ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀರ್ತನೆಯಿಂದ ಬಂಡಾಯ ಸಾರಿದ ಕನಕದಾಸ’

ವಿವಿಧ ಕಡೆಗಳಲ್ಲಿ ಸಂತ ಕನಕದಾಸ ಜಯಂತಿ ಆಚರಣೆ
Last Updated 3 ಡಿಸೆಂಬರ್ 2020, 10:39 IST
ಅಕ್ಷರ ಗಾತ್ರ

ಹೊಸಪೇಟೆ: ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುರುವಾರ ಕನಕದಾಸ ಜಯಂತಿ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

‘ಕೀರ್ತನೆಗಳನ್ನು ಮಾಧ್ಯಮವಾಗಿ ಬಳಸಿಕೊಂಡು ಸಾಮಾಜಿಕ ಬಂಡಾಯ ಸಾರಿದ ಮಹಾನ್‌ ಸಂತ ಕನಕದಾಸರು’ ಎಂದು ಪ್ರಾಧ್ಯಾಪಕ ವೈ.ಎಂ.ಯಾಕೊಳ್ಳಿ ತಿಳಿಸಿದರು.

ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ. ಇದು ನಾವು ಮಾಡಿಕೊಂಡಿರುವ ಕುಲದ ವ್ಯವಸ್ಥೆ. ವ್ಯಕ್ತಿಯನ್ನು ಜಾತಿಯಿಂದ ನೋಡುವುದಲ್ಲ. ವ್ಯಕ್ತಿ ಮಾಡಿರುವ ಸಾಧನೆಯಿಂದ, ವ್ಯಕ್ತಿತ್ವದಿಂದ ನೋಡಬೇಕು ಎಂದು ಕನಕದಾಸರು ಹೇಳಿದ್ದಾರೆ’ ಎಂದು ನೆನಪಿಸಿದರು.

‘ಕನಕದಾಸರನ್ನು ಒಂದೇ ಆಯಾಮದಿಂದ ನೋಡಲು ಸಾಧ್ಯವಿಲ್ಲ. ವಚನಕಾರರ ಜೊತೆಯಲ್ಲಿ ಬಂದ ಕ್ರಾಂತಿಕಾರರು, ಸಮಾಜವಿಜ್ಞಾನಿ, ದಾಸರು, ಕೀರ್ತನಕಾರರು, ವಿಚಾರವಾದಿ, ಕವಿಗಳು, ದಾರ್ಶನಿಕರಾದ ಕನಕದಾಸರು ಭಕ್ತಿಪಂಥದಲ್ಲಿ ಬಂದಂಥ ವ್ಯಕ್ತಿಯಾದರೂ ಸಹ ಭಕ್ತಿಪಂಥದಲ್ಲಿ ಇರುವ ಅನೇಕ ಆಚಾರ-ವಿಚಾರಗಳನ್ನು ವಿರೋಧಿಸಿದಂಥವರು. ಬಸವಣ್ಣನವರ ನಂತರ ಬಂದ ಬಂಡಾಯಕಾರರು ಕನಕದಾಸರು’ ಎಂದರು.

ಕುಲಸಚಿವ ಎ.ಸುಬ್ಬಣ್ಣ ರೈ, ‘ಹರಿದಾಸರು, ಕನಕದಾಸರು, ಪುರಂದರದಾಸರ ಕೀರ್ತನೆಗಳು ಪ್ರಸ್ತುತ ಸಮಾಜಕ್ಕೆ ತುಂಬ ಅವಶ್ಯಕವಾಗಿವೆ. ಅವರ ಚಿಂತನೆಗಳು ಈ ಸಂದರ್ಭದಲ್ಲಿ ನಾವು ಯಾವ ನೆಲೆಯಲ್ಲಿ, ಯಾವ ಆಯಾಮಗಳಲ್ಲಿ ನೋಡಬೇಕೆನ್ನುವುದು ಪ್ರಮುಖವಾಗುತ್ತದೆ’ ಎಂದು ಹೇಳಿದರು.

ಹಾಲುಮತ ಅಧ್ಯಯನ ಪೀಠದ ಸಂಚಾಲಕ ಎಫ್.ಟಿ.ಹಳ್ಳಿಕೇರಿ, ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕಿ ಜ್ಯೋತಿ, ಸಂಶೋಧನಾ ವಿದ್ಯಾರ್ಥಿ ಸಂಗಮೇಶ ಇದ್ದರು.

ತಾಲ್ಲೂಕು ಆಡಳಿತ:

ನಗರದ ತಾಲ್ಲೂಕು ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮಾಲಾರ್ಪಣೆ ಮಾಡಿದರು. ಬಳಿಕ ಕನಕದಾಸರ ವೃತ್ತದಲ್ಲಿನ ಪುತ್ಥಳಿಗೂ ಪುಷ್ಪಗೌರವ ಸಲ್ಲಿಸಿದರು.

‘ಕೋವಿಡ್‌ ಕಾರಣಕ್ಕಾಗಿ ಈ ವರ್ಷ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ’ ಎಂದು ವಿಶ್ವನಾಥ್‌ ಹೇಳಿದರು. ಕಂದಾಯ ಅಧಿಕಾರಿ ಮಲ್ಲಿಕಾರ್ಜುನಗೌಡ, ಕುರುಬ ಸಮಾಜದ ಮುಖಂಡರಾದ ಧರ್ಮನಗೌಡ, ಅಯ್ಯಾಳಿ ತಿಮ್ಮಪ್ಪ ಇದ್ದರು.

ಕಾರಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ:

ಮುಖ್ಯಶಿಕ್ಷಕ ಎಚ್‌. ಗಾದಿಲಿಂಗಪ್ಪ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ‘ಕರ್ನಾಟಕ ಕಂಡ ಮಹಾನ್ ಸಂತರಲ್ಲಿ ಕನಕದಾಸರು ಒಬ್ಬರು. ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ’ ಎಂದರು.

‘ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಮೂಢನಂಬಿಕೆಗಳ ವಿರುದ್ಧ ಹೋರಾಡಿದಂಥ ಧೀಮಂತ ದಾಸರಲ್ಲಿ ಕನಕದಾಸರು ಒಬ್ಬರು’ ಎಂದು ತಿಳಿಸಿದರು.

ಶಿಕ್ಷಕರಾದ ಪ್ರಕಾಶ್, ಬಸಪ್ಪ ಬಜಂತ್ರಿ, ಹೊನ್ನಪ್ಪ, ಸೋಮಣ್ಣ, ಭಾಗ್ಯಲಕ್ಷ್ಮಿ, ವಿ.ಎಸ್.ವಾಣಿ, ಜರೀನಾ ಬೇಗಂ, ತಾರಾಮತಿ, ವಾಣಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT