ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಸ್‌ ನೀಡಲು ಆಗ್ರಹಿಸಿ ಪ್ರತಿಭಟನೆ

ನೌಕರರಿಂದ ‘ಅಖಿಲ ಭಾರತ ಬೋನಸ್‌’ ದಿನಾಚರಣೆ
Last Updated 20 ಅಕ್ಟೋಬರ್ 2020, 15:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ 19 ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದರೂ ಸರ್ಕಾರ ದಸರಾ ಹಬ್ಬದ ಬೋನಸ್‌ ನೀಡಿಲ್ಲ. ಈ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಕಚೇರಿ ಮುಂದೆ ಮಂಗಳವಾರ ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಎಂ. ಡಿಕ್ರೂಜ್‌ ‘ಬೋನಸ್ ನೀಡುವ ಸಂಬಂಧ ರೈಲ್ವೆ ಮಂಡಳಿಯು ಹಣಕಾಸು ಇಲಾಖೆಗೆ ದಾಖಲೆಗಳನ್ನು ಕಳುಹಿಸಿದ್ದರೂ ಅನುಮತಿ ಸಿಕ್ಕಿಲ್ಲ. ಪ್ರತಿ ಸಲ ದುರ್ಗಾ ಪೂಜೆಗೆ ಒಂದು ವಾರ ಮೊದಲು ಬೋನಸ್‌ ಕೊಡಲಾಗುತಿತ್ತು. ಈ ಬಾರಿ ಕೊಡದ ಕಾರಣ ಸಿಬ್ಬಂದಿ ಸ್ಥಿತಿ ಚಿಂತಾಜನಕವಾಗಿದೆ’ ಎಂದರು.

ರೈಲ್ವೆ ಇಲಾಖೆ ಖಾಸಗೀಕರಣ ಮತ್ತು ಹೊರಗುತ್ತಿಗೆಗೆ ಒತ್ತು ಕೊಡುತ್ತಿದೆ. ರೈಲ್ವೆಯಲ್ಲಿ ಕಾರ್ಪೊರೇಟ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಇಲಾಖೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಉದ್ಯೋಗಿಗಳಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಸಭೆ ನಡೆಸಿದ ಸಂಘದ ಪದಾಧಿಕಾರಿಗಳು ದೇಶದ 7,600 ರೈಲ್ವೆ ನಿಲ್ದಾಣಗಳಲ್ಲಿ ‘ರೈಲ್ವೆ ಉಳಿಸಿ, ದೇಶ ಉಳಿಸಿ’ ಆಂದೋಲನ ನಡೆಸಲು ನಿರ್ಧರಿಸಲಾಯಿತು. ಆದ್ದರಿಂದ ಸ್ಥಳೀಯ ರೈಲ್ವೆ ಬಳಕೆದಾರರು ಮತ್ತು ಗಣ್ಯ ವ್ಯಕ್ತಿಗಳು ಈ ಹೋರಾಟದಲ್ಲಿ ಬೆಂಬಲ ನೀಡಬೇಕು, ಖಾಸಗೀಕರಣ ವಿರುದ್ಧ ದನಿ ಎತ್ತಿ ಬೇಕು ಎಂದು ಅವರು ಕೋರಿದರು.

ಯೂನಿಯನ್‌ನ ಪ್ರಮುಖರಾದ ಎಸ್‌.ಎಫ್‌. ಮಲ್ಲದ್‌, ಕೆ. ವೆಂಕಟೇಶ, ಜಯಲಕ್ಷ್ಮಿ, ಪಿ. ರಂಗಪ್ಪ, ಅಲ್ಬರ್ಟ್‌ ಡಿಕ್ರೂಜ್‌, ಪ್ರವೀಣ ಪಾಟೀಲ, ಜಾಕೀರ್ ಸನದಿ ಪಾಲ್ಗೊಂಡಿದ್ದರು.

ಇಂದು ಮಹತ್ವದ ಸಭೆ

ಮಂಗಳವಾರದ ಪ್ರತಿಭಟನೆಗೆ ಸಿಕ್ಕ ಬೆಂಬಲ ಮತ್ತು ಮುಂದಿನ ಹೋರಾಟದ ಯೋಜನೆ ರೂಪಿಸಲು ಮಜ್ದೂರ್‌ ಯೂನಿಯನ್‌ ಸಂಘದ ಪ್ರಮುಖರು ಬುಧವಾರ ಸಭೆ ನಡೆಸಲಿದ್ದಾರೆ.

‘ವರ್ಚುವಲ್‌ ಮೂಲಕ ದೇಶದಾದ್ಯಂತ ಸಭೆ ನಡೆಯಲಿದ್ದು, ದಸರಾ ಬೋನಸ್ ನೀಡುವ ಸಂಬಂಧ ರೈಲ್ವೆ ಮಂಡಳಿ ಆದೇಶ ಹೊರಡಿಸದಿದ್ದರೆ ಅ. 22ರಂದು ರಾಷ್ಟ್ರವ್ಯಾಪಿ ರೈಲು ಸಂಚಾರ ಸ್ಥಗಿತಗೊಳಿಸಲು ಮುಂದಾಗಿದ್ದೇವೆ. ಇದರ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ’ ಎಂದು ಎ.ಎಂ. ಡಿಕ್ರೂಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT