ಗುರುವಾರ , ಜೂನ್ 24, 2021
27 °C

PV Web Exclusive: ಒಳ್ಳೆಯ ಮುಹೂರ್ತ; ತಲೆಕೆಳಗಾದ ಲೆಕ್ಕಾಚಾರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಬಸವ ಜಯಂತಿಯು ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳಿಗೆ ಒಳ್ಳೆಯ ಮುಹೂರ್ತ ಎಂದು ಭಾವಿಸಲಾಗುತ್ತದೆ. ಛಾಯಾಗ್ರಾಹಕರು ಇದೇ ಸಂದರ್ಭಕ್ಕಾಗಿ ವರ್ಷವಿಡೀ ಕಾಯುತ್ತಿರುತ್ತಾರೆ. ಆದರೆ, ಕೋವಿಡ್‌ ನಿಷೇಧಾಜ್ಞೆ ಅವರ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದೆ.

ಕೋವಿಡ್‌–19ನಿಂದ ಸಾವನ್ನಪ್ಪುವವರ ಸಂಖ್ಯೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಡಳಿತವು ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಿದೆ. ಬಸವ ಜಯಂತಿಯ ದಿನವೇ ಮದುವೆ ನಡೆಸಲು ಅನೇಕರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಜಿಲ್ಲಾಡಳಿತದ ತೀರ್ಮಾನದಿಂದ ಅವರು ಕಂಗಾಲಾಗಿದ್ದಾರೆ. ಮದುವೆಗಳನ್ನೇ ನೆಚ್ಚಿಕೊಂಡು ಬದುಕುತ್ತಿರುವ ನೂರಾರು ಛಾಯಾಗ್ರಾಹಕರಿಗೆ ಈ ನಿರ್ಧಾರ ಆಘಾತ ಉಂಟು ಮಾಡಿದೆ.

ಬಳ್ಳಾರಿ–ವಿಜಯನಗರ ಜಿಲ್ಲೆಗಳೆರಡಲ್ಲಿ ಬಸವ ಜಯಂತಿಯಂದು ಸಾವಿರಕ್ಕೂ ಹೆಚ್ಚು ಮದುವೆಗಳು ನಿಶ್ಚಯವಾಗಿದ್ದವು. ಅಂದಹಾಗೆ, ಇದರಲ್ಲಿ ಶೇ 95ರಷ್ಟು ವಿವಾಹ ನಿಶ್ಚಯವಾಗಿದ್ದು ಮೂರು ತಿಂಗಳ ಹಿಂದೆಯೇ. ಆದರೆ, ಹಠಾತ್‌ ಲಾಕ್‌ಡೌನ್‌ ಮಾಡಿದ್ದರಿಂದ ಸರಳವಾಗಿಯಾದರೂ ಮದುವೆ ಮಾಡಿ ಮುಗಿಸಿ ಬಿಡೋಣ ಎಂದು ಹಲವರು ಯೋಜಿಸಿದ್ದರು. ಆದರೆ, ಮದುವೆ ಸಂಘಟಿಸಲು ಅನುಮತಿ ನಿರಾಕರಿಸಿರುವುದರಿಂದ ಅವುಗಳನ್ನು ಸದ್ಯದ ಮಟ್ಟಿಗೆ ರದ್ದುಪಡಿಸಿರುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ.

ಹೊಸಪೇಟೆ ನಗರವೊಂದರಲ್ಲೇ 250ಕ್ಕೂ ಅಧಿಕ ಜನ ಛಾಯಾಗ್ರಾಹಕರು ಇದ್ದಾರೆ. ಅವಳಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಾವಿರಕ್ಕೂ ಅಧಿಕ. ಇವರ ಆದಾಯದ ಪ್ರಮುಖ ಮೂಲ ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳು. ಅಂದಹಾಗೆ, ಬಸವ ಜಯಂತಿಗೆ ಒಬ್ಬೊಬ್ಬ ಛಾಯಾಗ್ರಾಹಕರಿಗೆ ನಾಲ್ಕೈದು ಕಾರ್ಯಕ್ರಮಗಳಿಗೆ ಬೇಡಿಕೆ ಬಂದಿದ್ದವು. ಮುಂಗಡವಾಗಿ ಹಣ ಪಡೆದು, ಎಲ್ಲ ಬೇಡಿಕೆಗಳನ್ನು ಪೂರೈಸಲು ಹೆಚ್ಚುವರಿ ಕೆಲಸಗಾರರ ವ್ಯವಸ್ಥೆಯೂ ಮಾಡಿಕೊಂಡಿದ್ದರು. ಆದರೆ, ಅವರ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ.

‘ಎಲ್ಲ ಜಾತಿ, ಜನಾಂಗದವರು ಬಸವ ಜಯಂತಿ ಒಳ್ಳೆಯ ಮುಹೂರ್ತ ಎಂದು ಭಾವಿಸುತ್ತಾರೆ. ಆ ದಿನ ಹೆಚ್ಚಿನವರು ಮದುವೆ ಮಾಡುತ್ತಾರೆ. ಈ ವರ್ಷವೂ ಸಾಕಷ್ಟು ಮದುವೆಗಳು ನಿಶ್ಚಯವಾಗಿದ್ದವು. ಆದರೆ, ಸೋಮವಾರ ಜಿಲ್ಲಾಡಳಿತ ಕೈಗೊಂಡ ನಿರ್ಧಾರದಿಂದ ಅವುಗಳನ್ನು ಮುಂದೂಡಲಾಗಿದೆ. ಇದರಿಂದಾಗಿ ಛಾಯಾಗ್ರಾಹಕರಿಗೂ ದೊಡ್ಡ ಪೆಟ್ಟು ಬಿದ್ದಿದೆ’ ಎನ್ನುತ್ತಾರೆ ವೆಡ್ಡಿಂಗ್‌ ಫೋಟೋಗ್ರಾಫರ್‌ ಕೆ.ಎಂ. ಕೊಟ್ರೇಶ್‌.

‘ಕೋವಿಡ್‌ ಇದ್ದರೂ 50 ಜನರನ್ನು ಸೇರಿಸಿ ಮದುವೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ವಿಡಿಯೊ, ಫೋಟೊಗ್ರಫಿ ಇಲ್ಲದೆ ಯಾರೊಬ್ಬರೂ ಮದುವೆ ಮಾಡುವುದಿಲ್ಲ. ಹೇಗೋ ನಮ್ಮ ಕೆಲಸ ನಡೆಯುತ್ತಿತ್ತು. ಈಗ ಸಂಪೂರ್ಣವಾಗಿ ಮದುವೆಗಳ ಮೇಲೆ ನಿರ್ಬಂಧ ವಿಧಿಸಿರುವುದರಿಂದ ನಮಗೆ ಕೆಲಸ ಇಲ್ಲದಂತಾಗಿದೆ. ಮುಂಗಡವಾಗಿ ಹಣ ಕೊಟ್ಟವರು ವಾಪಸ್‌ ಕೇಳುತ್ತಿದ್ದಾರೆ’ ಎಂದು ಗೋಳು ತೋಡಿಕೊಂಡರು.

ಕನಿಷ್ಠ ಪರಿಹಾರ ನೀಡಲಿ: ‘ಸರ್ಕಾರ ಅಗತ್ಯ ವಸ್ತುಗಳ ಖರೀದಿಗೆ ಹೇಗೆ ಸಮಯ ಮೀಸಲಿಟ್ಟಿದೆಯೋ ಅದೇ ಪ್ರಕಾರ, ಬೇಕಾದರೆ ಅದೇ ಸಮಯದೊಳಗೆ ಕಡಿಮೆ ಜನರೊಂದಿಗೆ ಸರಳವಾಗಿ ಮದುವೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕಿತ್ತು. ಛಾಯಾಗ್ರಾಹಕರಿಗೆ ಸಣ್ಣ ಪ್ರಮಾಣದ ಆದಾಯವಾದರೂ ಬರುತ್ತಿತ್ತು. ಸಂಪೂರ್ಣ ನಿರ್ಬಂಧದಿಂದ ಅದು ನಿಂತು ಹೋಗಿದೆ. ಪುನಾ ಕೆಲಸ ಆರಂಭವಾಗುವವರೆಗೆ ಸರ್ಕಾರ ಕನಿಷ್ಠ ಪ್ರಮಾಣದ ಪರಿಹಾರವಾದರೂ ನೀಡಬೇಕು’ ಎನ್ನುತ್ತಾರೆ ಹವ್ಯಾಸಿ ಹಾಗೂ ಶುಭ ಸಮಾರಂಭಗಳ ಛಾಯಾಗ್ರಾಹಕರ ಎಸ್‌.ಎಸ್‌. ರಾಚಯ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು