ಬಳಸದ ಕೊಳವೆ ಬಾವಿಗಳಿಗೂ ಬಿಲ್

ಕೊಟ್ಟೂರು: ‘ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಿಗೆ ಕೋಟಿ ರೂಪಾಯಿಗೂ ಅಧಿಕ ವಿದ್ಯುತ್ ಬಿಲ್ ಬಂದಿದೆ. ಒಂದೊಂದು ಪಂಚಾಯಿತಿಯಲ್ಲಿ ಇಷ್ಟೊಂದು ಹಣ ಬಾಕಿ ಇದ್ದರೆ ಅದನ್ನು ಪಾವತಿಸುವುದು ಹೇಗೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಾನಭೋಗರ ಗುರುಮೂರ್ತಿ ಜೇಸ್ಕಾಂ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ವಿವಿಧ ಇಲಾಖೆಯ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿದರು.
ಜೆಸ್ಕಾಂ ಜೆಇ ಕೊಟ್ರಪ್ಪ, ‘ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಆರ್‌ಆರ್ ಸಂಖ್ಯೆ ನೀಡಬೇಕು. ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಮಾಹಿತಿ ನೀಡದ ಕಾರಣ ಈ ರೀತಿಯಾಗಿದೆ. ಕೆಲವು ಪಂಚಾಯಿತಿಯವರು ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದಾರೆ. ಬಿಲ್ ಪಾವತಿಸುವುದು ಅನಿವಾರ್ಯ’ ಎಂದು ಹೇಳಿದರು.
ಹಣ ಬಾಕಿ ಇರುವ ಪ್ರಕರಣಕ್ಕೆ ಪಿಡಿಒ ಹಾಗೂ ಜೆಸ್ಕಾಂ ಅಧಿಕಾರಿಗಳನ್ನು ಹೊಣೆಯಾಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‍ನಾಯ್ಕ ಒತ್ತಾಯಿಸಿದರು.
ಸ್ಥಗಿತಗೊಂಡ ಕೊಳವೆ ಬಾವಿಗಳ ಮಾಹಿತಿಯನ್ನು ಜೆಸ್ಕಾಂಗೆ ನೀಡುವಂತೆ ಜಿಲ್ಲಾ ಪಂಚಾಯ್ತಿಸಿಇಒ ತಿಳಿಸಿ 6 ತಿಂಗಳಾದರೂ ಪಿಡಿಒಗಳು ಏಕೆ ನೀಡಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಇಒ ವಿಶ್ವನಾಥ ತರಾಟೆಗೆ ತೆಗೆದುಕೊಂಡರು.
‘ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಡಾ.ಅಂಬೇಡ್ಕರ್ ಭವನ ಮಂಜೂರಾ
ಗಿದೆ. ಸುಂಕದಕಲ್ಲು, ತೂಲಹಳ್ಳಿ ಪಂಚಾಯಿತಿಯವರು ಜಾಗ ನೀಡ
ಬೇಕಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ಜಗದೀಶ್ ಮಾಹಿತಿ ನೀಡಿದರು. ಜಾಗ ನೀಡಲು ಕೆಲವರು ಆಕ್ಷೇಪ ಎತ್ತಿದ್ದಾರೆ ಎಂದು ಪಿಡಿಒಗಳು ಮಾಹಿತಿ ನೀಡದರು.
ರಾಂಪುರದಲ್ಲಿ ಜಾಗ ಇದ್ದರೂ ನಿರ್ಮಾಣಕ್ಕೆ ಮುಂದಾಗದ ಕುರಿತು, ಭೂಮಿ ಪೂಜೆಗೆ ಶಾಸಕರ ದಿನಾಂಕ ಸಿಕ್ಕಿಲ್ಲ ಎಂದು ಕೆ.ಆರ್.ಐ.ಡಿ.ಬಿ.ನ ಚಂದ್ರಾನಾಯ್ಕ ಪ್ರತಿಕ್ರಿಯಿಸಿದರು.
‘ಒಂದೆರಡು ದಿನಗಳಲ್ಲಿ ಶಾಸಕರ ದಿನಾಂಕ ನಿಗದಿ ಮಾಡಬೇಕು. ಇಲ್ಲ
ವಾದಲ್ಲಿ ಕಾಮಗಾರಿ ಪ್ರಾರಂಭಿಸಬೇಕು’ ಎಂದು ಸಚಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಅವರ ಪರವಾಗಿ ಹಾಜರಿದ್ದ ಗಾರ್ಡ್, ಪ್ರಗತಿ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ.
ತಾಲ್ಲೂಕು ವೈದ್ಯಾಧಿಕಾರಿ ಷಣ್ಮುಖನಾಯ್ಕ, ಕೃಷಿ ಸಹಾಯಕ ಶ್ಯಾಂ ಸುಂದರ್, ಬಿಇಒ ಉಮಾದೇವಿ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಸಂಗೋಪನಾ ಇಲಾಖೆ, ಕಂದಾಯ ಮತ್ತಿತರ ಇಲಾಖೆ ಅಧಿಕಾರಿಗಳು ವರದಿ ನೀಡಿದರು. ಉಪಾಧ್ಯಕ್ಷೆ ಮಮತಾ ನಾಗರಾಜ ಇದ್ದರು.
ಸಭೆಗೆ ಗೈರಾಗಿದ್ದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.