ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ–ವಿಜಯನಗರ: ಶಾಲೆ–ಕಾಲೇಜುಗಳಲ್ಲಿ ಡೊನೇಷನ್‌ಗಿಲ್ಲ ಅಂಕುಶ

ಪೂರ್ವ ಪ್ರಾಥಮಿಕ ಹಂತದಿಂದ ಕಾಲೇಜು ಪ್ರವೇಶಕ್ಕೆ ತೆರಲೇಬೇಕು ಡೊನೇಷನ್‌
Last Updated 4 ಜುಲೈ 2022, 9:21 IST
ಅಕ್ಷರ ಗಾತ್ರ

ಬಳ್ಳಾರಿ/ ಹೊಸಪೇಟೆ (ವಿಜಯನಗರ): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ
ಹಾಗೂ ಅವರ ಪೋಷಕರಿಗೆ ‘ಮುಂದೇನು?‘ ಯಾವ ಕಾಲೇಜಿಗೆ ಸೇರಬೇಕು? ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ದೊಡ್ಡ ಚಿಂತೆ...

ಪಿ.ಯು ಪ್ರವೇಶ ಶುರುವಾದರೆ ಮಕ್ಕಳು ಮತ್ತು ಅವರ ಪೋಷಕರ ಚಡಪಡಿಕೆ ನೋಡಲಾಗದು. ಇದನ್ನೇ ’ಬಂಡವಾಳ‘ ಮಾಡಿಕೊಳ್ಳುವ ಬೆರಳೆಣಿಕೆ ಖಾಸಗಿ ಕಾಲೇಜುಗಳು ’ಡೊನೇಷನ್‌‘ ಹೆಸರಲ್ಲಿ ’ದೋಚುವ ಕಾಯಕ’ಕ್ಕೆ ಇಳಿಯುತ್ತವೆ. ಅವಿಭಜಿತ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳೂ ಇದಕ್ಕೆ ಹೊರತಲ್ಲ.

ಖಾಸಗಿ ಶಾಲಾ, ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿಗೆ ಅಂಕುಶ ಹಾಕುವವರೇ ಇಲ್ಲದಂತಾಗಿದೆ.

ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ₹40ರಿಂದ ₹50 ಸಾವಿರದ ವರೆಗೆ ಡೊನೇಷನ್‌ ಪಾವತಿಸುತ್ತಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಇದಕ್ಕಿಂತ ಸ್ವಲ್ಪ ಹೆಚ್ಚಿದೆ. ಆದರೆ, ಪಿ.ಯು ಪ್ರವೇಶ ಪಡೆಯಲು ₹50 ಸಾವಿರದಿಂದ ₹1 ಲಕ್ಷದ ವರೆಗೆ ತೆರಬೇಕು. ಇನ್ನು, ಪ್ರವೇಶ ಪತ್ರ, ಕಟ್ಟಡ ಶುಲ್ಕ, ಅಭಿವೃದ್ಧಿ ಶುಲ್ಕ ಪ್ರತ್ಯೇಕ. ಹಣವಂತರಲ್ಲಿ ಹೆಚ್ಚಿನ
ವರು ಖಾಸಗಿ ಶಾಲಾ– ಕಾಲೇಜುಗಳನ್ನೇ ನೆಚ್ಚಿಕೊಂಡಿದ್ದಾರೆ. ಬಳ್ಳಾರಿಯಐದಾರು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಸೈನ್ಸ್‌ ವಿಭಾಗದ ಪ್ರವೇಶಕ್ಕೆ ಕನಿಷ್ಠ ₹ 1 ಲಕ್ಷ ಪಾವತಿಸಬೇಕು. ಕೆಲವು ಸಲ ಮುಖ ನೋಡಿ ಮಣೆ ಹಾಕುವುದೂ ಉಂಟು. ಹಾಸ್ಟೆಲ್‌ ಸೌಲಭ್ಯ ಬೇಕೆಂದರೆ ₹ 2.5 ಲಕ್ಷದವರೆಗೆ ಕಟ್ಟಬೇಕು.

ಡೊನೇಷನ್‌ ಹಾವಳಿಗೆ ಬೇಸತ್ತು ಹೆಚ್ಚಿನ ಪೋಷಕರೀಗ ಸರ್ಕಾರಿ ಶಾಲೆ, ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಹೊಸಪೇಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಪಿ.ಯು. ಕಾಲೇಜಿನಲ್ಲಾದ ದಾಖಲೆ ಸಂಖ್ಯೆಯ ಪ್ರವೇಶಾತಿ. ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿ ಜಿಲ್ಲೆಯ ಬಹುತೇಕ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ.

ಇತ್ತೀಚಿನ ಕೆಲ ವರ್ಷಗಳಿಂದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಗುಣಮಟ್ಟದ ಶಿಕ್ಷಣ ದೊರೆ
ಯುತ್ತಿದೆ. ಮೂಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಎಲ್ಲೆಲ್ಲಿ ಮೂಲಸೌಕರ್ಯ ಇಲ್ಲವೋ ಅಂತಹ ಕಡೆಗಳಲ್ಲಿ ಸಿರಿವಂತ ಪೋಷಕರು ಮಕ್ಕಳನ್ನು ಖಾಸಗಿಯಲ್ಲಿ ಸೇರಿಸುತ್ತಿದ್ದಾರೆ. ಆದರೆ, ಇದು ಬಡವರು, ಮಧ್ಯಮ, ಕೆಳ ಮಧ್ಯಮ ವರ್ಗದವರನ್ನು ಸಮಸ್ಯೆಗೆ ಸಿಲುಕಿಸಿದೆ.

ರಾಜಾರೋಷವಾಗಿ ಹೆಚ್ಚಿನ ಶಾಲಾ, ಕಾಲೇಜುಗಳಲ್ಲಿ ಮನಬಂದಂತೆ ಡೊನೇಷನ್‌ ಪಡೆಯಲಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಈ ಕುರಿತು ಕೆಲವು ಸಂಘಟನೆಗಳವರು ದೂರು ಸಲ್ಲಿಸಿದ್ದಾರೆ. ಆದರೆ, ಯಾರ ವಿರುದ್ಧವೂ ಇದುವರೆಗೆ ಕ್ರಮ ಜರುಗಿಸಿಲ್ಲ. ಬಳ್ಳಾರಿ
ಯಲ್ಲಿ ಡೊನೇಷನ್ ಹಾವಳಿ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ ಎಂದುಪದವಿ ಪೂರ್ವ ಶಿಕ್ಷಣದ ಉಪ ನಿರ್ದೇಶಕ (ಪ್ರಭಾರಿ) ಕೆ. ವೆಂಕಟರೆಡ್ಡಿ ’ಪ್ರಜಾವಾಣಿ‘ಗೆ ತಿಳಿಸಿದರು.

’ಕಾಲೇಜುಗಳು ಸರ್ಕಾರದ ಮಾರ್ಗಸೂಚಿ ಅನ್ವಯವೇ ಶುಲ್ಕ ನಿಗದಿಪಡಿಸಿವೆ. ಆದರೆ, ಬೇರೆ ಬೇರೆ ಹೆಸರಿನಲ್ಲಿ ಡೊನೇಷನ್‌ ಸಂಗ್ರಹಿಸುತ್ತವೆ. ಅದಕ್ಕೆ ಬೇರೆಯದೇ ರಶೀದಿಗಳನ್ನು ಕೊಡುತ್ತವೆ. ಹೀಗಾಗಿ, ಡೊನೇಷನ್ ಹಾವಳಿ ನಿಯಂತ್ರಿಸುವುದು ಕಷ್ಟ‘ ಎಂದು ವೆಂಕಟರೆಡ್ಡಿ ಅಭಿಪ್ರಾಯಪಟ್ಟರು.

ವಿಜಯನಗರದಲ್ಲಿ 28 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 19 ಸೇರಿದಂತೆ ಅವಿಭಜಿತ ಜಿಲ್ಲೆಯಲ್ಲಿ ಒಟ್ಟು 47ಸರ್ಕಾರಿ ಪದವಿ ಪೂರ್ವ ಕಾಲೇಜು
ಗಳಿವೆ. ಮಾರ್ಗಸೂಚಿ ಪ್ರಕಾರ ಒಂದು ಸೆಕ್ಷನ್‌ನಲ್ಲಿ 80 ವಿದ್ಯಾರ್ಥಿಗಳು ಇರಬೇಕು. ಕುಳಿತುಕೊಳ್ಳಲು ಸ್ಥಳವಿದ್ದರೆ 150
ವಿದ್ಯಾರ್ಥಿಗಳವರೆಗೆ ಪ್ರವೇಶ ಕೊಡಲಾಗುತ್ತಿದೆ. ಮಂಜೂರಾದ ಉಪನ್ಯಾಸಕ ಹುದ್ದೆ ಖಾಲಿ ಇದ್ದ ಪಕ್ಷದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇಂಥ ಹುದ್ದೆಗಳಿಲ್ಲದ ಕಡೆ ಸರ್ಕಾರದಿಂದ ತುರ್ತು ಒಪ್ಪಿಗೆ ಪಡೆದು ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ 80+20 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ.


ಗ್ರಾಮಾಂತರ ಕಾಲೇಜುಗಳಿಗೆ ಸೇರಲು ನಿರಾಸಕ್ತಿ

ಹೂವಿನಹಡಗಲಿ:ತಾಲ್ಲೂಕಿನ ಗ್ರಾಮಾಂತರ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಸೇರಲು ವಿದ್ಯಾರ್ಥಿಗಳು ನಿರಾಸಕ್ತಿ ಹೊಂದಿದ್ದಾರೆ. ಉತ್ತಮ ಕಟ್ಟಡ, ಮೂಲಸೌಕರ್ಯ ಹೊಂದಿದ್ದರೂ ಪ್ರವೇಶ ಎರಡಂಕಿ ದಾಟಿಲ್ಲ. ಆದರೆ, ಪಟ್ಟಣದ ಸರ್ಕಾರಿ ಕಾಲೇಜಗಳಲ್ಲಿ ಪ್ರವೇಶ ಭರ್ತಿಯಾಗಿವೆ.

ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಕೆಲವು ಶಾಲೆಗಳಲ್ಲಿ ನಿಯಮ ಮೀರಿ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ.

ಸರ್ಕಾರಿ ಕಾಲೇಜಿಗೆ ಹೆಚ್ಚಿನ ಬೇಡಿಕೆ:

ಕೊಟ್ಟೂರು: ಕೊಟ್ಟೂರಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.ಗೊರ್ಲಿ ಶರಣಪ್ಪ ಸರ್ಕಾರಿ ಪಿ.ಯು.ಕಾಲೇಜಿಗೆ ಖಾಸಗಿ ಕಾಲೇಜುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ. ಅದಕ್ಕೆ ಸಾಕ್ಷಿ ಅಲ್ಲಿ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು.

ಪಟ್ಟಣದಲ್ಲಿ ನಾಲ್ಕು ಖಾಸಗಿ, ಒಂದು ಅನುದಾನಿತ ಕಾಲೇಜುಗಳಿದ್ದರೂ ಸರ್ಕಾರಿ ಕಾಲೇಜಿಗೆ ಬೇಡಿಕೆ ಹೆಚ್ಚಿದೆ. ವಿಜ್ಙಾನ, ಕಲಾ, ವಾಣಿಜ್ಯ ಮತ್ತು ಶಿಕ್ಷಣ ವಿಭಾಗಗಳಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕೆಂದು ಶಿಕ್ಷಣ ಪ್ರೇಮಿ ಕೆಂಗನವರ ಉಮಾಶಂಕರ್ ಒತ್ತಾಯಿಸುತ್ತಾರೆ.

ಸರ್ಕಾರಿ ಕಾಲೇಜಿನತ್ತ ವಿದ್ಯಾರ್ಥಿಗಳು

ಹರಪನಹಳ್ಳಿ : ಕಾಲೇಜು ಅಭಿವೃದ್ಧಿ ಶುಲ್ಕ, ಡೊನೇಷನ್ ನೆಪದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ ನಂತರ ಅಧಿಕಾರಿಗಳು ಸಂಬಂಧಿಸಿದ ಕಾಲೇಜುಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ‘ಇನ್ನೂ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ’ ಎಂದು ವಿದ್ಯಾರ್ಥಿ ಮುಖಂಡ ಕೊಟ್ರೇಶ್ ತಿಳಿಸಿದರು.

ವಿಜ್ಞಾನಕ್ಕೆ ಹೆಚ್ಚಿನ ಡೊನೇಷನ್‌

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಖಾಸಗಿ ಪಿ.ಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಸರ್ಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತಲೂ ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯಿಂದ ₹30 ಸಾವಿರ ತೆಗೆದುಕೊಳ್ಳುತ್ತಿದ್ದಾರೆ.

ಈ ವಿಷಯ ಗೊತ್ತಿದ್ದರೂ ಶಿಕ್ಷಣ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಬಡವರಿಗೆ ಖಾಸಗಿ ಕಾಲೇಜುಗಳು ಗಗನ ಕುಸುಮ ಆಗಿವೆ.


ಒಂದೆಡೆ ಆಸಕ್ತಿ, ಇನ್ನೊಂದೆಡೆ ನಿರಾಸಕ್ತಿ

ಕೂಡ್ಲಿಗಿ: ತಾಲ್ಲೂಕಿನಲ್ಲಿ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಪಟ್ಟಣದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನೂಕು ನುಗ್ಗಲು ಉಂಟಾಗುತ್ತಿದೆ. ಆದರೆ, ಗುಡೇಕೋಟೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಗುಡೇಕೋಟೆ ಕಾಲೇಜಿನಲ್ಲಿ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗಗಳಿದ್ದು, ಉತ್ತಮ ಸೌಲಭ್ಯಗಳು ಸಹ ಇವೆ. ಆದರೆ ಪ್ರವೇಶಾತಿ ತೀರ ಕಡಿಮೆ. ಈ ಸಾಲಿನಲ್ಲಿ ಕಲಾ ವಿಭಾಗಕ್ಕೆ 35 ಹಾಗೂ ವಿಜ್ಞಾನ ವಿಭಾಗಕ್ಕೆ 7 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಲ್ಲಿ ಓದಲು ಬರುವವರೆಲ್ಲರೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು. ಆದರೆ, ಹಾಸ್ಟೆಲ್‌ ವ್ಯವಸ್ಥೆ ಇಲ್ಲದರಿಂದ ಬೇರೆ ಕಡೆ ಮುಖ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT