ್ಲಿ ವೈರಲ್‌ ಆಗಿರುವ ರಾಜೀನಾಮೆ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT