ಶುಕ್ರವಾರ, ನವೆಂಬರ್ 22, 2019
20 °C

ಹಂಪಿ ಕನ್ನಡ ವಿ.ವಿ. ಪಿಎಚ್‌.ಡಿ. ಪ್ರವೇಶ ಪರೀಕ್ಷೆ ಬರೆದವರೆಲ್ಲ ಫೇಲ್‌!

Published:
Updated:

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಎಂ.ಎ.,ಪಿಎಚ್‌.ಡಿ. ಸಂಯೋಜಿತ ಕೋರ್ಸಿನ ಪ್ರವೇಶಕ್ಕಾಗಿ ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಹಾಜರಾದ ಎಲ್ಲ ವಿದ್ಯಾರ್ಥಿಗಳು ಫೇಲಾಗಿದ್ದಾರೆ!

ಆ. 21ರಂದು ನಡೆದ ಪರೀಕ್ಷೆಗೆ ಒಟ್ಟು 35 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 21 ವಿದ್ಯಾರ್ಥಿಗಳು ಸಂದರ್ಶನವೂ ಎದುರಿಸಿದ್ದರು. ಎರಡು ತಿಂಗಳ ಬಳಿಕ ಫಲಿತಾಂಶ ಬಂದಿದ್ದು, ಅಚ್ಚರಿ ಎಂಬಂತೆ ಎಲ್ಲರೂ ಅನುತೀರ್ಣಗೊಂಡಿದ್ದಾರೆ.

ಈ ಸಂಯೋಜಿತ ಕೋರ್ಸಿಗೆ ಶೈಕ್ಷಣಿಕ ಪ್ರಾಧಿಕಾರದ ಅನುಮತಿಯೇ ಇರಲಿಲ್ಲ ಎಂದು ಗೊತ್ತಾಗಿದೆ. ಹೀಗಿದ್ದರೂ ಪರೀಕ್ಷೆ ನಡೆಸಲಾಗಿದೆ. ಅಷ್ಟೇ ಅಲ್ಲ, ಇದೇ ವಿಭಾಗದಲ್ಲಿ ಸದ್ಯ ಐದನೇ ಸೆಮಿಸ್ಟರ್‌ನಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ನಾಲ್ಕು ವರ್ಷಗಳ ಈ ಕೋರ್ಸ್ ಅನ್ನು 2017ರಲ್ಲಿ ಆರಂಭಿಸಲಾಗಿದೆ. ಈ ಹಿಂದಿನ ಎರಡು ವರ್ಷ ನೇರ ಪ್ರವೇಶ ನೀಡಲಾಗಿತ್ತು. ಯು.ಜಿ.ಸಿ. ನಿಯಾಮವಳಿ ಪ್ರಕಾರ, ಈ ವರ್ಷ ಮೊದಲ ಸಲ ಪ್ರವೇಶ ಪರೀಕ್ಷೆ ನಡೆಸಲಾಗಿದೆ.

ಈ ಕುರಿತು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರನ್ನು ಸಂಪರ್ಕಿಸಿದಾಗ, ‘ನಿಯಮದಂತೆ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ಎಲ್ಲರೂ ಫೇಲಾಗಿದ್ದಾರೆ. ಯಾರಿಗಾದರೂ ಗೊಂದಲ, ಅನುಮಾನವಿದ್ದಲ್ಲಿ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಬಹುದು’ ಎಂದರು.

‘ಈ ಹಿಂದೆಯೇ ಕೋರ್ಸ್‌ ಆರಂಭಿಸಲಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಸಂಯೋಜಿತ ಕೋರ್ಸಿನ ವಿಭಾಗದ ಅನುಮತಿಗಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇಷ್ಟರಲ್ಲೇ ಅನುಮತಿ ಸಿಗಬಹುದು. ಯಾವ ವಿಭಾಗವೂ ಮುಚ್ಚುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)