ಹಂಪಿ ಉತ್ಸವ: ಮನಸೆಳೆದ ಕೃಷಿ, ಫಲಪುಷ್ಪ ಪ್ರದರ್ಶನ

ಶುಕ್ರವಾರ, ಮಾರ್ಚ್ 22, 2019
23 °C

ಹಂಪಿ ಉತ್ಸವ: ಮನಸೆಳೆದ ಕೃಷಿ, ಫಲಪುಷ್ಪ ಪ್ರದರ್ಶನ

Published:
Updated:
Prajavani

ಹಂಪಿ: ಹಂಪಿ ಉತ್ಸವದ ಪ್ರಯುಕ್ತ ಮಾತಂಗ ಪರ್ವತ ಮೈದಾನದಲ್ಲಿ ಕೃಷಿ, ಮೀನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಶನಿವಾರ ಆಯೋಜಿಸಿದ್ದ ಕೃಷಿ ಮತ್ತು ಫಲಪುಷ್ಪ ಪ್ರದರ್ಶನ ಜನರನ್ನು ಆಕರ್ಷಿಸಿತು.

ಸಿರಿಧಾನ್ಯ ರಾಶಿ ಪೂಜೆ, ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಕೃಷಿ ಭಾಗ್ಯ, ಸಮಗ್ರ ಜಲಾನಯನ ನಿರ್ವಹಣೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿ, ಎರೆಹುಳು ತೊಟ್ಟಿ, ಚೆಕ್‌ಡ್ಯಾಂ, ಕೂರಿಗೆ ಬಿತ್ತನೆ, ಕೃಷಿ ಯಂತ್ರಧಾರೆ ಪ್ರದರ್ಶನ ಕುರಿತು ರೈತರು ಮಾಹಿತಿಯನ್ನು ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ಒಕ್ಕಲುತನ ಇತ್ತೀಚೆಗೆ ಯಂತ್ರಗಳ ಮೇಲೆ ಆವಲಂಬಿಸಿದ್ದು, ಹಾಲಿ ಪ್ರದರ್ಶನದಲ್ಲಿ ಸಂಪ್ರದಾಯ ನೇಗಿಲು, ಎಡೆಕುಂಟೆ, ಕಡೆಗೋಲು, ಬೀಸುವ ಕಲ್ಲು, ಒನಕೆ, ವಿಶೇಷವಾಗಿ ಗಮನಸೆಳೆಯುವ ಮೂಲಕ ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಕೃಷಿ ಅಧಿಕಾರಿಗಳು ಮಾಡಿದ್ದಾರೆ’ ಎಂದು ರೈತ ಷಣ್ಮುಖಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿಧಾನ್ಯದಲ್ಲಿ ಅರಳಿದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಚಿತ್ರ ಕಂಡ ಇನ್ನುಕೆಲವರು ಮನಸೋತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೃಷಿ ವಸ್ತು ಪ್ರದರ್ಶನದಲ್ಲಿ ಗದಗ ನಗರದ ಪೂರ್ಣಿಮಾ ಸಿರಿಧಾನ್ಯ ಉತ್ಪನ್ನ ಅವರು ಸಿದ್ಧಪಡಿಸಿದ ಸಿರಿಧಾನ್ಯ ಅಡುಗೆ ಆಕರ್ಷಿಸಿತು. ಸಿರಿಧ್ಯಾನ್ಯ ಬರಗು ಫಲಾವ, ಸಾಮೆ ಮೊಸರನ್ನ ತಲಾ ₹ 30ಕ್ಕೆ ಪ್ಲೇಟ್‌, ಸಿರಿಧಾನ್ಯ ಗಂಜಿ ಒಂದು ಗ್ಲಾಸ್‌ ₹ 5ಕ್ಕೆ ಮಾರಾಟ ಮಾಡುತ್ತಿದ್ದರು.

ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪಾಲಂಕೃತ ವಿರೂಪಾಕ್ಷ ಗೋಪುರ, ಗುಲಾಬಿ ಹೂವಿನಲ್ಲಿ ಅರಳಿದ ಆಂಜನೇಯನ ಬೃಹತ್‌ ಚಿತ್ರ, ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಶ್ರೀಕೃಷ್ಣದೇವರಾಯ, ಕಲ್ಲಿನ ತೇರು, ಕಮಲ್‌ ಮಹಲ್‌, ಪುರಂದರ ದಾಸರು, ಕಿತ್ತೂರು ಚೆನ್ನಮ್ಮ ಸೇರಿದಂತೆ ವಿವಿಧ ಸಾಧಕರ ಆಕೃತಿಗಳು ಮತ್ತು ಶಿವಕುಮಾರ ಸ್ವಾಮೀಜಿ ಪುಷ್ಪಚಿತ್ರ ಜನರ ಮನಸೆಳೆದವು.

ಪ್ರದರ್ಶನದ ಒಂದು ಭಾಗದಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ವೀರಯೋಧರಿಗೆ ಪುಷ್ಪನಮನ ಮೂಲಕ ‘ಅಮರ್‌ ಜವಾನ್‌’ ಆಕೃತಿ ನಿರ್ಮಿಸಿದ್ದು ಆಕರ್ಷಕವಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !