ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕ್‌ ಎಸೆತದಲ್ಲಿ ಈಕೆಗಿಲ್ಲ ಸರಿಸಾಟಿ

Last Updated 5 ಫೆಬ್ರುವರಿ 2019, 12:19 IST
ಅಕ್ಷರ ಗಾತ್ರ

ಕುರುಗೋಡು: ಎಂಟನೇ ತರಗತಿಯಲ್ಲಿ ಓದುತ್ತಿರುವ ಈ ಬಾಲೆ ಡಿಸ್ಕ್‌ ಎಸೆದರೆ ನಿಗದಿಪಡಿಸಿದ ಸ್ಥಳಕ್ಕಿಂತ ದೂರ ಹೋಗಿ ಬೀಳುತ್ತದೆ. ಅಂತಹ ಶಕ್ತಿ ಈ ಎಳೆಯ ಕೈಗಳಲ್ಲಿ ಇದೆ.

ಆ ಶಕ್ತಿ, ಗೆಲುವಿನ ಅದ್ಯಮ ಬಯಕೆ ಹೊಂದಿರುವ ಕೆ. ಅನ್ನಪೂರ್ಣ, ಡಿಸ್ಕ್‌ ಎಸೆತದ ಮೂಲಕ ಎಲ್ಲರ ಮನೆ ಮಾತಾಗಿದ್ದಾಳೆ. ಇತ್ತೀಚೆಗೆ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 21 ಮೀಟರ್‌ ದೂರ ಡಿಸ್ಕ್‌ ಎಸೆದು ಉತ್ತಮ ಸಾಧನೆ ಮಾಡಿದ್ದಾಳೆ.

’ಬಲಗೈಗೆ ನನ್ನ ಸಂಪೂರ್ಣ ಶಕ್ತಿಯನ್ನು ಹಾಕಿ ಡಿಸ್ಕ್ ಎಸೆದರೆ ಅದು ನಾನು ಅಂದುಕೊಂಡಿದ್ದಕ್ಕಿಂತ ದೂರ ಹೋಗಿ ಬೀಳುತ್ತದೆ.ಮೈದಾನದಲ್ಲಿ ನಿಂತರೆ ನನ್ನ ಗುರಿ ಎಲ್ಲೋ ದೂರ. ಅದು ಎಲ್ಲೆಂದು ನನಗೂ ಗೊತ್ತಿಲ್ಲ. ಆದರೆ, ಸಾಧ್ಯವಾದಷ್ಟೂ ದೂರಕ್ಕೆ. ಇತರರು ಎಸೆಯುವುದಕ್ಕಿಂತಲೂ ದೂರಕ್ಕೆ ಎಸೆಯಬೇಕೆಂದೇ ಎಸೆಯುತ್ತೇನೆ. ಬಲಗೈಗೆ ನನ್ನ ಎಲ್ಲ ಶಕ್ತಿಯನ್ನು ಹಾಕಿ ಎಸೆಯುತ್ತೇನೆ’ ಎಂದು ಅನ್ನಪೂರ್ಣ ಹೇಳುತ್ತಾರೆ.

ಪಟ್ಟಣದ ಗಾಂಧಿತತ್ವ ಬಾಲಕಿಯ ವಸತಿ ಶಾಲೆಯಲ್ಲಿ ಓದುತ್ತಿರುವ ಅನ್ನಪೂರ್ಣ,ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ 18 ಮೀಟರ್ ದೂರ ಡಿಸ್ಕ್‌ ಎಸೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ದೈಹಿಕವಾಗಿ ಬಲಾಢ್ಯವಾಗಿರುವ ಈಕೆ ಶಾಟ್ ಪಟ್ ಎಸೆತದಲ್ಲಿಯೂ ಮುಂದಿದ್ದಾಳೆ.

ಸಿರುಗುಪ್ಪ ತಾಲ್ಲೂಕು ಗಡಿಭಾಗದ ಹಚ್ಚೊಳ್ಳಿ ನಿವಾಸಿಯಾದ ಹನುಮಂತಪ್ಪ, ಹುಸೇನಮ್ಮ ದಂಪತಿಗೆ ಕೃಷಿಯೇ ಜೀವನಾಧಾರ. ಇವರ ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಕೊನೆಯ ಮಗಳು ಕೆ.ಅನ್ನಪೂರ್ಣ. ‘ಆಕೆಗೆ ಬಾಲ್ಯದಿಂದಲೂ ಆಟದಲ್ಲಿ ವಿಶೇಷ ಆಸಕ್ತಿ. ಅದರಲ್ಲಿ ಮುಂದುವರಿಯಲು ಬಿಟ್ಟಿದ್ದೇವೆ. ಓದಿನಲ್ಲೂ ಚುರುಕಾಗಿದ್ದಾಳೆ’ ಎನ್ನುತ್ತಾರೆ ಹನುಮಂತಪ್ಪ.

‘ಆರನೇ ತರಗತಿಯಲ್ಲಿ ಇದ್ದಾಗ ಅನ್ನಪೂರ್ಣ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಳು. ದೈಹಿಕವಾಗಿ ಸದೃಢಳಾಗಿರುವ ಕಾರಣ ಡಿಸ್ಕ್‌ ಮತ್ತು ಶಾಟ್ ಪಟ್ ಎಸೆತದಲ್ಲಿ ತರಬೇತಿ ನೀಡಬಹುದು ಅನಿಸಿತು. ಪ್ರಯೋಗಾರ್ಥ ನೀಡಿದ ತರಬೇತಿಗಳಲ್ಲೂ ಆಕೆ ಉತ್ಸಾಹ ತೋರಿಸಿದಳು. ಈಗ ಅದರಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ’ ಎಂದು ಸಹಶಿಕ್ಷಕ ಬಿ. ಪುನೀತ್ ಕುಮಾರ್ ಹೇಳಿದರು.

‘14 ವರ್ಷದೊಳಗಿನ ವಿಭಾಗದಲ್ಲಿ 21 ಮೀಟರ್ ದೂರಕ್ಕೆ ಡಿಸ್ಕ್ ಎಸೆಯುವುದು ಕಠಿಣ ಸವಾಲು. ಅನ್ನಪೂರ್ಣ ಅದನ್ನು ಮೆಟ್ಟಿ ನಿಂತಿರುವುದು ದೊಡ್ಡ ಸಾಧನೆಯೇ ಸರಿ’ ಎನ್ನುತ್ತಾರೆ ಪ್ರಾಂಶುಪಾಲರಾದ ವಿ. ಮಾಲತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT