ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ತಿದ್ದುಪಡಿ ಕಾಯ್ದೆ ಮಾರಕ

ಆಟೊ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೇಳಿಕೆ
Last Updated 8 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಹೊಸಪೇಟೆ: ‘ಕೇಂದ್ರ ಸರ್ಕಾರವು ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ತಂದು ಆಟೊ ಚಾಲಕರನ್ನು ಬೀದಿಗೆ ತಳ್ಳಿದೆ’ ಎಂದು ಫೆಡರೇಶನ್‌ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಆರೋಪಿಸಿದರು.

ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಫೆಡರೇಶನ್‌ ತಾಲ್ಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದು ದುಡಿದು ತಿನ್ನುವವರಿಗೆ ಮಾರಕವಾಗಿದೆ’ ಎಂದು ಹೇಳಿದರು.

‘ಸರ್ಕಾರ ಜನಪರವಾಗಿ ಚಿಂತಿಸಬೇಕು. ಆದರೆ, ಜನಸಾಮಾನ್ಯರ ಹಿತ ಕಡೆಗಣಿಸಿ, ದೊಡ್ಡ ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಗೆ ಮಣೆ ಹಾಕುತ್ತಿರುವುದು ದುರದೃಷ್ಟಕರ’ ಎಂದು ತಿಳಿಸಿದರು.

ಸಿ.ಐ.ಟಿ.ಯು. ಜಿಲ್ಲಾ ಅಧ್ಯಕ್ಷ ಆರ್. ಭಾಸ್ಕರ ರೆಡ್ಡಿ ಮಾತನಾಡಿ, ‘ಆಟೊ ಚಾಲಕರು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧಿಸಬಹುದು’ ಎಂದು ಕಿವಿಮಾತು ಹೇಳಿದರು.
ಸಿ.ಐ.ಟಿ.ಯು. ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನ, ‘ಕೇಂದ್ರ ಸರ್ಕಾರದ ನೀತಿ ವಿರುದ್ಧ ಧೈರ್ಯದಿಂದ ಹೋರಾಡೋಣ. ಅದಕ್ಕೆ ಯಾವುದೇ ರೀತಿಯ ಅಳುಕು ಬೇಡ’ ಎಂದರು.

ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರವನ್ನು ಎಚ್ಚರಿಸಲುಡಿ. 12ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೇಡಿಕೆ ಈಡೇರಿಸದಿದ್ದರೆ ಬರುವ ಜನವರಿಯಲ್ಲಿ ಹಂಪಿಗೆ ಉತ್ಸವಕ್ಕೆ ಬರುವ ಜನಪ್ರತಿನಿಧಿಗಳಿಗೆ ಘೇರಾವ್‌ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಡಿ.ವೈ.ಎಫ್‌.ಐ. ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಇದ್ದರು. ಇದಕ್ಕೂ ಮುನ್ನ ಸಂತೋಷ್‌ ಕುಮಾರ್‌ ಧ್ವಜಾರೋಹಣ ಮಾಡಿದರು. ಇದೇ ವೇಳೆ ವಿಧಾನಸೌಧ ಚಲೋ ಪೋಸ್ಟರ್‌ ಬಿಡುಗಡೆ ಮಾಡಿದರು.
ಫೆಡರೇಶನ್‌ ತಾಲ್ಲೂಕು ಸಹಕಾರ್ಯದರ್ಶಿ ಬಿ.ಎಸ್ ಯಮುನಪ್ಪ, ಖಜಾಂಚಿ ಎಸ್. ಅನಂತಶಯನ, ಟಿ.ಬಿ.ಡಿ. ಘಟಕದ ಅಧ್ಯಕ್ಷ ಕೆ. ಮೂರ್ತಿ, ಹಂಪಿ ಘಟಕದ ಕಾರ್ಯದರ್ಶಿ ಕೆ. ಮೂರ್ತಿ ಇದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಫೆಡರೇಶನ್‌ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಕೆ.ಎಂ. ಸಂತೋಷ್‌ ಕುಮಾರ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಬಿ.ಎಸ್‌. ಯಮುನಪ್ಪ (ಪ್ರಧಾನ ಕಾರ್ಯದರ್ಶಿ), ಎಸ್‌. ಅನಂತಶಯನ (ಖಜಾಂಚಿ), ಎಸ್‌. ವಿಜಯಕುಮಾರ್‌ (ಸಂಘಟನಾ ಕಾರ್ಯದರ್ಶಿ), ಸದಾನಂದ ಪಾಟೀಲ, ತಿಪ್ಪೇಸ್ವಾಮಿ, ಬಿ.ಎಸ್. ರುದ್ರಪ್ಪ, ರವಿಕುಮಾರ್, ಕೆ. ಮೂರ್ತಿ, ಹುಸೇನ್ ಸಾಬ್, ರಾಮಣ್ಣ (ಉಪಾಧ್ಯಕ್ಷರು), ಬಿ.ರಾಘವೇಂದ್ರ, ಶ್ರೀನಿವಾಸ್, ಬುಡೇನ್ ಸಾಬ್, ಜಿ. ಸಿದ್ದಲಿಂಗೇಶ್ , ಟಿ.ಚಂದ್ರಶೇಖರ್, ಮಂಜುನಾಥ್ (ಸಹ ಕಾರ್ಯದರ್ಶಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT