ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಶಾಸಕ ಸೋಮಶೇಖರ ರೆಡ್ಡಿ ಮನೆಗೆ ಮುತ್ತಿಗೆಗೆ ಯತ್ನ, ಲಘು ಲಾಠಿ ಪ್ರಹಾರ

ಸಹಸ್ರಾರು ಜನರಿಂದ ಪ್ರತಿಭಟನೆ
Last Updated 4 ಜನವರಿ 2020, 10:40 IST
ಅಕ್ಷರ ಗಾತ್ರ

ಬಳ್ಳಾರಿ: ಒಂದು ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿರಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿರುವ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರ ಮನೆಗೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.

ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಹಸ್ರಾರು ಜನ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ಪೈಕಿ ನೂರಾರು ಜನ ರೆಡ್ಡಿ ಮನೆಗೆ ಮುತ್ತಿಗೆ ಹಾಕುವುದಕ್ಕೆ ಮುಂದಾದರು, ಅದನ್ನು ನೋಡಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಲ್ಲಿಗೆ ತೆರಳುತ್ತಿದ್ದವರನ್ನು ಚದುರಿಸಿದರು.

ನಗರದ ಕೌಲ್‌ ಬಜಾರ್‌ನಿಂದ ಆರಂಭವಾದ ರ್‍ಯಾಲಿಯು ಪ್ರಮುಖ ರಸ್ತೆಗಳ ಮೂಲಕ ಗಡಿಗಿ ಚೆನ್ನಪ್ಪ ವೃತ್ತಕ್ಕೆ ಬಂದು ತಲುಪಿತು. ಬೃಹತ್‌ ತ್ರಿವರ್ಣ ಧ್ವಜ ಹಿಡಿದುಕೊಂಡು ಹೆಜ್ಜೆ ಹಾಕಿದರು. ರ್‍ಯಾಲಿಯುದ್ದಕ್ಕೂ ರೆಡ್ಡಿ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರೆಡ್ಡಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಇದೇ ವೃತ್ತದಲ್ಲಿ ಶುಕ್ರವಾರ ಸೋಮಶೇಖರ ರೆಡ್ಡಿ ಪ್ರಚೋದನಕಾರಿಯಾಗಿ ಮಾತನಾಡಿದ್ದರು.

ಗಡಿಗಿ ಚೆನ್ನಪ್ಪ ವೃತ್ತದಲ್ಲಿ ತಡಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾಡಿದ ಮನವಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ.

‘ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದ ಶಾಸಕರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕು’ ಎಂದು ಎಸ್ಪಿ ಮನವಿ ಮಾಡಿದರು. ಆಗ ಪ್ರತಿಭಟನಾಕಾರರು ‘ಎಸ್ಪಿ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.

ಆದರೆ, ಪ್ರತಿಭಟನೆ ಕೈಬಿಡಲಿಲ್ಲ. ಹೀಗಾಗಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಳ್ಳಾರಿ ವಲಯದ ಐ.ಜಿ. ನಂಜುಂಡಸ್ವಾಮಿ ಅವರು ಕೈಯಲ್ಲಿ ಲಾಠಿ ಹಿಡಿದುಕೊಂಡು ಬಂದೋಬಸ್ತ್‌ಗೆ ನಿಂತಿದ್ದರು. ಇನ್ನೊಂದೆಡೆ ರೆಡ್ಡಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT