ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಷಡ್ಯಂತ್ರ: ಬಿ.ಎಸ್. ಜಂಬಯ್ಯ ನಾಯಕ ಆರೋಪ

ಎಸ್ಟಿಯಲ್ಲಿ ಅನ್ಯ ಸಮುದಾಯಗಳ ಸೇರ್ಪಡೆಗೆ ವಿರೋಧ
Last Updated 19 ಮೇ 2019, 11:57 IST
ಅಕ್ಷರ ಗಾತ್ರ

ಹೊಸಪೇಟೆ: ‘ಪರಿಶಿಷ್ಟ ಪಂಗಡದಲ್ಲಿ (ಎಸ್ಟಿ) ಅನ್ಯ ಸಮುದಾಯದವರನ್ನು ಸೇರಿಸಲು ಮುಂದಾಗಿರುವುದು ರಾಜಕೀಯ ಷಡ್ಯಂತ್ರ’ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ನ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ಆರೋಪಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಟಿ ಸಮುದಾಯದಲ್ಲಿ ಅನ್ಯ ಸಮುದಾಯಗಳಾದ ಕುರುಬ, ಮೇದಾರ, ಗಂಗಾಮತ ಸೇರಿದಂತೆ ಇತರೆ ಸಮುದಾಯಗಳನ್ನು ಸೇರಿಸುವ ಹುನ್ನಾರ ನಡೆಸಲಾಗುತ್ತಿದೆ. ಒಂದುವೇಳೆ ಈ ಸಮುದಾಯಗಳು ಸೇರಿದರೆ ವಾಲ್ಮೀಕಿ ನಾಯಕ ಸಮುದಾಯಕ್ಕೆ ಅನ್ಯಾಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಒಂದುವೇಳೆ ಇತರೆ ಸಮುದಾಯಗಳನ್ನು ಎಸ್ಟಿಗೆ ಸೇರಿಸುವುದಾದರೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಮೀಸಲು ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು. ಆಗ ನಾಯಕ ಸಮುದಾಯ ಸೇರಿದಂತೆ ಇತರೆ ಸಮುದಾಯಗಳಿಗೆ ಅನುಕೂಲವಾಗುತ್ತದೆ. ಆದರೆ, ಈಗಿರುವ ಶೇ 3ರ ಮೀಸಲಾತಿಯ ಪ್ರಮಾಣದಲ್ಲೇ ಇತರೆ ಸಮುದಾಯಗಳನ್ನು ಸೇರಿಸಿದರೆ ಯಾರಿಗೂ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.

‘ಮೀಸಲು ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕೆಂದು ಈ ಹಿಂದೆ ಸಿದ್ದರಾಮಯ್ಯನವರಿಗೆ ಸಮಾಜದಿಂದ ಮನವಿ ಸಲ್ಲಿಸಿದ್ದೆವು. ಮೀಸಲು ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಲು ಆಗುವುದಿಲ್ಲ ಎಂದು ಹೇಳಿ ಸಿದ್ದರಾಮಯ್ಯನವರು ಮನವಿಯನ್ನು ತಿರಸ್ಕರಿಸಿದ್ದರು. ಆದರೆ, ಕೇರಳ, ತಮಿಳುನಾಡಿನಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಮೀಸಲು ಕಲ್ಪಿಸಲಾಗಿದೆ’ ಎಂದು ನಿದರ್ಶನ ನೀಡಿದರು.

‘ಎಸ್ಟಿಯಲ್ಲಿ ಇತರೆ ಸಮುದಾಯಗಳನ್ನು ಸೇರಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮೇ 21ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ರೂಪುರೇಷೆ ತಯಾರಿಸಲಾಗುವುದು. ಸಮಾಜದ ಎಲ್ಲ ಸಂಸದರು, ಶಾಸಕರು, ಮುಖಂಡರು ಪಾಲ್ಗೊಳ್ಳುವರು. ಸಮಾಜದ ಜನ ಭಾಗವಹಿಸಿ, ಸಭೆಯಲ್ಲಿ ಸಲಹೆ ಸೂಚನೆ ಕೊಡಬೇಕು’ ಎಂದು ಮನವಿ ಮಾಡಿದರು.

ಸಮಾಜದ ಮುಖಂಡರಾದ ಕಣ್ಣಿ ಶ್ರೀಕಂಠ, ಗುಜ್ಜಲ್‌ ನಿಂಗಪ್ಪ, ಗೋಸಲ ಬಸವರಾಜ,ಪೂಜಾರ ವೆಂಕೋಬ ನಾಯಕ, ಕಟಗಿ ಜಂಬಯ್ಯ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT