ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಾಸಸ್ಥಾನಗಳಿಗೆ ಧಕ್ಕೆ, ಎಗ್ಗಿಲ್ಲದೆ ಬೇಟೆ: ಅಳಿವಿನ ಅಂಚಿಗೆ ಗುಳ್ಳೇನರಿ ಸಂತತಿ

ಅಕ್ಷರ ಗಾತ್ರ

ಹೊಸಪೇಟೆ: ಒಂದು ಕಾಲದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಯಥೇಚ್ಛ ಸಂಖ್ಯೆಯಲ್ಲಿದ್ದ ಗುಳ್ಳೇನರಿಗಳ ಸಂತತಿ ಇದು ಅಳಿವಿನ ಅಂಚಿಗೆ ಬಂದು ನಿಂತಿದೆ.

ಒಂದೆಡೆ ಚಿರತೆ, ಕರಡಿಗಳ ಸಂತತಿ ವೃದ್ಧಿಯಾಗುತ್ತಿದೆ. ಆಹಾರ ಹುಡುಕಿಕೊಂಡು ಅವುಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಇನ್ನೊಂದೆಡೆ, ಗುಳ್ಳೇನರಿಗಳ ಮೂಲ ಆವಾಸಸ್ಥಾನಗಳೇ ಹಾಳಾಗುತ್ತಿವೆ. ಅತಿಸೂಕ್ಷ್ಮ ಪ್ರಾಣಿಯಾಗಿರುವ ಅವುಗಳ ಸಂತತಿ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದು ನಿಂತಿರುವುದಕ್ಕೆ ವನ್ಯಜೀವಿ ಪ್ರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಗುಳ್ಳೇನರಿಗಳನ್ನು ಛಾಯಾಚಿತ್ರಗಳಲ್ಲಷ್ಟೇ ಮಕ್ಕಳಿಗೆ ತೋರಿಸುವ ಸಂದರ್ಭ ಬಂದೊದಗಬಹುದು ಎಂಬ ಆತಂಕ ಕೂಡ ಅವರದಾಗಿದೆ.

ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ ಪ್ರಕಾರ, ‘ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿ ಗುಳ್ಳೇನರಿಗಳು ಇವೆ. ಎಲ್ಲ ಕಡೆ ಕುರುಚಲು ಕಾಡು, ಬೆಟ್ಟ ಗುಡ್ಡ ಇರುವುದರಿಂದ ಈ ವಾತಾವರಣ ಅವುಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಅವುಗಳ ಮೂಲ ಆವಾಸ ಸ್ಥಾನಗಳಿಗೆ ಧಕ್ಕೆ ಆಗುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುತ್ತಿರಬಹುದು’ ಎಂದು ಹೇಳಿದರು.

ಹೆಸರು ಬಹಿರಂಗಪಡಿಸಲು ಇಚ್ಛಿಸದ ವನ್ಯಜೀವಿ ತಜ್ಞರು ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗವೊಂದಿದೆ. ಆ ಜನಾಂಗ ವಾರದಲ್ಲಿ ಎರಡರಿಂದ ಮೂರು ಪ್ರಾಣಿಗಳನ್ನು ಈಗಲೂ ಬೇಟೆಯಾಡುತ್ತದೆ. ಅದರಲ್ಲಿ ಗುಳ್ಳೇನರಿಗಳು ಸೇರಿವೆ. ಅವರಿಗೆ ವನ್ಯಜೀವಿಗಳ ಮಾಂಸದ ಬಗ್ಗೆ ವಿಪರೀತ ಹುಚ್ಚು ಇದೆ’ ಎಂದು ತಿಳಿಸಿದರು.

‘ಈ ವಿಷಯವನ್ನು ಅರಣ್ಯ ಇಲಾಖೆಯ ಸ್ಥಳೀಯ ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅದಕ್ಕೆ ಕಡಿವಾಣ ಬಿದ್ದಿಲ್ಲ. ಈಗಲೂ ಅದು ಎಗ್ಗಿಲ್ಲದೆ ಮುಂದುವರೆದಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ’ ಎಂದು ಪ್ರತಿಪಾದಿಸಿದರು.

‘ಕೆಲ ಬುಡಕಟ್ಟು ಜನಾಂಗದವರಿಗೆ ಅರಣ್ಯದ ಇಂಚಿಂಚೂ ಮಾಹಿತಿ ಇರುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿಗೂ ಅದು ಗೊತ್ತಿರುವುದಿಲ್ಲ. ಹೀಗಾಗಿ ಸುಲಭವಾಗಿ ಅವರು ಬೇಟೆಯಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬರುವ ಅಧಿಕಾರಿಗಳಂತೂ, ಎಲ್ಲಿಯವರೆಗೆ ವಾಹನಗಳು ಅರಣ್ಯದೊಳಗೆ ಹೋಗುತ್ತವೆ ಅಲ್ಲಿಯವರೆಗಷ್ಟೇ ಹೋಗಿ ಪರಿಶೀಲನೆ ನಡೆಸುತ್ತಾರೆ. ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುವುದಿಲ್ಲ. ಇದು ಬೇಟೆಗಾರರ ಕೆಲಸ ಇನ್ನಷ್ಟು ಸುಲಭಗೊಳಿಸಿದೆ. ಈ ಮನೋಭಾವ ಬದಲಾಗಬೇಕು. ಅರಣ್ಯ ಇಲಾಖೆಯವರು ಅರಣ್ಯದೊಳಗೆ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ಇಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯ ಎಲ್ಲ ಭಾಗಗಳಲ್ಲಿ ಗುಳ್ಳೇನರಿಗಳಿವೆ. ಅದರಲ್ಲೂ ದರೋಜಿ, ಗುಡೇಕೋಟೆಯಲ್ಲಿ ಅಧಿಕ ಸಂಖ್ಯೆಯಲ್ಲಿವೆ. ಎಲ್ಲ ಸುರಕ್ಷಿತವಾಗಿವೆ’ ಎನ್ನುತ್ತಾರೆ ಡಿ.ಎಫ್‌.ಒ. ರಮೇಶ ಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT