ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ‘ದೇವದಾಸಿಯರ ಮಕ್ಕಳಿಗೆ ಉದ್ಯೋಗ ತರಬೇತಿ’

Last Updated 24 ಜನವರಿ 2021, 13:02 IST
ಅಕ್ಷರ ಗಾತ್ರ

ಹೊಸಪೇಟೆ: ‘ಪುನರ್ವಸತಿ ಕಲ್ಪಿತ ದೇವದಾಸಿ ಮಕ್ಕಳಿಗೆ ಉದ್ಯೋಗ ತರಬೇತಿ, ಮನೆ ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ನೆರವು ನೀಡಲಾಗುವುದು’ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳೆ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ನಿಗಮದಿಂದ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳು ಕೈಗೊಳ್ಳುವ ಚಟುವಟಿಕೆಗಳನ್ನು ಬೇರೆಯವರು ಬಂದು ನೋಡಬೇಕು. ಅವರು ಅದೇ ರೀತಿ ಕೆಲಸ ಮಾಡಿ ಮುಂದೆ ಬರಬೇಕು’ ಎಂದು ತಿಳಿಸಿದರು.

‘ಪುನರ್ವಸತಿ ಕಲ್ಪಿತ ದೇವದಾಸಿಯರಿಗೆ ಈಗಾಗಲೇ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಶಿಥಿಲಗೊಂಡ ಮನೆಗಳ ದುರಸ್ತಿಗೂ ನೆರವು ನೀಡಲಾಗುವುದು. ಅವರ ಮಕ್ಕಳಿಗೆ ವಿವಿಧ ರೀತಿಯ ತರಬೇತಿ ಕೊಟ್ಟು ಮುಖ್ಯ ವಾಹಿನಿಗೆ ತರಲಾಗುವುದು’ ಎಂದು ಹೇಳಿದರು.

‘ದೇವದಾಸಿ ಅನಿಷ್ಠ ಪದ್ಧತಿ. ಅದು ಸಂಪೂರ್ಣ ತೊಲಗಬೇಕು. ಇಲ್ಲದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮದುವೆಗಳನ್ನು ಅದ್ದೂರಿಯಾಗಿ ಮಾಡುವುದರ ಬದಲು, ಹೂವಿನ ಹಾರ ಬದಲಿಸಿಕೊಳ್ಳುವ ಮೂಲಕ ಸರಳವಾಗಿ ಮಾಡಬೇಕು. ದೇವದಾಸಿ ಮಕ್ಕಳು ವಿವಾಹವಾದಲ್ಲಿ ಹೆಣ್ಣು ಮಕ್ಕಳಿಗೆ ₹5 ಲಕ್ಷ ಹಾಗೂ ಗಂಡು ಮಕ್ಕಳಿಗೆ ₹3 ಲಕ್ಷ ಸಹಾಯ ಧನ ಒದಗಿಸಲಾಗುತ್ತಿದೆ’ ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ಮಾತನಾಡಿ, ‘ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ, ದಮನಿತ ಮಹಿಳೆಯರಿಗೆ, ಪುನರ್ವಸತಿ ಕಲ್ಪಿತ ದೇವದಾಸಿ ಮಹಿಳೆಯರಿಗೆ ಶೇಂಗಾ ಚಿಕ್ಕಿ ಘಟಕ, ಅಗರಬತ್ತಿ, ಮೇಣದಬತ್ತಿ, ಮಸಾಲೆ ಘಟಕ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ಪೂರೈಸುವ ಕೆಲಸ ನೀಡಲಾಗಿದೆ’ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ್, ಮಕ್ಕಳ ಕಲ್ಯಾಣ ಇಲಾಖೆಯ ನಾಗವೇಣಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷೆ ಹಂಪಮ್ಮ, ಕಾರ್ಯದರ್ಶಿ ಯಲ್ಲಮ್ಮ, ನಿಗಮದ ಯೋಜನಾಧಿಕಾರಿ ಗೋಪಾಲ ನಾಯ್ಕ್, ಯೋಜನಾ ಅನುಷ್ಠಾನ ಅಧಿಕಾರಿಗಳಾದ ಎಚ್.ಹೂಗಾರ್, ಹಾಲನಗೌಡ ಹಡಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT