ಶನಿವಾರ, ಮಾರ್ಚ್ 6, 2021
19 °C
ಕುಡಿಯುವ ನೀರು, ಮೇವಿಗೆ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ

ಬೇಸಿಗೆ ಸಮರ್ಥವಾಗಿ ಎದುರಿಸಲು ಸಿದ್ಧರಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಬೇಸಿಗೆ ಮುಗಿಯುವವರೆಗೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ಮೇವಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಎಲ್ಲ ಅಧಿಕಾರಿಗಳು ವಾರದಲ್ಲಿ ಕನಿಷ್ಠ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮಸ್ಥರ ಕುಂದು ಕೊರತೆ ಆಲಿಸಬೇಕು. ಯಾವ ಗ್ರಾಮದಲ್ಲಿ ಕುಡಿಯುವ ನೀರು, ಮೇವಿಗೆ ತೀವ್ರ ಸಮಸ್ಯೆ ಇದೆಯೋ ಅಂತಹ ಗ್ರಾಮಗಳ ಪಟ್ಟಿ ಮಾಡಿ ಮಾಹಿತಿ ಕೊಡಬೇಕು. ಇದರಿಂದ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ತಾಲ್ಲೂಕಿಗೆ ಸರ್ಕಾರ ₹50 ಲಕ್ಷ ಹಣ ಬಿಡುಗಡೆ ಮಾಡಿದೆ. ಕೊಳವೆಬಾವಿ, ಮೋಟಾರ್‌ ದುರಸ್ತಿಗೆ ಹಣ ಬಳಸಿಕೊಳ್ಳಬಹುದು. ಇದರ ಜತೆಗೆ ಹೆಚ್ಚುವರಿಯಾಗಿ ₹25 ಲಕ್ಷ ತಹಶೀಲ್ದಾರ್‌ ಖಾತೆಗೆ ಜಮೆ ಮಾಡಲಾಗಿದೆ. ಕುಡಿಯುವ ನೀರು, ಮೇವು ಪೂರೈಸಲು ಈ ಹಣ ಬಳಸಬಹುದಾಗಿದೆ’ ಎಂದರು.

‘ಮೊದಲೇ ತಾಲ್ಲೂಕು ಬರಪೀಡಿತ ಎಂದು ಘೋಷಿಸಲಾಗಿದೆ. ಬೇಸಿಗೆ ಕೂಡ ಆರಂಭವಾಗಿದೆ. ಬರುವ ದಿನಗಳಲ್ಲಿ ನೀರು, ಮೇವಿಗೆ ಹಾಹಾಕಾರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ನಿತ್ಯ ಎಲ್ಲ ತಾಲ್ಲೂಕುಗಳ ಮಾಹಿತಿ ಪಡೆಯುತ್ತಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಲೋಪವಾದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಿತ್ಯ ಒಂದು ಜಾನುವಾರಿಗೆ ಐದು ಕೆ.ಜಿ. ಮೇವು ನೀಡಲಾಗುತ್ತಿದೆ. ಪ್ರತಿ ಕೆ.ಜಿ. ಮೇವಿಗೆ ₹2 ದರ ಸರ್ಕಾರ ನಿಗದಿಪಡಿಸಿದೆ’ ಎಂದು ಪಶು ಸಂಗೋಪನಾ ಮತ್ತು ಪಶು ವೈದ್ಯ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣೆ ತಿಳಿಸಿದರು.

‘ಬರಗಾಲ ತೀವ್ರವಾದರೆ ಉಚಿತವಾಗಿ ಮೇವು ಪೂರೈಸಲಾಗುವುದು. ಕೆಲವು ಸಣ್ಣ ರೈತರು ಹೋಬಳಿ ಕೇಂದ್ರಗಳಿಗೆ ಹೋಗಿ ಮೇವು ಪಡೆಯಲು ತೊಂದರೆಯಾಗುತ್ತಿದೆ. ಆರ್ಥಿಕ ಹೊರೆ ಬೀಳುತ್ತಿದೆ. ಅದನ್ನು ತಪ್ಪಿಸುವುದಕ್ಕಾಗಿ ನೇರವಾಗಿ ಅವರ ಮನೆ ಬಾಗಿಲಿಗೆ ಮೇವು ಪೂರೈಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಂಪಾಪತಿ, ‘ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ತಾಲ್ಲೂಕಿನ ಒಂಬತ್ತು ಗ್ರಾಮಗಳನ್ನು ಗುರುತಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಾಗ ಗುರುತಿಸಲಾಗಿದೆ’ ಎಂದರು.

‘ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಪ್ರತಿ ಗ್ರಾಮದಲ್ಲಿ ಎರಡು ಕಿರು ಹೊಂಡ ನಿರ್ಮಿಸಿ, ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಹೊಂಡಗಳನ್ನು ನಿರ್ಮಿಸಬಹುದಾಗಿದೆ’ ಎಂದು ಗಮನಕ್ಕೆ ತಂದರು.

‘ಜೇನು ಸಾಕಾಣಿಕೆಗೆ ಹನ್ನೊಂದು ಫಲಾನುಭವಿಗಳ ಪೈಕಿ ನಾಲ್ವರಿಗೆ ತಲಾ ನಾಲ್ಕು ಜೇನು ಪೆಟ್ಟಿಗೆ ವಿತರಿಸಲಾಗಿದೆ. ಶೇ 40ರಷ್ಟು ಹಣ ಇಲಾಖೆಯೇ ಭರಿಸಲಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜೇಂದ್ರ ತಿಳಿಸಿದರು.

ಶಿಷ್ಟಾಚಾರ ಉಲ್ಲಂಘನೆಗೆ ಅಸಮಾಧಾನ:

‘ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದಾಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಸದಸ್ಯರನ್ನು ಕರೆಯದೇ ಶಿಷ್ಟಾಚಾರ ಉಲ್ಲಂಘಿಸಿರುವುದು ಸರಿಯಲ್ಲ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಷಣ್ಮುಖಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕು ಪಂಚಾಯಿತಿ ಸದಸ್ಯರೆಂದರೆ ಇಷ್ಟು ಕನಿಷ್ಠರೇ? ಕರೆಯದೇ ಇರುವುದಕ್ಕೆ ಏನು ಕಾರಣ’ ಎಂದು ಕೇಳಿದರು. ಅದಕ್ಕೆ ದನಿಗೂಡಿಸಿದ ಅಧ್ಯಕ್ಷೆ ಜೋಗದ ನೀಲಮ್ಮ, ‘ಇತ್ತೀಚೆಗೆ ಕಾರಿಗನೂರಿನಲ್ಲಿ ಇದೇ ರೀತಿ ಮಾಡಿದ್ದಾರೆ’ ಎಂದು ಗರಂ ಆದರು.

‘ಭವಿಷ್ಯದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಟಿ. ವೆಂಕೋಬಪ್ಪ ಅವರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಎಚ್ಚರಿಕೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.