ಗುರುವಾರ , ಫೆಬ್ರವರಿ 25, 2021
28 °C

PV Web Exclusive: ನೂರು ವರ್ಷದ ಕಾಂಗ್ರೆಸ್‌ ಪಾರುಪತ್ಯ ಕೊನೆ?

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಮೇಲೆ ನೂರು ವರ್ಷಗಳಿಂದ ಕಾಂಗ್ರೆಸ್‌ ಹೊಂದಿದ್ದ ಪಾರುಪತ್ಯ ಕೊನೆಗೊಳ್ಳುವ ದಿನಗಳು ಸಮೀಪಿಸಿವೆ.

ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ಅವರು ನೀಡಿರುವ ರಾಜೀನಾಮೆ ಸೋಮವಾರ (ಜ.18) ಅಧಿಕೃತವಾಗಿ ಅಂಗೀಕಾರಗೊಂಡಿದೆ. ಡಿಸೆಂಬರ್‌ನಲ್ಲಿ ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು, ಜನವರಿಯಲ್ಲಿ ನಡೆದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಗೆದ್ದು ಬಿಡಿಸಿಸಿ ಬ್ಯಾಂಕಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಇಷ್ಟರಲ್ಲೇ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಆನಂದ್‌ ಸಿಂಗ್‌ ಅವರ ದೃಷ್ಟಿ ಅದರ ಮೇಲೆ ನೆಟ್ಟಿದೆ. ಬ್ಯಾಂಕಿನ ಮೂಲಗಳ ಪ್ರಕಾರ, ಆನಂದ್‌ ಸಿಂಗ್‌ ಅವರು ಅವಿರೋಧವಾಗಿ ಅಧ್ಯಕ್ಷರಾಗುವುದು ನಿಶ್ಚಿತ. ಹೆಸರಿಗಷ್ಟೇ ಚುನಾವಣೆ ಪ್ರಕ್ರಿಯೆ ಮುಗಿಸಬೇಕಿದೆ.

‘ಆನಂದ್‌ ಸಿಂಗ್‌ ಅವರು ಅರಣ್ಯ ಸಚಿವರಾಗಿದ್ದಾರೆ. ಅವರು ಬ್ಯಾಂಕಿನ ಅಧ್ಯಕ್ಷರಾದರೆ ಸರ್ಕಾರದ ಮಟ್ಟದಲ್ಲಿ ಬೇಗ ಕೆಲಸಗಳಾಗುತ್ತವೆ. ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಅವರು ಬ್ಯಾಂಕಿನ ಅಧ್ಯಕ್ಷರಾಗುವುದರಲ್ಲಿ ತಪ್ಪೇನಿಲ್ಲ. ಸಹಕಾರ ಕ್ಷೇತ್ರಕ್ಕೆ ಯಾರು ಬೇಕಾದರೂ ಬರಬಹುದು. ಸಹಕಾರ ತತ್ವದಡಿ ಕೆಲಸ ಮಾಡಬೇಕಾಗುತ್ತದೆ’ ಎಂದು ಹಲವು ಹಾಲಿ ನಿರ್ದೇಶಕರು ಹೇಳಿದ್ದಾರೆ. ಈ ಹೇಳಿಕೆಗಳನ್ನು ಗಮನಿಸುವುದಾದರೆ ಆನಂದ್‌ ಸಿಂಗ್‌ ಅವರ ಹಾದಿ ಸುಗಮ ಎಂದು ಯಾರಾದರೂ ನಿರೀಕ್ಷಿಸಬಹುದು.

ನೂರು ವರ್ಷದ ಇತಿಹಾಸ:

ಅಂದಹಾಗೆ, 1920ರ ಡಿಸೆಂಬರ್‌ 22ರಂದು ಅಸ್ತಿತ್ವಕ್ಕೆ ಬಂದಿರುವ ಬಿಡಿಸಿಸಿ ಬ್ಯಾಂಕ್‌ ಶತಮಾನೋತ್ಸವದ ಸಂಭ್ರಮದಲ್ಲಿದೆ. ಅಸುಂಡಿ ಭೀಮರಾವ ಅವರು ಬ್ಯಾಂಕಿನ ಮೊದಲ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಬ್ಯಾಂಕ್‌ ಮದರಾಸ್‌ ಕೋ ಆಪರೇಟಿವ್‌ ಕಾಯ್ದೆಯ ಅಡಿಯಲ್ಲಿ ನೋಂದಣಿಯಾಗಿತ್ತು. ಬಳಿಕ 1959ರಲ್ಲಿ ‘ಕರ್ನಾಟಕ ಕೋ ಆಪರೇಟಿವ್‌ ಸೊಸೈಟೀಸ್‌ ಆ್ಯಕ್ಟ್‌’ ಅಡಿ ಕೆಲಸ ನಿರ್ವಹಿಸಲು ಆರಂಭಿಸಿತು.

ಆರಂಭದಿಂದಲೂ ಬ್ಯಾಂಕಿನ ಮೇಲೆ ಕಾಂಗ್ರೆಸ್‌ ಹಿಡಿತವಿದೆ. ಬ್ಯಾಂಕಿನ ಬಹುತೇಕ ನಿರ್ದೇಶಕರು ಕಾಂಗ್ರೆಸ್‌ ಪಕ್ಷದ ಹಿನ್ನೆಲೆ ಹೊಂದಿರುವವರೇ ಆಗಿದ್ದರು. ಮಧ್ಯೆ ಕೆಲ ವರ್ಷ ಜನತಾ ಪರಿವಾರದವರು ನಿರ್ದೇಶಕರಾಗಿದ್ದರು. ಆದರೆ, ಹೆಚ್ಚಿನ ಅವಧಿ ಕಾಂಗ್ರೆಸ್‌ನವರೇ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಆನಂದ್‌ ಸಿಂಗ್‌ ಅವರನ್ನು ಹೊರತುಪಡಿಸಿದರೆ ಈಗಿರುವ ಎಲ್ಲ ನಿರ್ದೇಶಕರು ಕೂಡ ಕಾಂಗ್ರೆಸ್‌ ಜತೆಗೆ ನಿಕಟ ಸಂಬಂಧ ಹೊಂದಿದವರು, ಆ ಪಕ್ಷದ ಜತೆಗೆ ಗುರುತಿಸಿಕೊಂಡವರೇ ಆಗಿದ್ದಾರೆ. ಹೀಗಿದ್ದರೂ ಅವರಿಗೆ ಅಧ್ಯಕ್ಷ ಗಾದಿ ಆನಂದ್‌ ಸಿಂಗ್‌ ಅವರಿಗೆ ಬಿಟ್ಟು ಕೊಡುವ ಅನಿವಾರ್ಯತೆ ಬಂದೊದಗಿದೆ.

‘ಬಳ್ಳಾರಿ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಸಹಜವಾಗಿಯೇ ಬಿಡಿಸಿಸಿ ಬ್ಯಾಂಕಿನ ಮೇಲೆ ಆ ಪಕ್ಷದವರ ಹಿಡಿತವಿದೆ. ಬಿಜೆಪಿ ಈಗಷ್ಟೇ ಕಣ್ಣು ತೆರೆದಿರುವ ಪಕ್ಷ. ಆದರೆ, ಸದ್ಯ ಆ ಪಕ್ಷ ಅಧಿಕಾರದಲ್ಲಿದೆ. ಆ ಪಕ್ಷದವರೇ ಆದ ಆನಂದ್‌ ಸಿಂಗ್‌ ಅವರು ಸಚಿವರಾಗಿರುವುದರಿಂದ ಅಧ್ಯಕ್ಷ ಗಾದಿಗೆ ಯಾರು ಕೂಡ ಅವರ ವಿರುದ್ಧ ಸ್ಪರ್ಧಿಸಲು ಧೈರ್ಯ ತೋರುವುದಿಲ್ಲ. ಅವರ ಹಾದಿ ಸುಗಮಗೊಂಡಿದೆ. ಯಾರೇ ಆಗಲಿ ರೈತರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕೆಲಸ ಮಾಡಿದರೆ ಸಾಕು’ ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕಿನ ಹಿರಿಯ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು