ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ಕೆಂಡಾಮಂಡಲ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ; ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ
Last Updated 24 ಜೂನ್ 2019, 12:16 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸದಿರುವುದಕ್ಕೆ ಸೋಮವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ 14ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯ ಬಿ.ಎಸ್‌. ರಾಜಪ್ಪ, ‘ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಮಳೆಯಾಗದ ಕಾರಣ ಅಂತರ್ಜಲ ಕುಸಿದಿದೆ. ಜನ ಫ್ಲೋರೈಡ್‌ ಅಂಶವಿರುವ ನೀರು ಕುಡಿಯುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಸಮಸ್ಯೆ ನೀಗಿಸಲು ಶ್ರಮಿಸುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಅನೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿಲ್ಲ. ಏಜೆನ್ಸಿಗಳ ಬೆನ್ನು ಬಿದ್ದು ಅಧಿಕಾರಿಗಳು ಕೆಲಸ ಮಾಡಿಸಬೇಕು. ಆದರೆ, ಮಾಡಿಸುತ್ತಿಲ್ಲ‘ ಎಂದು ಹೇಳಿದರು.

‘ನೀರಿನ ಸಮಸ್ಯೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿ.ಡಿ.ಒ.) ವಿಷಯ ಹೇಳಬೇಕೆಂದು ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ಹೀಗಾದರೆ ಜನ ಯಾರಿಗೆ ಸಮಸ್ಯೆ ಹೇಳಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಅದಕ್ಕೆ ದನಿಗೂಡಿಸಿದ ಅಧ್ಯಕ್ಷೆ ಜೋಗದ ನೀಲಮ್ಮ, ‘ಅನೇಕ ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಹಿಂದಿನ ಸಭೆಯಲ್ಲಿ ಹೇಳಿದರೂ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಸಮಸ್ಯೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ಸ್ಪಂದಿಸಬೇಕು’ ಎಂದು ತಾಕೀತು ಮಾಡಿದರು.

’ಅಧ್ಯಕ್ಷರು, ಸದಸ್ಯರು ಕರೆ ಮಾಡಿದರೆ ಪಿ.ಡಿ.ಒ.ಗಳು ಅದಕ್ಕೆ ಪ್ರತಿಕ್ರಿಯಿಸಬೇಕು. ಜನಪ್ರತಿನಿಧಿಗಳನ್ನು ಅಲಕ್ಷ್ಯ ಮಾಡುವ ಧೋರಣೆ ಸರಿಯಲ್ಲ. ಅವರಷ್ಟೇ ಅಲ್ಲ, ಯಾರೇ ಕರೆ ಮಾಡಿದರೂ ಸ್ವೀಕರಿಸಿ, ಅದಕ್ಕೆ ಸ್ಪಂದಿಸಬೇಕು. ಈ ಕುರಿತು ಭವಿಷ್ಯದಲ್ಲಿ ದೂರುಗಳು ಬರಬಾರದು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಎಚ್ಚರಿಕೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್‌ ಪಂಪಾಪತಿ ಮಾತನಾಡಿ, ‘ತಾಲ್ಲೂಕಿನ ಕಲ್ಲಹಳ್ಳಿ, ಮಲಪನಗುಡಿಯಲ್ಲಿ ಇತ್ತೀಚೆಗೆ ಹೊಸ ಬೋರ್‌ವೆಲ್‌ ಕೊರೆಸಲಾಗಿತ್ತು. ಆದರೆ, ಎರಡೂ ವಿಫಲಗೊಂಡಿವೆ. ಭೂಗರ್ಭಶಾಸ್ತ್ರಜ್ಞರ ಸಲಹೆ ಮೇರೆಗೆ ಹೊಸ ಜಾಗದಲ್ಲಿ ಕೊಳವೆಬಾವಿ ಕೊರೆಸಿ, ನೀರಿನ ಸಮಸ್ಯೆ ನೀಗಿಸಲಾಗುವುದು’ ಎಂದು ಭರವಸೆ ನೀಡಿದರು.

ಸದಸ್ಯ ಪಾಲಪ್ಪ, ‘ಹಂಪಿ ಪ್ರಕಾಶ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂದು ಅನೇಕ ತಿಂಗಳುಗಳ ಹಿಂದೆಯೇ ತಿಳಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ. ಜನ ಅಶುದ್ಧ ನೀರು ಕುಡಿದು ಆಸ್ಪತ್ರೆಗೆ ಅಲೆಯುವಂತಾಗಿದೆ’ ಎಂದು ಅಸಮಾಧಾನ ಹೊರ ಹಾಕಿದರು.

ಪಿ.ಡಿ.ಒ. ರಾಜೇಶ್ವರಿ ಪ್ರತಿಕ್ರಿಯಿಸಿ, ‘ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಬಂಧಿಸಿದ ಪರಿಕರಗಳು ಬಂದಿವೆ. ಆದರೆ, ಅದನ್ನು ಅಳವಡಿಸಲು ಕಟ್ಟಡವಿಲ್ಲ. ಕಟ್ಟಡ ಕೊಟ್ಟರೆ ಅಳವಡಿಸಿ, ನೀರು ಪೂರೈಸಲಾಗುವುದು‘ ಎಂದರು.

ಪಂಪಾಪತಿ ಮಾತನಾಡಿ, ‘ಆದಷ್ಟು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಸಮಸ್ಯೆಯಿದೆಯೋ ಅಲ್ಲಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು‘ ಎಂದು ಹೇಳಿದರು.

ಸದಸ್ಯೆ ಮಲ್ಲೆ ಹನುಮಕ್ಕ, ‘ಕಂಪ್ಲಿ ಭಾಗದ ಶಾಲೆಗಳಲ್ಲಿ ಶೌಚಾಲಯಗಳಿವೆ. ಆದರೆ, ನೀರಿನ ವ್ಯವಸ್ಥೆಯಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಬಯಲಿಗೆ ಹೋಗುತ್ತಾರೆ. ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ’ ಎಂದು ಸಭೆಯ ಗಮನಕ್ಕೆ ತಂದರು.

‘ಫಲಿತಾಂಶವೇಕೇ ಸುಧಾರಿಸುತ್ತಿಲ್ಲ’
‘ವರ್ಷದಿಂದ ವರ್ಷಕ್ಕೆ ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುತ್ತಿದೆ. ಇದೇ ವೇಳೆ ಖಾಸಗಿ ಶಾಲೆಗಳ ಫಲಿತಾಂಶ ಹೆಚ್ಚಾಗುತ್ತಿದೆ. ಇದಕ್ಕೇನು ಕಾರಣ’ ಎಂದು ಸದಸ್ಯ ರಾಜಪ್ಪ ಪ್ರಶ್ನಿಸಿದರು.

‘ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ಸೇರಿದಂತೆ ಅನೇಕ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಆದರೂ ಫಲಿತಾಂಶವೇಕೇ ಸುಧಾರಿಸುತ್ತಿಲ್ಲ‘ ಎಂದು ಕೇಳಿದರು.

ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಗುರುರಾಜ್‌, ‘ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೂ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT