ಸೋಮವಾರ, ಜನವರಿ 18, 2021
22 °C
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ; ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಹೊಸಪೇಟೆ: ಕಾರ್ಮಿಕರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿರುವ ಕ್ರಮ ವಿರೋಧಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಗುರುವಾರ ಕರೆ ಕೊಟ್ಟಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಂದಿನಂತೆ ಹಾಲು, ದಿನಪತ್ರಿಕೆ ಪೂರೈಕೆಯಾಯಿತು. ಎಪಿಎಂಸಿ, ಸೋಗಿ ಮಾರುಕಟ್ಟೆ ತೆರೆದಿದ್ದವು. ಬಹುತೇಕ ಮಳಿಗೆ, ಹೋಟೆಲ್‌ಗಳು ಕೂಡ ತೆರೆದಿದ್ದವು. ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ರಸ್ತೆಗಿಳಿದಿದ್ದವು. ಆದರೆ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ದ್ವಿಚಕ್ರ ವಾಹನಗಳ ಮೇಲೆ ನಗರದಲ್ಲಿ ಸುತ್ತಾಡಿ ಮಳಿಗೆಗಳನ್ನು ಮುಚ್ಚಿಸಿದರು. ಕೆಲಹೊತ್ತು ಬಸ್‌ ಸಂಚಾರ ತಡೆದಿದ್ದರು. ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಸಂಚಾರ ಪುನರಾರಂಭಗೊಂಡಿತು. ಇದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಆಟೊ ಫೆಡರೇಶನ್‌ ಹೊರತುಪಡಿಸಿ ಇತರೆ ಯೂನಿಯನ್‌ಗಳು ಬಂದ್‌ನಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಅರ್ಧಕ್ಕಿಂತ ಹೆಚ್ಚಿನ ಆಟೊಗಳು ನಗರದಲ್ಲಿ ಸಂಚರಿಸಿದವು. ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳು ರಸ್ತೆಗೆ ಇಳಿಯಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ನಡೆದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಮೆಡಿಕಲ್‌, ಆಂಬ್ಯುಲೆನ್ಸ್‌ ಸೇವೆಗಳಿದ್ದವು. ಜನಜೀವನ ಸಹಜವಾಗಿತ್ತು.


ರಾಷ್ಟ್ರವ್ಯಾಪಿ ಮುಷ್ಕರದ ಕಾರಣದಿಂದ ಗುರುವಾರ ಹೊಸಪೇಟೆಯಲ್ಲಿ ಮಳಿಗೆಗಳು ತೆರೆದಿರಲಿಲ್ಲ

ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ನವರು ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರೆ, ಅಂಚೆ ಇಲಾಖೆಯ ನೌಕರರು ನಗರದ ಪ್ರಧಾನ ಕಚೇರಿ ಎದುರು ಮಾಡಿದರು.

ಸಿಪಿಐಎಂ, ಡಿವೈಎಫ್‌ಐ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ರ್‍ಯಾಲಿ ನಡೆಸಿದರು. ನಗರದ ಶ್ರಮಿಕ ಭವನದಿಂದ ರ್‍ಯಾಲಿ ಆರಂಭಿಸಿದ ಕಾರ್ಯಕರ್ತರು ರಾಮ ಟಾಕೀಸ್‌, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತದ ಮೂಲಕ ಹಾದು ರೋಟರಿ ವೃತ್ತದಲ್ಲಿ ಸಮಾವೇಶಗೊಂಡರು. ಕೆಲಹೊತ್ತು ರಸ್ತೆತಡೆ ಚಳವಳಿ ನಡೆಸಿದ ಅವರು ನಂತರ ಬಹಿರಂಗ ಸಭೆ ನಡೆಸಿದರು.

ಸಮಿತಿಯ ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ‘44 ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾಡಿರುವ ಕೇಂದ್ರದ ಕ್ರಮ ಸರಿಯಲ್ಲ. ಭೂ ಸುಧಾರಣೆ, ಎಪಿಎಂಸಿ, ಕೃಷಿ ಮತ್ತು ವಿದ್ಯುತ್‌ ತಿದ್ದುಪಡಿ ಕಾಯ್ದೆಗಳು ಸಾಮಾನ್ಯ ಜನರಿಗೆ ಮರಣ ಶಾಸನವಾಗಿವೆ. ಕೂಡಲೇ ಅವುಗಳನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಶಿಕ್ಷಣ, ಆರೋಗ್ಯ, ರೈಲ್ವೆ, ರಸ್ತೆ, ವಿದ್ಯುತ್‌, ದೂರಸಂಪರ್ಕ, ವಿಮೆ, ಬ್ಯಾಂಕ್‌ ಸೇರಿದಂತೆ ಇತರೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೂಡಲೇ ಕೈಬಿಡಬೇಕು. ಲಾಕ್‌ಡೌನ್‌ನಿಂದ ಅನೇಕ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ಕನಿಷ್ಠ ಆರು ತಿಂಗಳು, ಮಾಸಿಕ ತಲಾ ₹7,500 ನೆರವು ನೀಡಬೇಕು. ನೂತನ ಶಿಕ್ಷಣ ನೀತಿ ಜಾರಿಗೆ ತರಬಾರದು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಬೇಕು’ ಎಂದು ಒತ್ತಾಯಿಸಿದರು.


ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಗುರುವಾರ ಸಾರಿಗೆ ಸಂಸ್ಥೆಗೆ ತಟ್ಟಲಿಲ್ಲ. ಎಂದಿನಂತೆ ಹೊಸಪೇಟೆ ಬಸ್‌ ನಿಲ್ದಾಣದಿಂದ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಬಸ್‌ಗಳು ಸಂಚರಿಸಿದವು

ಮುಖಂಡರಾದ ಮರಡಿ ಜಂಬಯ್ಯ ನಾಯಕ, ಕೆ. ನಾಗರತ್ನಮ್ಮ, ಎಂ. ಗೋಪಾಲ, ಎನ್‌. ಯಲ್ಲಾಲಿಂಗ, ಜೆ. ಪ್ರಕಾಶ, ಕೆ.ಎಂ. ಸಂತೋಷ್‌ ಕುಮಾರ್‌, ಕೆ.ಎಂ. ಸ್ವಪ್ನ, ಶಕುಂತಲ, ಸಿದ್ದೇಶ, ಅನಂತಶಯನ, ಕೆ.ಎಂ. ಸೋಮಯ್ಯ, ಎಸ್‌. ರಾಮಪ್ಪ, ಎಚ್‌. ಮೋಹನ್‌ ಕುಮಾರ್‌, ಯಶೋದ, ವಿಜಯ, ಹುಲುಗಪ್ಪ, ಮರಿಕಣಿಮೆಪ್ಪ, ತಿಪ್ಪೇಸ್ವಾಮಿ, ನಾಗರಾಜ, ಬಿಸಾಟಿ ಮಹೇಶ್‌ ಇದ್ದರು.

ಬಳ್ಳಾರಿ ಬಂದ್‌ ಸಂಪೂರ್ಣ ವಿಫಲ:

ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಳ್ಳಾರಿ ಬಂದ್‌ ನಗರದಲ್ಲಿ ಸಂಪೂರ್ಣ ವಿಫಲಗೊಂಡಿತು.

ಬಂದ್‌ಗೆ ನಗರ ಸೇರಿದಂತೆ ತಾಲ್ಲೂಕಿನ ಯಾವೊಂದು ಸಂಘಟನೆ, ರಾಜಕೀಯ ಪಕ್ಷವೂ ಬೆಂಬಲ ನೀಡಲಿಲ್ಲ. ಜಿಲ್ಲೆ ವಿಭಜನೆ ಪರ ಇರುವ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಾದ ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಕೊಟ್ಟೂರಿನಲ್ಲೂ ಸ್ಪಂದನೆ ಸಿಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು