ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕನಕದಾಸ ವೃತ್ತದಲ್ಲಿ ಬೇರೊಂದು ವೃತ್ತ!

ವೃತ್ತ, ಮೂರ್ತಿಗಳಿಂದಲೇ ಸದಾ ಸುದ್ದಿಯಲ್ಲಿರುವ ಹೊಸಪೇಟೆ ನಗರ
Last Updated 16 ಫೆಬ್ರುವರಿ 2021, 13:21 IST
ಅಕ್ಷರ ಗಾತ್ರ

ಹೊಸಪೇಟೆ: ನಗರದಲ್ಲೀಗ ವೃತ್ತ, ಮೂರ್ತಿಗಳದ್ದೇ ಮಾತು. ಅದರ ಸುತ್ತಲೇ ಚರ್ಚೆಗಳು ಗಿರಕಿ ಹೊಡೆಯುತ್ತಿವೆ.

ನಗರ ಹೊರವಲಯದ ಜೋಳದರಾಶಿ ಗುಡ್ಡದ ಮೇಲೆ ಕೃಷ್ಣದೇವರಾಯನ ಮೂರ್ತಿ ಕೂರಿಸಬೇಕೋ ಅಥವಾ ಸ್ವಾಮಿ ವಿವೇಕಾನಂದರದ್ದು ಪ್ರತಿಷ್ಠಾಪಿಸಬೇಕೋ ಎನ್ನುವ ಚರ್ಚೆಗಳು ನಡೆಯುತ್ತಿರುವಾಗಲೇ ಈಗ ಕನಕದಾಸ ವೃತ್ತದ ಬಳಿ ಹೊಸದಾಗಿ ನಿರ್ಮಿಸುತ್ತಿರುವ ವೃತ್ತದಿಂದ ಹೊಸ ವಿವಾದ ಸೃಷ್ಟಿಯಾಗಿದೆ.

ರೈಲು ನಿಲ್ದಾಣಕ್ಕೆ ಹೋಗುವ ಐದು ರಸ್ತೆಗಳು ಕೂಡುವ ವೃತ್ತದಲ್ಲಿ ಈಗಾಗಲೇ ಕನಕದಾಸರ ಮೂರ್ತಿ ಒಳಗೊಂಡ ವೃತ್ತವಿದೆ. ಹೀಗಿದ್ದರೂ ಅಲ್ಲಿ ಮತ್ತೊಂದು ವೃತ್ತ ನಿರ್ಮಾಣಕ್ಕೆ ಮುಂದಾಗಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ. ಹೊಸ ವೃತ್ತ ನಿರ್ಮಾಣಕ್ಕೆ ಕುರುಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ವೃತ್ತ, ಮೂರ್ತಿಗಳ ಪ್ರತಿಷ್ಠಾಪನೆಯ ವಿಷಯದಲ್ಲಿ ನಗರದಲ್ಲಿ ಹೊಸದಾಗೇನೂ ವಿವಾದ ಸೃಷ್ಟಿಯಾಗಿಲ್ಲ. ಈ ಹಿಂದೆ ರಾಮಾ ಟಾಕೀಸ್‌ ಬಳಿ ಮೂರ್ತಿ ಪ್ರತಿಷ್ಠಾಪನೆಯ ವಿಚಾರದಲ್ಲಿ ಮೂರ್ನಾಲ್ಕು ಸಮುದಾಯದವರು ಎದುರು ಬದುರಾಗಿದ್ದರು. ಆದರೆ, ಅಂತಿಮವಾಗಿ ಅಲ್ಲಿ ಮದಕರಿ ನಾಯಕನ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಮಧ್ಯರಾತ್ರಿಯಲ್ಲಿ ಮೂರ್ತಿ ತಂದು ಕೂರಿಸಿದ್ದರೂ ನಗರಸಭೆ ಕಣ್ಮುಚ್ಚಿ ಕುತಿತ್ತು. ಬಳಿಕ ಠಾಣೆಗೆ ದೂರು ಕೊಟ್ಟಿತ್ತು. ಆದರೆ, ಇದುವರೆಗೆ ಯಾರೊಬ್ಬರ ವಿರುದ್ಧ ಕ್ರಮ ಆಗಿಲ್ಲ.

ಈ ಕುರಿತು ನಗರಸಭೆಯ ಪೌರಾಯುಕ್ತ ಮನ್ಸೂರ್‌ ಅಲಿ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ಮದಕರಿ ನಾಯಕನ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಠಾಣೆಗೆ ದೂರು ಕೊಡಲಾಗಿತ್ತು. ನಂತರ ಏನಾಯಿತು ಗೊತ್ತಾಗಿಲ್ಲ. ಪರಿಶೀಲಿಸಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಾದ ನಂತರ ರೋಟರಿ ವೃತ್ತದಲ್ಲಿ ದಲಿತರು, ಲಿಂಗಾಯತರು ಮತ್ತು ಮುಸ್ಲಿಂ ಸಮುದಾಯದವರು ಅವರ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದರು. ಆದರೆ, ಬಳಿಕ ಅಲ್ಲಿ 150 ಅಡಿ ಧ್ವಜ ಸ್ತಂಭ ನಿರ್ಮಿಸಿದ ನಂತರ ಆ ವಿಷಯ ಅಲ್ಲಿಗೆ ಕೊನೆಗೊಂಡಿತು. ಇನ್ನೇನು ಎಲ್ಲವೂ ಸರಿ ಹೋಯಿತು ಅನ್ನುವಷ್ಟರಲ್ಲಿ ಕನಕದಾಸ ವೃತ್ತದ ವಿಷಯ ಈಗ ಮುಂಚೂಣಿಗೆ ಬಂದಿದೆ. ಕುರುಬ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ.

‘ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ 70 ವರ್ಷಗಳ ಹಿಂದೆಯೇ ಕನಕದಾಸರ ವೃತ್ತ ನಿರ್ಮಿಸಿ, ಅವರ ಹೆಸರಿಡಲಾಗಿದೆ. ಈ ಹಿಂದೆ ರಸ್ತೆ ವಿಸ್ತರಿಸಿದಾಗ ರಸ್ತೆಯ ಮಧ್ಯದಲ್ಲಿ ಮೂರ್ತಿ ಇಡುವುದರ ಬದಲು ಒಂದು ಅಂಚಿನಲ್ಲಿ ಇಡಲಾಗಿತ್ತು. ಈಗ ಏಕಾಏಕಿ ರಸ್ತೆಯ ಮಧ್ಯದಲ್ಲಿ ಇನ್ನೊಂದು ವೃತ್ತ ನಿರ್ಮಿಸುತ್ತಿರುವುದು ಸರಿಯಲ್ಲ. ಇದು ಕನಕದಾಸರಿಗೆ ಮಾಡುವ ಅವಮಾನ’ ಎಂದು ತಾಲ್ಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದಪ್ಪ ಪ್ರತಿಕ್ರಿಯಿಸಿದ್ದಾರೆ.

ಸಮಾಜದ ಹಿರಿಯ ಮುಖಂಡ ರಾಮಚಂದ್ರಗೌಡ ಪ್ರತಿಕ್ರಿಯಿಸಿ, ‘ಕನಕದಾಸರಿಗೆ ಅಪಮಾನ ಆಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಇಷ್ಟರಲ್ಲೇ ಸಮಾಜದ ಹಿರಿಯ, ಕಿರಿಯರೆಲ್ಲ ಸಭೆ ಸೇರಿ ಚರ್ಚಿಸಲಾಗುತ್ತದೆ. ಬಳಿಕ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

ಲಿಖಿತ ಅನುಮತಿ ಪಡೆಯದೆ ಕೆಲಸ: ಅಧಿಕಾರಿಗಳಿಂದ ತದ್ವಿರುದ್ಧ ಹೇಳಿಕೆ

ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸ್ವಾತಂತ್ರ್ಯ ಉದ್ಯಾನ ನಿರ್ಮಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಅದರ ಎದುರಿನ ಐದು ರಸ್ತೆ ಕೂಡುವ ಜಾಗದಲ್ಲಿ ಕಾರಂಜಿ, ಯೋಧರ ಮೂರ್ತಿ ಇರುವ ವೃತ್ತವನ್ನು ನಿರ್ಮಿಸಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ, ನಗರಸಭೆಯಿಂದ ಇದುವರೆಗೆ ಲಿಖಿತ ರೂಪದಲ್ಲಿ ಅನುಮತಿ ಪಡೆದುಕೊಂಡಿಲ್ಲ. ಕೇವಲ ಮೌಖಿಕ ಒಪ್ಪಿಗೆಯಷ್ಟೇ ಪಡೆಯಲಾಗಿದೆ. ಈ ವಿಷಯವನ್ನು ಸ್ವತಃ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿಯವರೇ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
ಮನ್ಸೂರ್‌ ಅಲಿ ಪ್ರಕಾರ, ‘ಸ್ವಾತಂತ್ರ್ಯ ಉದ್ಯಾನ ಹತ್ತಿರದಲ್ಲೇ ಇರುವುದರಿಂದ ಅಲ್ಲಿ ಲೋಕೋಪಯೋಗಿ ಇಲಾಖೆಯವರು ಹೊಸದಾಗಿ ವೃತ್ತ ನಿರ್ಮಿಸಿ ಬೃಹತ್‌ ಧ್ವಜ ಸ್ತಂಭ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿಶೋರ್‌, ‘ಅಲ್ಲಿ ನಮ್ಮ ಇಲಾಖೆಯಿಂದ ಕೆಲಸ ಮಾಡುತ್ತಿಲ್ಲ’ ಎಂದು ತದ್ವಿರುದ್ಧವಾದ ಹೇಳಿಕೆ ಕೊಟ್ಟಿದ್ದಾರೆ. ವೃತ್ತದ ಸ್ವರೂಪ, ಯಾವ ಇಲಾಖೆ ಕೆಲಸ ಮಾಡುತ್ತಿದೆ ಎನ್ನುವ ವಿಷಯವೇ ನಗರಸಭೆಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

***

ಕನಕದಾಸರ ವೃತ್ತದಲ್ಲಿ ಬೇರೊಂದು ವೃತ್ತ ಮಾಡುವುದು ಸರಿಯಲ್ಲ. ಕುರುಬರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು.

–ಚಿದಾನಂದಪ್ಪ, ಪ್ರಧಾನ ಕಾರ್ಯದರ್ಶಿ, ತಾಲ್ಲೂಕು ಕುರುಬರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT