ಬುಧವಾರ, ಜನವರಿ 19, 2022
23 °C
ಶುಲ್ಕ ಮರುಪಾವತಿಗೆ ವಿನಾಕಾರಣ ವಿಳಂಬ: ವಿದ್ಯಾರ್ಥಿಗಳ ಆರೋಪ

ಹಂಪಿ ಕನ್ನಡ ವಿಶ್ವವಿದ್ಯಾಲಯ: ಶುಲ್ಕ ಮರುಪಾವತಿಗೆ ವಿನಾಕಾರಣ ವಿಳಂಬ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿಸಲು ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಸಕ್ತ ಸಾಲಿನ ಫೆಬ್ರುವರಿಯಲ್ಲೇ ಸಮಾಜ ಕಲ್ಯಾಣ ಇಲಾಖೆಯು ಕನ್ನಡ ವಿಶ್ವವಿದ್ಯಾಲಯಕ್ಕೆ ಹಣ ಸಂದಾಯ ಮಾಡಿದೆ. ಇಲಾಖೆಯ ಪ್ರಕಾರ, 15 ದಿನಗಳ ಒಳಗೆ ವಿದ್ಯಾರ್ಥಿಗಳಿಗೆ ಹಣ ಪಾವತಿಸಬೇಕು. ಆದರೆ, ಒಂಬತ್ತು ತಿಂಗಳು ಕಳೆದರೂ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಆರೋಪ ಇದನ್ನು ಪುಷ್ಟೀಕರಿಸುತ್ತದೆ.

ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಎರಡು ಬಗೆಯಲ್ಲಿ ಶಿಷ್ಯವೇತನ ನೀಡುತ್ತದೆ. ನಿರ್ವಹಣೆ ಭತ್ಯೆ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಇಲಾಖೆಯೇ ಜಮೆ ಮಾಡುತ್ತದೆ ಹಾಗೂ ಕಾಲೇಜು ಶುಲ್ಕವನ್ನು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಖಾತೆಗೆ ಜಮೆ ಮಾಡುತ್ತದೆ. ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಕಾಲೇಜು ಅಥವಾ ವಿಶ್ವವಿದ್ಯಾಲಯದವರು ಹಣ ಭರಿಸಿಕೊಂಡರೆ, ಆ ಹಣವನ್ನು ವಿದ್ಯಾರ್ಥಿಗಳಿಗೆ ಮರು ಪಾವತಿಸಬೇಕು.

ಸಂಶೋಧನಾ ವಿದ್ಯಾರ್ಥಿಗಳು ಪ್ರತಿ ಆರು ತಿಂಗಳಿಗೊಮ್ಮೆ ತಲಾ ₹1,500 ಶುಲ್ಕ ವಿಶ್ವವಿದ್ಯಾಲಯಕ್ಕೆ ಭರಿಸುತ್ತಾರೆ. ಸಮಾಜ ಕಲ್ಯಾಣ ಇಲಾಖೆಯು ಪ್ರತಿ ವಿದ್ಯಾರ್ಥಿಗೆ ತಲಾ ₹6,000ದಂತೆ ವಿಶ್ವವಿದ್ಯಾಲಯಕ್ಕೆ ನೀಡುತ್ತದೆ. ವಿಶ್ವವಿದ್ಯಾಲಯದವರು ವಿದ್ಯಾರ್ಥಿಗಳಿಂದ ಶುಲ್ಕ ರಸೀದಿ ಪಡೆದು, ಒಟ್ಟು ₹6,000 ಅವರ ಖಾತೆಗೆ ಜಮೆ ಮಾಡಬೇಕು. ₹3,000 ಶುಲ್ಕ ಮರು ಪಾವತಿ ಮಾಡಿದರೆ, ಮಿಕ್ಕುಳಿದ ಹಣ ಸಂಶೋಧನಾ ಚಟುವಟಿಕೆಗಳಿಗೆ ಬಳಸಲು ನೀಡುತ್ತದೆ. ಆದರೆ, ಸರ್ಕಾರದಿಂದ ಹಣ ಬಿಡುಗಡೆಗೊಳಿಸಿದರೂ ವಿದ್ಯಾರ್ಥಿಗಳಿಗೆ ಕೊಡಲು ಮೀನಮೇಷ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ವಿಷಯವಾಗಿಯೇ ಇತ್ತೀಚೆಗೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ನಡೆಸಿದ್ದರು. ಹಣ ಪಾವತಿಸುವ ಭರವಸೆ ವಿಶ್ವವಿದ್ಯಾಲಯದವರು ನೀಡಿದ್ದರು. ಆದರೆ, ವಿದ್ಯಾರ್ಥಿಗಳಿಗೆ ನಿಗದಿತ ಶುಲ್ಕ ಮರುಪಾವತಿಯಾಗಿಲ್ಲ. ಕೆಲವರಿಗೆ ₹550 ಅಷ್ಟೇ ಖಾತೆಗೆ ಜಮೆ ಆಗಿದೆ ಎಂದು ತಿಳಿಸಿದ್ದಾರೆ.

‘ಯಾವ್ಯಾವುದೋ ನೆಪ ಹೇಳಿ ವಿದ್ಯಾರ್ಥಿಗಳಿಗೆ ಹಣ ಪಾವತಿ ಸಕಾಲಕ್ಕೆ ಮಾಡುತ್ತಿಲ್ಲ. ಒಂಬತ್ತು ತಿಂಗಳು ಕಳೆದರೂ ಇದುವರೆಗೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಣ ಪಾವತಿಸಿಲ್ಲ. ವಿದ್ಯಾರ್ಥಿಗಳ ಹಕ್ಕಿನ ಹಣ ಕೊಡಲು ಇವರೇಕೇ ಹಿಂದೇಟು ಹಾಕುತ್ತಿದ್ದಾರೆ’ ಎಂದು ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ದೊಡ್ಡ ಬಸವರಾಜ ಪ್ರಶ್ನಿಸಿದ್ದಾರೆ.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ವಸಂತ್‌ ಕುಮಾರ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಹಣ ಪಾವತಿಯಾಗಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರಿಂದ ಸ್ವತಃ ನಾನೇ ಶುಕ್ರವಾರ ವಿಶ್ವವಿದ್ಯಾಲಯಕ್ಕೆ ಹೋಗಿ ಪರಿಶೀಲನೆ ನಡೆಸಿರುವೆ. ಅವರು ಮಾಡಿರುವ ಪಟ್ಟಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ನಮ್ಮ ಇಲಾಖೆಯಿಂದಲೇ ವಿದ್ಯಾರ್ಥಿಗಳ ಪಟ್ಟಿ ಮಾಡಿ ಕೊಡಲಾಗುವುದು ಎಂದು ತಿಳಿಸಲಾಗಿದೆ. ವಾರದೊಳಗೆ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿಗೆ ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳ ಪಾಲಿನ ಹಣ ಅವರಿಗೆ ಸೇರಲೇಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ರಮೇಶ ನಾಯ್ಕ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು