ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ ಎಲ್ಲರ ಸ್ವತ್ತು

ವಿಜಯನಗರ ಜಿಲ್ಲೆಯ ವಿವಿಧೆಡೆ 66ನೇ ಕನ್ನಡ ರಾಜ್ಯೋತ್ಸವ ಆಚರಣೆ
Last Updated 1 ನವೆಂಬರ್ 2021, 12:06 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ 66ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠದ ವತಿಯಿಂದ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಕುಲಪತಿ ಪ್ರೊ. ಸ.ಚಿ.ರಮೇಶ್, ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ, ‘ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡದ ಬೆಳವಣಿಗೆ ಸಾಧ್ಯ. ಕನ್ನಡದಲ್ಲಿ ಕಾದಂಬರಿ ಬರೆಯುವುದರ ಜೊತೆಗೆ ಅದನ್ನು ಚಿತ್ರಕತೆ ಹಾಗೂ ಸಂಭಾಷಣೆ ರೂಪಕ್ಕಿಳಿಸಿ ಸಿನಿಮಾವಾಗಿಸುವ ಮಟ್ಟಿಗೆ ವಿದ್ಯಾರ್ಥಿಗಳು ಕನ್ನಡದಲ್ಲಿ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಲೇಖಕ ಅಮರೇಶ ನುಗಡೋಣಿ, ‘ಕನ್ನಡ ಕಲಿಯುವ ಆಸಕ್ತಿ ಇರುವವರಿಗೆ ಕನ್ನಡ ಶಿಕ್ಷಣ ಕೊಡಿಸುವ ವ್ಯವಸ್ಥೆಯನ್ನ ನಾವು ಮಾಡಬೇಕು. ಮಠಮಾನ್ಯಗಳು ಕನ್ನಡ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಕನ್ನಡ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಬೇಕು. ಕೆಲವು ವಿದ್ಯಾರ್ಥಿಗಳಿಗಾದರೂಉಪಯುಕ್ತವಾಗುತ್ತದೆ’ ಎಂದರು.

ಕುಲಸಚಿವ ಎ.ಸುಬ್ಬಣ್ಣ ರೈ, ಲೇಖಕ ಅಮರೇಶ ನುಗಡೋಣಿ, ಉಪಕುಲಸಚಿವ ಎ. ವೆಂಕಟೇಶ, ಒನಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕ ಎ.ಶ್ರೀಧರ್, ಅಂದಯ್ಯ, ವಿನೋದ್ ಕುಮಾರ್ ಬಾದರ್ಲಿ ಇದ್ದರು.

ತಾಲ್ಲೂಕು ಆಡಳಿತ

ತಾಲ್ಲೂಕು ಕಚೇರಿಯ ಆವರಣದಲ್ಲಿ ಸೋಮವಾರ ಉಪವಿಭಾಗಧಿಕಾರಿ ಸಿದ್ದರಾಮೇಶ್ವರ ಧ್ವಜಾರೋಹಣ ನೇರವೇರಿಸಿ ಭುವನೇಶ್ವರಿ ದೇವಿಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ತಹಶೀಲ್ದಾರ್ ಎಚ್.ವಿಶ್ವನಾಥ್, ಶಿರಸ್ತೇದಾರರಾದ ರಮೇಶ್, ಶ್ರೀಧರ್, ನಾಗರಾಜ, ಕಚೇರಿ ಸಿಬ್ಬಂದಿ ಇದ್ದರು.

ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ ಮಾತನಾಡಿ, ‘ಎಲ್ಲ ಸಂದರ್ಭಗಳಲ್ಲಿ ಧನಾತ್ಮಕ ಅಂಶಗಳ ಕಡೆಗೆ ನಾವು ಗಮನ ಹರಿಸಬೇಕಿದೆ. ಭಾಷೆ ಯಾರೊಬ್ಬರ ಸ್ವತ್ತಲ್ಲ. ಕನ್ನಡ ಎಲ್ಲರ ಸ್ವತ್ತು. ಕಲಿಯುವ ಮತ್ತು ಕಲಿಸುವ ಪ್ರಯತ್ನ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಭಾಷೆ ಸಹಕಾರಿ’ ಎಂದರು.

ನಂತರ ಕನ್ನಡ ಭಾಷೆಯ ಬಳಕೆ ಹಾಗೂ ಏಕತಾ ದಿವಸ್ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳಾದ ಯಲ್ಲಮ್ಮ ಮತ್ತು ತಂಡ ಡೊಳ್ಳು ಕುಣಿತ ಪ್ರಸ್ತುತ ಪಡಿಸಿದರು. ಮಾತಾಡ್ ಕನ್ನಡ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಧುರಚನ್ನಶಾಸ್ತ್ರಿ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಎಚ್.ಆರೆಂಟನೂರ, ಡಿ.ಎಂ.ಮಲ್ಲಿಕಾರ್ಜುನಯ್ಯ ಇದ್ದರು.

ಗುಂಡ್ಲವದ್ದಿಗೇರಿ ಪ್ರಾಥಮಿಕ ಶಾಲೆ

ತಾಲ್ಲೂಕಿನ ಗುಂಡ್ಲವದ್ದಿಗೇರಿಯ ಸರ್ಕಾರಿ ಪ್ರೌಡಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಜನಪದ ಸಂಗೀತ ಪರಿಚಯಿಸಲಾಯಿತು.

ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿದ ನಂತರ ಶಾಲಾ ಪಠ್ಯದಲ್ಲಿದ್ದ ಜನಪದ ಸಂಗೀತ ಕುರಿತು ಗಾಯಕ ಕರ್ಣಂ ವಾಸುದೇವ ಭಟ್ ಮಾಹಿತಿ ನೀಡಿ, ಹಾಡು ಹೇಳಿಕೊಟ್ಟರು.

ವಾಯುಸೇನೆಯ ಜಿ.ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕ ಷಣ್ಮುಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಗೌಡ, ಶಿಕ್ಷಕರಾದ ಚಾರಿ ದುರುಗಪ್ಪ, ಅಂಬರೀಶ್, ಮಂಜುಳಾ ಮತ್ತು ಹರೀಶ್ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೆ ಗೌಡ ಬಣ):

ಆರನೇ ವಾರ್ಡ್ ಹಂಪಿ ರಸ್ತೆಯ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮುಖಂಡರು ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಹಂಪಿಯಿಂದ ಕನ್ನಡ ಜ್ಯೋತಿಯನ್ನು ಮಲಪನಗುಡಿ ಮಾರ್ಗವಾಗಿ, ಬನ್ನಿಮಹಾಂಕಾಳಿ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ತರಲಾಯಿತು.

ನಗರ ಘಟಕ ಅಧ್ಯಕ್ಷ ಸಣ್ಣ ಮಾರೆಪ್ಪ, ಡಿ.ವೇಣುಗೋಪಾಲ್, ಉಪಾಧ್ಯಕ್ಷ ವಿ.ವೆಂಕಟೇಶ್, ಮಾರುತಿ, ಯರಿಸ್ವಾಮಿ, ಯಮನೂರಪ್ಪ, ನಾಗರಾಜ, ಶ್ರೀಕಾಂತ್, ಮೂರ್ತಿ ಇದ್ದರು.

ಪತಂಜಲಿ ಯೋಗ ಸಮಿತಿ

ವಿಜಯನಗರ ಕಾಲೇಜಿನ ಬಸವೇಶ್ವರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಯೋಗ ತರಬೇತಿ ಶಿಬಿರ ನಡೆಸಲಾಯಿತು.

ಪ್ರೊ.ಎಫ್.ಟಿ.ಹಳ್ಳಿಕೇರಿ ಮಾತನಾಡಿ, ‘ಕರ್ನಾಟಕದ ಭವ್ಯ ಪರಂಪರೆಗೆ ಸುದೀರ್ಘ ಇತಿಹಾಸವಿದ್ದು, ಕನ್ನಡಿಗರು ಅವಲೋಕನ ಮಾಡಿದಾಗ ಅವುಗಳ ಮಹತ್ವ ನಮಗಾಗುತ್ತದೆ. ಅಂಥ ಭಾಷೆ-ಸಾಹಿತ್ಯ-ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ’ ಎಂದರು.

ಪ್ರಾಚಾರ್ಯ ವಿ.ಪ್ರಭಯ್ಯ ಅಸುಂಡಿ ನಾಗರಾಜಗೌಡ, ಬಸವರಾಜ, ಕಿರಣಕುಮಾರ, ದಾಕ್ಷಾಯಣಿ ಶಿವಕುಮಾರ, ಅಶೋಕ ಚಿತ್ರಗಾರ, ಶಿವಮೂರ್ತಿ, ಕೃಷ್ಣ ನಾಯಕ, ಪೂಜಾ ಐಲಿ, ಪಿ.ಆರ್.ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT