ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಭಜಿಸಿ ‘ವಿಜಯನಗರ ಜಿಲ್ಲೆ’ ಮಾಡಬೇಕೆಂಬ ಕೂಗಿಗೆ ಅಪಸ್ವರ

ಬಳ್ಳಾರಿ ಜಿಲ್ಲೆ ಪಶ್ಚಿಮ ತಾಲ್ಲೂಕುಗಳಲ್ಲಿ ಮೂಡದ ಒಮ್ಮತ
Last Updated 19 ಸೆಪ್ಟೆಂಬರ್ 2019, 19:34 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿ ಜಿಲ್ಲೆ ವಿಭಜಿಸಿ ನೂತನ ‘ವಿಜಯನಗರ ಜಿಲ್ಲೆ’ ಮಾಡಬೇಕೆಂಬ ಕೂಗಿಗೆ ಪಶ್ಚಿಮ ತಾಲ್ಲೂಕುಗಳಲ್ಲೇ ಅಪಸ್ವರ ಕೇಳಿ ಬಂದಿದೆ.

ವಿಜಯನಗರ ಜಿಲ್ಲೆ ಮಾಡಬೇಕೆಂಬ ಬೇಡಿಕೆ ಇತ್ತೀಚಿನದಲ್ಲ. 2007ರಲ್ಲಿ ಅದರ ಬಗ್ಗೆ ಹೋರಾಟ ನಡೆದಿತ್ತು. ನಂತರದ ದಿನಗಳಲ್ಲಿ ಆ ವಿಷಯ ನನೆಗುದಿಗೆ ಬಿದ್ದಿತ್ತು. ಈಗ ರಾಜಕೀಯ ಕಾರಣಕ್ಕಾಗಿ ಈ ವಿಷಯ ಮತ್ತೆ ಮುಂಚೂಣಿಗೆ ಬಂದಿದೆ. ಅದರಲ್ಲೂ ಅನರ್ಹ ಶಾಸಕ ಆನಂದ್‌ ಸಿಂಗ್‌ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ಮಾಡಬೇಕೆಂದು ನಿಯೋಗದ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮಾಡಿದ್ದಾರೆ.

ಅದಕ್ಕೆ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಹೊರತುಪಡಿಸಿದರೆ ಇತರೆ ತಾಲ್ಲೂಕುಗಳ ಜನಪ್ರತಿನಿಧಿಗಳು, ಹೋರಾಟಗಾರರಿಂದ ಬೆಂಬಲ ವ್ಯಕ್ತವಾಗಿಲ್ಲ. ಕೆಲವರು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಹೋರಾಟಕ್ಕಿಳಿದಿದ್ದಾರೆ. ಮತ್ತೆ ಕೆಲವರು ಹೊಸಪೇಟೆ ಜಿಲ್ಲಾ ಕೇಂದ್ರ ಮಾಡಿದರೆ ಉತ್ತಮ ಎಂದು ವಾದ ಮಂಡಿಸುತ್ತಿದ್ದಾರೆ.

’ಪಶ್ಚಿಮದ ತಾಲ್ಲೂಕುಗಳಿಗೆ ಸಮಾನ ದೂರದಲ್ಲಿರುವ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಮಾಡಿದರೆ ಎಲ್ಲರಿಗೂ ಪ್ರಯೋಜನ. ಅದನ್ನೇ ಜಿಲ್ಲೆ ಮಾಡಬೇಕು‘ ಎಂದು ಸ್ಥಳೀಯ ಶಾಸಕ ಭೀಮಾ ನಾಯ್ಕ ಈ ಹಿಂದೆ ಹೇಳಿದ್ದರು. ಆದರೆ, ಸದ್ಯ ಅವರು ಮೌನ ವಹಿಸಿದ್ದಾರೆ. ಇನ್ನು, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರನ್ನು ಸಂಪರ್ಕಿಸಿದಾಗ ಈ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

‘ವಿಶ್ವವಿಖ್ಯಾತ ಹಂಪಿ, ಉತ್ತಮ ಸಂಪರ್ಕ ವ್ಯವಸ್ಥೆ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಆರೋಗ್ಯ ಸೇವೆ, ಶಿಕ್ಷಣ ಸೇರಿದಂತೆ ಎಲ್ಲ ದೃಷ್ಟಿಯಿಂದಲೂ ಹೊಸಪೇಟೆ ಜಿಲ್ಲೆ ಆಗುವ ಅರ್ಹತೆ ಹೊಂದಿದೆ. ಹೀಗಾಗಿ ವಿಜಯನಗರ ಹೆಸರಿನಲ್ಲಿ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ಜಿಲ್ಲೆ ಮಾಡಿದರೆ ಎಲ್ಲರಿಗೂ ಅನುಕೂಲ’ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

’ಹೊಸಪೇಟೆ ಜಿಲ್ಲಾ ಕೇಂದ್ರ ಮಾಡಿದರೆ ಪಶ್ಚಿಮ ತಾಲ್ಲೂಕುಗಳಿಗೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಹಿಂದುಳಿದ ಹೂವಿನಹಡಗಲಿಯನ್ನು ಜಿಲ್ಲಾ ಕೇಂದ್ರ ಮಾಡಿದರೆ ಈ ಭಾಗದ ಎಲ್ಲ ತಾಲ್ಲೂಕುಗಳಿಗೆ ಆಡಳಿತಾತ್ಮಕವಾಗಿ ಶಕ್ತಿ ತಂದುಕೊಟ್ಟಂತೆ ಆಗುತ್ತದೆ’ ಎಂದು ವಾದ ಮಂಡಿಸುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ.

’ನಂಜುಂಡಪ್ಪನವರ ವರದಿ ಪ್ರಕಾರ, ಹಗರಿಬೊಮ್ಮನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವುದು ಸೂಕ್ತ. ಆಗ ಇಡೀ ಭಾಗ ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಅಷ್ಟೇ ಅಲ್ಲ, ಹೊಸ ಜಿಲ್ಲೆಗೆ ಸೇರಿಸಲು ಉದ್ದೇಶಿಸಿರುವ ಎಲ್ಲ ತಾಲ್ಲೂಕುಗಳು ಹಗರಿಬೊಮ್ಮನಹಳ್ಳಿಯಿಂದ ಸಮಾನ ದೂರದಲ್ಲಿವೆ’ ಎಂದು ವಕೀಲ ಕೊಟ್ರೇಶ್‌ ಶೆಟ್ಟರ್‌ ತಿಳಿಸಿದರು.

**

ವಿಜಯನಗರ ಹೆಸರಿನಲ್ಲಿ ಜಿಲ್ಲೆ ಮಾಡುವುದರಿಂದ ಕನ್ನಡದ ಅಸ್ಮಿತೆ, ಪ್ರಜ್ಞೆಗೆ ಹೆಚ್ಚಿನ ಒತ್ತು ಕೊಟ್ಟಂತಾಗುತ್ತದೆ.
–ಮೃತ್ಯುಂಜಯ ರುಮಾಲೆ, ಹಿರಿಯ ಸಾಹಿತಿ, ಹೊಸಪೇಟೆ

**

ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಪಶ್ಚಿಮ ತಾಲ್ಲೂಕುಗಳ ಮಧ್ಯದಲ್ಲಿದೆ. ಜಿಲ್ಲಾ ಕೇಂದ್ರ ಮಾಡುವುದು ಸೂಕ್ತ.
–ಜೆ.ಎಂ.ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

**

ಆರ್ಥಿಕವಾಗಿ ಮುಂದುವರಿದ ಹೊಸಪೇಟೆಗಿಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೂವಿನಹಡಗಲಿಯನ್ನು ಜಿಲ್ಲಾ ಕೇಂದ್ರ ಮಾಡಿ, ಶಕ್ತಿ ತುಂಬಬೇಕು.
–ಎಂ.ಪಿ.ಎಂ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಹೂವಿನಹಡಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT