ಸೋಮವಾರ, ಸೆಪ್ಟೆಂಬರ್ 20, 2021
24 °C
ಬಡಾವಣೆಗೊಳಗೊಂದು ಸುತ್ತು ಅಂಕಣ.....

ಹಗರಿಬೊಮ್ಮನಹಳ್ಳಿ: ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ನೆಹರೂ ಕಾಲೊನಿ

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಎರಡು ದಶಕ ಕಳೆದರೂ ನಗರದ ಐದನೇ ವಾರ್ಡ್‌ ವ್ಯಾಪ್ತಿಯ ನೆಹರೂ ನಗರದ ಚಹರೆ ಬದಲಾಗಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಕ್ಕೂ ಹೆಚ್ಚು ಕಾಲ ಸಂದರೂ ಅಭಿವೃದ್ಧಿಯ ಓಟದಲ್ಲಿ ಬಹಳ ಹಿಂದೆ ಬಿದ್ದಿದೆ.

ಕಾಲೊನಿಯಲ್ಲಿ 250ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಮೂಲಸೌಕರ್ಯ ಮಾತ್ರ ಇಲ್ಲಿನ ಜನಕ್ಕೆ ಗಗನಕುಸುಮ. ಸಮಸ್ಯೆಗಳ ನಡುವೆಯೇ ಬದುಕು ನಡೆಸುವ ಅನಿವಾರ್ಯತೆಯಲ್ಲಿ ಕಾಲ ತಳ್ಳುತ್ತಿದ್ದಾರೆ. ಕಾಲೊನಿಯಲ್ಲಿ 500 ಮೀಟರ್‌ ಮಾತ್ರ ಚರಂಡಿ ನಿರ್ಮಾಣಗೊಂಡಿದೆ. ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿಯುವುದರಿಂದ ದುರ್ಗಂಧ ಹರಡಿದೆ. ಮಳೆ ಬಂದಾಗ ಅದರೊಂದಿಗೆ ಎಲ್ಲೆಡೆ ನೀರು ಹರಿಯುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಇತ್ತೀಚೆಗೆ ₹ 30 ಲಕ್ಷದಲ್ಲಿ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ನಡೆದಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ವರ್ಷ ಕಳೆದರೂ ದುರಸ್ತಿ ಕಂಡಿಲ್ಲ. ಕುಡಿಯುವ ನೀರಿಗಾಗಿ 2 ಕಿ.ಮೀ ದೂರ ಹೋಗಬೇಕು. ವಾಹನಗಳು ಇದ್ದವರು ಮಾತ್ರ ಶುದ್ಧ ಕುಡಿಯುವ ನೀರು ತಂದುಕೊಳ್ಳುತ್ತಾರೆ. ಉಳಿದವರಿಗೆ ಕೊಳವೆಬಾವಿಯ ಉಪ್ಪು ನೀರೇ ಗತಿ!

ಕಾಲೊನಿಯಲ್ಲಿ ಬೀದಿ ದೀಪಗಳಿವೆ. ಆದರೆ, ಒಂದೂ ಬೆಳಗುವುದಿಲ್ಲ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಅಂಗನವಾಡಿ ಕೇಂದ್ರ, ಕಿರಿಯ ಪ್ರಾಥಮಿಕ ಶಾಲೆ ಇದ್ದರೂ ಸುತ್ತುಗೋಡೆ ಇಲ್ಲ. ಇದರಿಂದ ಹಂದಿಗಳು, ಬೀದಿ ದನಗಳು ಒಳಗೆ ನುಗ್ಗುತ್ತವೆ. ಅಲ್ಲೇ ಠಿಕಾಡಿ ಹೂಡಿರುತ್ತವೆ. ಕಾಲೊನಿಯ ಬಳಿ ಹಗರಿ ಹಳ್ಳ ಇರುವುದರಿಂದ ಆಸ್ಪತ್ರೆಗಳ ಕಲ್ಮಶ, ಕಸ ಇಲ್ಲಿ ಹಾಕುತ್ತಿರುವುದಿರಂದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಒಟ್ಟಾರೆಯಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿಯ ಕೊರತೆಯಿಂದ ನೆಹರೂ ಕಾಲೊನಿ ಅಭಿವೃದ್ಧಿಯಿಂದ ವಂಚಿತವಾಗಿದೆ.

‘ನೆಹರೂ ಕಾಲೊನಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿಗಳಾದ ನಾಗರಾಜ್‌, ಉಮೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು