ಶುಕ್ರವಾರ, ಏಪ್ರಿಲ್ 16, 2021
31 °C
ಬಿಜೆಪಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರ

ಜನೌಷಧಿ ಜನಸ್ನೇಹಿ, ಆರೋಗ್ಯಸ್ನೇಹಿ: ಸಂಸದ ವೈ.ದೇವೇಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ‘ಜನೌಷಧಿ ಮಳಿಗೆಗಳಲ್ಲಿ ಸಿಗುವ ಎಲ್ಲ ಔಷಧ ಗುಣಮಟ್ಟದಿಂದ ಕೂಡಿವೆ. ಬೆಲೆ ಕೂಡ ಕಡಿಮೆ. ಜನೌಷಧಿ ಜನಸ್ನೇಹಿಯೂ ಹೌದು, ಆರೋಗ್ಯ ಸ್ನೇಹಿಯೂ ಹೌದು’ ಎಂದು ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಉಚಿತ ಹೃದಯ, ರಕ್ತದೊತ್ತಡ, ಮಧುಮೇಹ, ದಂತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರ ಸರ್ಕಾರವು ದೇಶದಾದ್ಯಂತ ಜನೌಷಧಿ ಮಳಿಗೆಗಳನ್ನು ತೆರೆಯಲು ಉತ್ತೇಜನ ನೀಡುತ್ತಿದೆ. ಜನೌಷಧಿ ಸಾರ್ವಜನಿಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಔಷಧಿಗಳು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿವೆ’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್ ಮಾತನಾಡಿ, ‘ಎಲ್ಲ ತಾಂತ್ರಿಕ ಗುಣಮಟ್ಟದ ಆರೋಗ್ಯ ಸೇವೆಗಳು ಈಗ ಎಲ್ಲ ನಗರಗಳಲ್ಲೂ ಪ್ರಾರಂಭವಾಗುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನ ಚಿಕಿತ್ಸೆ ನೀಡುವಂತಹ ತಜ್ಞ ವೈದ್ಯರ ಲಭ್ಯತೆ ವಿಜಯನಗರಕ್ಕೆ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ತಾಲ್ಲೂಕು ಆರೋಗ್ಯ ಇಲಾಖೆಯಿಂದ ಆಯುಷ್ ಆರೋಗ್ಯ ಯೋಜನೆ ಮೂಲಕ ತಜ್ಞರನ್ನು ಕರೆಸಿ, ಶಿಬಿರಗಳನ್ನು ನಡೆಸಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ಎದುರಿಸಿ ಸಾಕಷ್ಟು ಸಾವು-ನೋವು ಕಂಡಿದ್ದೇವೆ. ಕಾಯಿಲೆಗೆ ಮುನ್ನೆಚ್ಚರಿಕೆಯೇ ಮದ್ದು ಎನ್ನುವ ಪಾಠ ಕಲಿತಿದ್ದೇವೆ. ದೇಹದ ಕಾಳಜಿ ಇಲ್ಲದೇ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ರೋಗ ರುಜಿನಗಳು ಇತ್ತೀಚಿಗೆ ಅಧಿಕವಾಗಿವೆ’ ಎಂದರು.

‘ಹೃದಯ, ನರ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 30 ವರ್ಷ ದಾಟಿದ ನಂತರ ಆರೋಗ್ಯ ತಪಾಸಣೆ ಪ್ರತಿಯೊಬ್ಬರಿಗೂ ಅವಶ್ಯವಿರುತ್ತದೆ. ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕೋವಿಡ್ ಲಾಕ್‌ಡೌನ್‌ನಲ್ಲಿ ಹಗಲಿರುಳು ಶ್ರಮಿಸಿದ ತಾಲ್ಲೂಕು ಆರೋಗ್ಯ ಇಲಾಖೆಯ ವೈದ್ಯರು, ಗ್ರುಪ್ ‘ಡಿ’ ನೌಕರರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕವಿತಾ ಸಿಂಗ್, ಪಕ್ಷದ ಮುಖಂಡ ಧರ್ಮೇಂದ್ರ ಸಿಂಗ್, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಮಹಿಳಾ ಮೋರ್ಚಾ ತಾಲ್ಲೂಕು ಅಧ್ಯಕ್ಷೆ ಭಾರತಿ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯ ಶೋಭಾ ನಗರಿ, ಶಶಿಧರ ಸ್ವಾಮಿ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಲೀಂ, ಮುಖಂಡ ಸಾಲಿ ಸಿದ್ದಯ್ಯ ಸ್ವಾಮಿ, ಹೃದಯರೋಗ ತಜ್ಞ ಷಣ್ಮುಗ ಹಿರೇಮಠ್, ದಂತ ವೈದ್ಯ ರಾಘವೇಂದ್ರ ಕಟ್ಟಿ, ಸ್ತ್ರೀರೋಗ ತಜ್ಞೆ ಡಾ.ಮೆಹಬೂಬಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು