ಗುರುವಾರ , ಮೇ 19, 2022
21 °C

ಇಂಗ್ಲಿಷ್‌ ಮಾಧ್ಯಮ ಶಾಲೆ ಬೇಕಿಲ್ಲ: ಮನು ಬಳಿಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಾವಿರಕ್ಕೂ ಹೆಚ್ಚು ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ನೋವಿನ ಸಂಗತಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಗಳವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಯಾವುದೇ ಕಾರಣಕ್ಕೂ ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ಆರಂಭಿಸಬಾರದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಿದ್ದೆವು. ಅದಕ್ಕೆ ಸಕಾರಾತ್ಮಕವಾಗಿ ಸಿ.ಎಂ. ಸ್ಪಂದಿಸಿದ್ದರು. ಈ ಕುರಿತು ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೂ ಭರವಸೆ ಕೊಟ್ಟಿದ್ದರು. ಆದರೆ, ಈಗ ಇಂಗ್ಲಿಷ್‌ ಶಾಲೆ ಆರಂಭಕ್ಕೆ ಮುಂದಾಗಿರುವುದು ಸರಿಯಲ್ಲ’ ಎಂದು ತಿಳಿಸಿದರು.

‘ಶೀಘ್ರದಲ್ಲೇ ರಾಜ್ಯದ ಪ್ರಮುಖ ಸಾಹಿತಿಗಳು, ಬರಹಗಾರರು, ಚಿಂತಕರ ಸಭೆ ಕರೆದು ಚರ್ಚಿಸಲಾಗುವುದು. ಎಲ್ಲರ ಅಭಿಪ್ರಾಯದ ಮೇರೆಗೆ ಮುಂದುವರಿಯಲಾಗುವುದು. ಇಂಗ್ಲಿಷ್‌ ಬಗೆಗಿನ ಭ್ರಮೆ ಕಳಚಬೇಕು. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಕನ್ನಡ ಶಿಕ್ಷಕರ ಸಂಬಳ ಹೆಚ್ಚಿಸಬೇಕು. ಇಂಗ್ಲಿಷ್‌ ಶಾಲೆಗಳ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ತಂತ್ರಾಂಶದಲ್ಲಿ ಕನ್ನಡದ ಬಳಕೆ ಹೆಚ್ಚೆಚ್ಚೂ ಬರಬೇಕು. ಈ ಕಾರಣಕ್ಕಾಗಿಯೇ ಸಾಹಿತ್ಯ ಪರಿಷತ್ತು 140 ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುತ್ತಿದೆ. ಇದಾದ ನಂತರ ಮತ್ತಷ್ಟು ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಾಗುವುದು’ ಎಂದು ಹೇಳಿದರು.

‘ಪ್ರತಿ ಹಂತದಲ್ಲಿ ಕನ್ನಡದ ಬಳಕೆ ಆಗಬೇಕು. ವ್ಯವಹಾರದಲ್ಲಿ ಹೆಚ್ಚಾಗಿ ಕನ್ನಡವನ್ನು ಉಪಯೋಗಿಸಬೇಕು. ಆಗ ಕನ್ನಡ ಬೆಳೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಹಿರಿಯ ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು