ಚಿತ್ತವಾಡ್ಗಿ ಠಾಣೆ ಎಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸಪೇಟೆ (ವಿಜಯನಗರ): ಚಿತ್ತವಾಡ್ಗಿ ಠಾಣೆಯ ಎಎಸ್‌ಐ ಎಂ. ಶಬ್ಬೀರ್ ಹುಸೇನ್ ಅವರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಶುಕ್ರವಾರ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆ.
ನಗರದ ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಳಿಕ ಮನವಿ ಪತ್ರ ಸಲ್ಲಿಸಿದರು.
ಜೂ. 26ರಂದು ಸಂಜೆ 5.55ರ ಸುಮಾರಿಗೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಬೈಕ್ ಮೇಲೆ ತೆರಳುತ್ತಿದ್ದಾಗ ಅವರನ್ನು ತಡೆದ ಶಬ್ಬೀರ್ ಅವರು, ಸರ್ಕಾರಕ್ಕೆ ₹100, ನನಗೆ ₹100 ಎಂದು ಲಂಚ ಪಡೆದಿದ್ದಾರೆ. ಹಣ ಕೊಡಲು ಆಗದಿದ್ದರೆ ₹5,000 ಕಟ್ಟಿ, ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದಿದ್ದಾರೆ. ಕಾನೂನು ಮೀರಿ ವರ್ತಿಸಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಚಿತ್ತವಾಡ್ಗಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಯಪ್ರಕಾಶ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಗಣೇಶ್ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಅವರಿಗೆ ₹200 ದಂಡ ವಿಧಿಸಿದ್ದಾರೆ. ಶಬ್ಬೀರ್ ಯಾರಿಂದಲೂ ಲಂಚ ಪಡೆದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ.ಯ. ಗಣೇಶ, ಚಂದ್ರಶೇಖರ್, ಈ. ರಘುಪತಿ, ಈಶ ನಾಯಕ, ಗಾದಿಲಿಂಗ, ಎಂ. ಯಲ್ಲಪ್ಪ, ಎಂ. ಈರಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.