ಮೇವಿಗೆ ಕನಕಗಿರಿಯಿಂದ ಹಂಪಿಗೆ ಬಂದರು!

ಹೊಸಪೇಟೆ: ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದೆ ಮೇವು ಸಿಗದ ಕಾರಣ ಕನಕಗಿರಿಯ ಕೆಲ ಕುಟುಂಬಗಳು ನೂರಾರು ದನ–ಕರುಗಳೊಂದಿಗೆ ತಾಲ್ಲೂಕಿನ ಹಂಪಿ ಹುಲ್ಲುಗಾವಲು ಪ್ರದೇಶಕ್ಕೆ ವಲಸೆ ಬಂದಿದ್ದಾರೆ.
ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡು ಬಿಟ್ಟಿದ್ದು, ಹುಲ್ಲುಗಾವಲು ಪ್ರದೇಶ ಹಾಗೂ ಕುರುಚಲು ಕಾಡಿನಲ್ಲಿ ನೂರಾರು ಜಾನುವಾರುಗಳು ಮೇಯುತ್ತಿರುವುದು ಕಂಡು ಬರುತ್ತಿದೆ. ಹಂಪಿಯ ಹಚ್ಚ ಹಸಿರಿನ ಪರಿಸರದಲ್ಲಿ ಮೇವು ತಿಂದು, ಸ್ವಚ್ಛಂದವಾಗಿ ಅಲ್ಲಿಯೇ ವಿಹರಿಸುತ್ತಿವೆ. ಸ್ಮಾರಕಗಳನ್ನು ವೀಕ್ಷಿಸಲು ಬಂದವರು ದನಗಳ ಹಿಂಡು ನೋಡಿ ಅವುಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಾರೆ.
ಕನಕಗಿರಿಯ ಭೀಮೇಶ್, ಮಂಜುನಾಥ ಅವರ ಕುಟುಂಬ ಸದಸ್ಯರು ಜಾನುವಾರುಗಳೊಂದಿಗೆ ಗಂಗಾವತಿ, ಬುಕ್ಕಸಾಗರದ ಮೂಲಕ ಹಂಪಿಗೆ ಬಂದಿದ್ದಾರೆ. ಮೇವಿಲ್ಲದೆ ಸೊರಗಿ ಹೋಗಿದ್ದ ದನ, ಕರುಗಳ ಮೊಗದಲ್ಲಿ ಮತ್ತೆ ಕಳೆ ಬಂದಿರುವುದಕ್ಕೆ ಸಂತಸಗೊಂಡಿದ್ದಾರೆ.
‘ನಮ್ಮ ಭಾಗದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಮೇವು ಬೆಳೆದಿಲ್ಲ. ಬೇರೆ ಕಡೆಯೂ ಸಿಗುತ್ತಿಲ್ಲ. ಹಂಪಿ ಸುತ್ತಮುತ್ತ ಉತ್ತಮ ಮಳೆಯಾಗಿ, ಹುಲ್ಲು ಬೆಳೆದಿದ್ದು ಗೊತ್ತಾಯಿತು. ಅದಕ್ಕಾಗಿ ದನ, ಕರುಗಳೊಂದಿಗೆ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಯಥೇಚ್ಛವಾಗಿ ಮೇವು ಸಿಗುತ್ತಿದೆ. ಸದ್ಯಕ್ಕಂತೂ ಕಷ್ಟ ದೂರವಾಗಿದೆ. ಮುಂದೇನಾಗುತ್ತೋ ಗೊತ್ತಿಲ್ಲ’ ಎಂದು ಭೀಮೇಶ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.