ಹೊಲಕ್ಕೆ ದನಗಳನ್ನು ಬಿಟ್ಟಿದ್ದಕ್ಕೆ ಕೊಲೆ: ಇಬ್ಬರಿಗೆ ಜೀವಾವಧಿ ಶಿಕ್ಷೆ

ಗುರುವಾರ , ಮಾರ್ಚ್ 21, 2019
32 °C

ಹೊಲಕ್ಕೆ ದನಗಳನ್ನು ಬಿಟ್ಟಿದ್ದಕ್ಕೆ ಕೊಲೆ: ಇಬ್ಬರಿಗೆ ಜೀವಾವಧಿ ಶಿಕ್ಷೆ

Published:
Updated:

ಹೊಸಪೇಟೆ: ಹೊಲಕ್ಕೆ ದನಗಳನ್ನು ಬಿಟ್ಟಿದ್ದಾರೆ ಎಂದು ಕೋಪಿಸಿಕೊಂಡು ಕೊಲೆ ಮಾಡಿದ ಇಬ್ಬರು ಆರೋಪಿಗಳಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಜಶೇಖರ್‌ ಅವರು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರ ಗ್ರಾಮದ ಹನುಮಂತ ರೆಡ್ಡಿ ಹಾಗೂ ನಾಗರಾಜ ರೆಡ್ಡಿ ಶಿಕ್ಷೆಗೆ ಒಳಗಾದವರು. ಅದೇ ಗ್ರಾಮದ ಬಸವರಾಜಯ್ಯ ಕೊಲೆಗೀಡಾದವರು.

2016ರ ಏ.14ರಂದು ಸಂಜೆ 4.30ರ ಸುಮಾರಿಗೆ ಗ್ರಾಮದ ಕೆಂಚರೆಡ್ಡಿ ಚನ್ನಪ್ಪ ಅವರ ಕಣದಲ್ಲಿ ಬಿ.ಎಂ. ದೊಡ್ಡಬಸಯ್ಯ ಹಾಗೂ ಅವರ ತಂದೆ ಬಸವರಾಜಯ್ಯ ಔಡಲ ಬೀಜವನ್ನು ಬೇರ್ಪಡಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹನುಮಂತ ರೆಡ್ಡಿ, ನಾಗರಾಜ ರೆಡ್ಡಿ, ‘ಹೊಲಕ್ಕೆ ದನಗಳನ್ನು ಬಿಟ್ಟು ಬೆಳೆ ಹಾಳು ಮಾಡಿದ್ದೀರಿ’ ಎಂದು ಬೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಹನುಮಂತ ರೆಡ್ಡಿ, ಕಣದಲ್ಲಿದ್ದ ಕಣಗದಿಂದ ಬಸವರಾಜಯ್ಯನವರ ತಲೆಯ ಬಲಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದ ಬಸವರಾಜಯ್ಯನವರನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ದೊಡ್ಡ ಬಸಯ್ಯ ಅವರು ಕೊಟ್ಟ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಐ.ಪಿ.ಸಿ. ಕಲಂ 323, 504, 114, 302ರ ಅಡಿ ಪ್ರಕರಣ ದಾಖಲಿಸಿಕೊಂಡು, ಬಳಿಕ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಒಟ್ಟು 17 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕೊಲೆ ಮಾಡಿದ ಹನುಮಂತ ರೆಡ್ಡಿ ಹಾಗೂ ಅದಕ್ಕೆ ಪ್ರಚೋದನೆ ನೀಡಿದ ನಾಗರಾಜ ರೆಡ್ಡಿ ಅವರಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿದ್ದಾರೆ. ಮೃತ ಬಸವರಾಜಯ್ಯನವರ ಹೆಂಡತಿ ಸುವರ್ಣಮ್ಮ ಅವರಿಗೆ ₹2 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !