ಶುಕ್ರವಾರ, ಜೂನ್ 25, 2021
25 °C
ಹೊರಬರದ ಜನ; ಖಾಲಿ, ಖಾಲಿ ರಸ್ತೆಗಳು; ಎಲ್ಲೆಲ್ಲೂ ಖಾಕಿ ಪಡೆ

ಪೂರ್ಣ ಲಾಕ್‌ಡೌನ್‌ಗೆ ಸಂಪೂರ್ಣ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ಹರಡುತ್ತಿರುವುದನ್ನು ತಡೆಯಲು ಜಿಲ್ಲೆಯಲ್ಲಿ ಘೋಷಿಸಿರುವ ಪೂರ್ಣ ಪ್ರಮಾಣದ ಲಾಕ್‌ಡೌನ್‌ನಿಂದ ಗುರುವಾರ ನಗರ ಸಂಪೂರ್ಣ ಸ್ತಬ್ಧಗೊಂಡಿತು.

ಬುಧವಾರ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ದಿನಸಿ, ತರಕಾರಿ, ಹಣ್ಣು, ಮಾಂಸ ಖರೀದಿಸಿ ಮನೆ ಸೇರಿದ ಸಾರ್ವಜನಿಕರು ಮನೆಯ ಹೊರಗೆ ಕಾಲಿಡಲಿಲ್ಲ. ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೇಲಿಂದ ಮೇಲೆ ಗಸ್ತು ತಿರುಗಿದರು. ಹೊರಗೆ ಬಂದವರ ವಾಹನಗಳನ್ನು ವಶಕ್ಕೆ ಪಡೆದರು. ಈಗಾಗಲೇ 150ಕ್ಕೂ ಹೆಚ್ಚು ವಾಹನ ವಶಪಡಿಸಿಕೊಂಡು, ನಾಲ್ಕು ಪ್ರಕರಣ ದಾಖಲಾಗಿದ್ದರಿಂದ ಗುರುವಾರ ಜನ ಹೊರಗೆ ಬರುವ ಹುಚ್ಚು ಧೈರ್ಯ ತೋರಲಿಲ್ಲ.

ಅಗ್ನಿಶಾಮಕ, ಗೃಹರಕ್ಷಕ, ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಹೊರಬರಲು ಅವಕಾಶ ಇಲ್ಲ. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ತುರ್ತು ಸೇವೆಗೆ ನಿಯೋಜನೆಗೊಂಡವರ ಪಾಸ್‌ ಪರಿಶೀಲಿಸಿ ಬಿಡುತ್ತಿರುವುದು ಕಂಡು ಬಂತು. ಅನ್ಯ ಭಾಗಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲೂ ಪೊಲೀಸರು ನಿಂತು, ಯಾರೊಬ್ಬರಿಗೂ ಒಳ ಪ್ರವೇಶಿಸಲು ಬಿಡಲಿಲ್ಲ.

ಬೆಳಿಗ್ಗೆ ದಿನಪತ್ರಿಕೆ, ಹಾಲು ಪೂರೈಕೆಗೆ ಅವಕಾಶ ಕಲ್ಪಿಸಲಾಗಿತ್ತು. ಔಷಧ ಮಳಿಗೆಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಹೋಟೆಲ್‌ಗಳು ಬಾಗಿಲು ತೆರೆದರೂ ಸಾರ್ವಜನಿಕರು ಹೋಗಿ ಖರೀದಿಸಲು ಅವಕಾಶ ನೀಡಿಲ್ಲ. ಜೊಮ್ಯಾಟೊ, ಸ್ವಿಗ್ಗಿ ಆ್ಯಪ್‌ ಮೂಲಕ ಬೇಡಿಕೆ ಸಲ್ಲಿಸಿದವರಿಗೆ ಉಪಾಹಾರ, ಊಟ ಪೂರೈಸಲಾಯಿತು. ಸರಕು ಸಾಗಣೆ, ಆಮ್ಲಜನಕ ಸಾಗಣೆ ವಾಹನಗಳು ಮುಕ್ತವಾಗಿ ಓಡಾಡಿದವು. ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ಆದರೆ, ಜನರ ಓಡಾಟವಿಲ್ಲದ ಕಾರಣ ಅವರಿಗೆ ಹೆಚ್ಚಿನ ಕೆಲಸ ಇರಲಿಲ್ಲ.

ಸದಾ ಜನರಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆ, ಸೋಗಿ ಮಾರುಕಟ್ಟೆ, ಗಾಂಧಿ ವೃತ್ತ, ಮೇನ್‌ ಬಜಾರ್‌ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲ ಬಿಡಾಡಿ ದನಗಳು, ಬೀದಿ ನಾಯಿಗಳು ಆಕ್ರಮಿಸಿಕೊಂಡಿದ್ದವು. ಎಲ್ಲೆಡೆ ಮೌನ ಆವರಿಸಿಕೊಂಡಿತ್ತು. ಆಂಬುಲೆನ್ಸ್‌, ಪೊಲೀಸ್‌ ಇಲಾಖೆಯ ವಾಹನಗಳ ಸೈರನ್‌ ಮಾತ್ರ ಆಗಾಗ ಕೇಳಿಸುತ್ತಿತ್ತು.

ಅರೆಬರೆ ಲಾಕ್‌ಡೌನ್‌ನಿಂದ ಇಷ್ಟು ದಿನ ಜನ ವಿವಿಧ ಕುಂಟು ನೆಪ ಹೇಳಿಕೊಂಡು ಬೇಕಾಬಿಟ್ಟಿ ಹೊರಗೆ ತಿರುಗಾಡುತ್ತಿದ್ದರು. ಸಂಪೂರ್ಣ ಲಾಕ್‌ಡೌನ್‌ನಿಂದ ಅವರಿಗೆ ಕಡಿವಾಣ ಬಿದ್ದಿದೆ. ಮನೆಯಲ್ಲೇ ಕೂರುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿ ಜನರ ಓಡಾಟ ನಿಲ್ಲಿಸಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹ. ಸಾಮಾನ್ಯರೊಂದಿಗೆ ಕೋವಿಡ್‌ ರೋಗಿಗಳು ಸಹ ಬೇಕಾಬಿಟ್ಟಿ ಹೊರಗೆ ತಿರುಗಾಡುತ್ತಿದ್ದರು. ಅದಕ್ಕೆ ಈಗ ಕಡಿವಾಣ ಬಿದ್ದಿದೆ. ಕನಿಷ್ಠ ಎರಡು ವಾರಗಳಾದರೂ ಇದೇ ರೀತಿ ಲಾಕ್‌ಡೌನ್‌ ಮುಂದುವರೆಸಬೇಕು’ ಎಂದು ಚಿತ್ತವಾಡ್ಗಿಯ ಅಜಯಕುಮಾರ, ಪಟೇಲ್‌ ನಗರದ ಬಸವರಾಜ ಸೇರಿದಂತೆ ಇತರೆ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು