ಭಾನುವಾರ, ಸೆಪ್ಟೆಂಬರ್ 26, 2021
24 °C

ಬೆಳಿಗ್ಗೆ ಉತ್ಸಾಹ, ಮಧ್ಯಾಹ್ನ ನಿರುತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ಕ್ಷೇತ್ರದ ಮತದಾರರು ಮಂಗಳವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಹಕ್ಕು ಚಲಾಯಿಸಿದರು.

ಕೆಲ ಯುವಕ/ಯುವತಿಯರು ಮೊದಲ ಸಲ ಮತ ಹಾಕಿ ಸಂಭ್ರಮಿಸಿದರು. ನಗರದ ದೇವಾಂಗಪೇಟೆಯ ‘ಸಖಿ’ ಮತಗಟ್ಟೆ, ಬಸವೇಶ್ವರ ಬಡಾವಣೆಯಲ್ಲಿ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿ, ಖುಷಿಪಟ್ಟರು. ಬಹುತೇಕ ಮತಗಟ್ಟೆಗಳಿಗೆ ಜನ ಕುಟುಂಬ ಸಮೇತ ಬಂದು ಮತ ಹಾಕಿದರು.

ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಮತಗಟ್ಟೆಗಳ ಎದುರು ಜನರ ಉದ್ದನೆಯ ಸಾಲು ಕಂಡು ಬಂತು. ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದರ ವರೆಗೆ ಕೆಂಡದಂತಹ ಬಿಸಿಲು ಇರುತ್ತಿದೆ. ಹೀಗಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆಯೇ ಮತದಾನ ಕೇಂದ್ರಗಳತ್ತ ಧಾವಿಸಿದರು.

ಪಟೇಲ್‌ ನಗರದ ನ್ಯಾಷನಲ್‌ ಶಾಲೆ, ಸರ್ಕಾರಿ ಶಾಲೆ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಎಂ.ಜೆ. ನಗರ, ಚಪ್ಪರದಹಳ್ಳಿ, ಟಿ.ಬಿ. ಡ್ಯಾಂ, ಜೆ.ಪಿ. ನಗರದ ಮತಗಟ್ಟೆಗಳಲ್ಲಿ ಮತದಾರರು ಹುರುಪಿನಿಂದ ಬಂದು ಮತ ಹಾಕಿದರು.

ಬೆಳಿಗ್ಗೆ ಒಂಬತ್ತರಿಂದ ಹತ್ತು ಗಂಟೆಯ ವರೆಗೆ ಶೇ 12ರಿಂದ ಶೇ 18ರಷ್ಟು ಮತದಾನವಾಗಿತ್ತು. ಬಿಸಿಲು ಹೆಚ್ಚಾಗುತ್ತಿದ್ದಂತೆ ಮತದಾನದ ಪ್ರಮಾಣ ಕಡಿಮೆಯಾಗುತ್ತ ಹೋಯಿತು. 11ಗಂಟೆಯ ವರೆಗೆ ತಾಲ್ಲೂಕಿನ ನಾಗೇನಹಳ್ಳಿ ಮತಗಟ್ಟೆ ಸಂಖ್ಯೆ 195ರಲ್ಲಿ ಒಟ್ಟು 720 ಮತಗಳ ಪೈಕಿ 301, 195 ಮತಗಟ್ಟೆಯಲ್ಲಿ 507 ಮತದಾರರ ಪೈಕಿ 220 ಜನ ಹಕ್ಕು ಚಲಾಯಿಸಿದ್ದರು. ಮಧ್ಯಾಹ್ನ 12ಕ್ಕೆ ನಗರದ ದೇವಾಂಗಪೇಟೆಯ 157ನೇ ಮತಗಟ್ಟೆಯಲ್ಲಿ ಒಟ್ಟು 1,377 ಮತಗಳ ಪೈಕಿ 453 ಜನ ಮತ ಹಾಕಿದ್ದರು. ಇನ್ನು ಮಧ್ಯಾಹ್ನ 1ಗಂಟೆಗೆ ಸಂಡೂರು ರಸ್ತೆಯಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯ 152ನೇ ಮತಗಟ್ಟೆಯಲ್ಲಿ 1,129 ಮತದಾರರ ಪೈಕಿ 495 ಜನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮಧ್ಯಾಹ್ನ 12 ಗಂಟೆಯ ನಂತರ ಬಹುತೇಕ ಮತಗಟ್ಟೆಗಳ ಎದುರು ಒಬ್ಬರು, ಇಬ್ಬರಷ್ಟೇ ಮತ ಹಾಕಲು ನಿಂತಿದ್ದರು. ಕೆಲವು ಮತಗಟ್ಟೆಗಳ ಬಳಿ ಜನವೇ ಇರಲಿಲ್ಲ. ಹೀಗಾಗಿ ಮತಗಟ್ಟೆ ಸಿಬ್ಬಂದಿ ಇದೇ ಸಮಯದಲ್ಲಿ ಮಧ್ಯಾಹ್ನದ ಊಟ ಮುಗಿಸಿದರು. ಸಂಜೆ ನಾಲ್ಕು ಗಂಟೆಯ ವರೆಗೆ ಇದೇ ಸ್ಥಿತಿ ಇತ್ತು. ಆಗೊಬ್ಬರು, ಈಗೊಬ್ಬರು ಎಂಬಂತೆ ಬಂದು ಮತ ಹಾಕಿದರು. 

ಸಂಜೆ ನಾಲ್ಕೂವರೆ ನಂತರ ಮತ್ತೆ ಜನ ಮತಗಟ್ಟೆಗಳತ್ತ ಧಾವಿಸಿದರು. ಐದುವರೆಗೆ ಸಂಖ್ಯೆ ಹೆಚ್ಚುತ್ತ ಹೋಯಿತು. ಐದು ಗಂಟೆಗೆ ಶೇ 60.51ರಷ್ಟು ಮತದಾನವಾಗಿತ್ತು. ಅನೇಕ ಮತಗಟ್ಟೆಗಳ ಎದುರು ಜನ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದರು. ವಿಜಯನಗರ ಕ್ಷೇತ್ರದಾದ್ಯಂತ ಶಾಂತಿಯುತವಾಗಿ ಮತದಾನ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು