ಶನಿವಾರ, ಜೂನ್ 19, 2021
22 °C

ಬಲರಾಮನಿಗೆ ಬಲ ತಂದ ಶ್ಯಾವಿಗೆ

ಸಿ.ಶಿವಾನಂದ Updated:

ಅಕ್ಷರ ಗಾತ್ರ : | |

Prajavani

ಹಗರಿಬೊಮ್ಮನಹಳ್ಳಿ: ಶ್ಯಾವಿಗೆ ಮೂಲಕ ಬದುಕು ಕಟ್ಟಿಕೊಂಡು, ಜೀವನಕ್ಕೆ ಬಲ ತಂದುಕೊಂಡ ಪಟ್ಟಣದ ಬಲರಾಮನ ಯಶೋಗಾಥೆ ಇದು.

ಪಟ್ಟಣದ ರಾಷ್ಟ್ರೋತ್ಥಾನ ಶಾಲೆ ಬಳಿಯ ರೇಣುಕಮ್ಮ ಹೋಟೆಲ್ ಬಳಿಯಿರುವ ನಿವಾಸದಲ್ಲಿ ನಿತ್ಯ ಶ್ಯಾವಿಗೆ ಖರೀದಿಸಲು ಜನ ನೆರೆದಿರುತ್ತಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ. ಯುವಕನೊಬ್ಬ ಕೋಲುಗಳಲ್ಲಿ ಶ್ಯಾವಿಗೆಯನ್ನು ಇಳಿ ಬಿಡುತ್ತಿದ್ದರೆ, ಮತ್ತೊಬ್ಬ ಯಂತ್ರದ ಬಾಯಿಯಲ್ಲಿ ಹಸಿ ಹಿಟ್ಟು ಹಾಕುತ್ತಿರುತ್ತಾನೆ. ಹತ್ತಾರು ಜನ ನೋಡುತ್ತಾ ನಿಂತಿರುತ್ತಾರೆ. ತಾಜಾ ಶ್ಯಾವಿಗೆ ಖರೀದಿಸಲು ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಬಂದಿರುತ್ತಾರೆ. ಇದು ನಿತ್ಯ ಬಲರಾಮ ಅವರ ಮನೆ ಎದುರು ಕಂಡು ಬರುವ ದೃಶ್ಯ.

ಐದು ವರ್ಷದ ಹಿಂದೆ ಆರಂಭಿಸಿರುವ ಶ್ಯಾವಿಗೆ ತಯಾರಿಸುವ ಕಿರು ಉದ್ಯಮಕ್ಕೆ ಬಲರಾಮ ₹1 ಲಕ್ಷ ಬಂಡವಾಳ ಹೂಡಿ, ಕೊಯಮತ್ತೂರಿನಿಂದ ಎರಡು ಯಂತ್ರಗಳನ್ನು ಖರೀದಿಸಿ ತಂದಿದ್ದರು. ಅದರಲ್ಲಿ ಶ್ಯಾವಿಗೆ ತಯಾರಿಕೆ, ಹಿಟ್ಟು ಮಿಶ್ರಣ ಮಾಡುವ ಯಂತ್ರಗಳು ಸೇರಿವೆ.

ಸುರ್ಯೋದಯದ ವೇಳೆ ಆರಂಭವಾಗುವ ಶ್ಯಾವಿಗೆ ತಯಾರಿಸುವ ಕಾಯಕ ಮಧ್ಯಾಹ್ನದ ವೇಳೆಗೆ ಮುಗಿದು ಬಿಡುತ್ತದೆ. ಅಳಿಯ ನಾಗರಾಜ್ ಅವರೊಂದಿಗೆ ಕೂಡಿಕೊಂಡು ಕೆಲಸ ಆರಂಭಿಸುವ ಬಲರಾಮ, ಮಧ್ಯಾಹ್ನದ ವೇಳೆಗೆ 50 ಕೆ.ಜಿ.ಯಷ್ಟು ಶ್ಯಾವಿಗೆ ತಯಾರಿಸುತ್ತಾರೆ. ಒಣಗಿದ ಗೋಧಿ ಹಿಟ್ಟನ್ನು ನೀರಿನಲ್ಲಿ ಯಂತ್ರದ ಸಹಾಯದಿಂದ ಮಿಶ್ರಣಮಾಡಿ ವಿದ್ಯುತ್ ಯಂತ್ರದಲ್ಲಿ ಹಾಕುತ್ತಾರೆ. ಆಗ ಬಿಳಿ ದಾರದ ರೂಪದ ಶ್ಯಾವಿಗೆ ಕಟ್ಟು ರೂಪದಲ್ಲಿ ಇಳಿಯುತ್ತಿರುತ್ತದೆ. ಒಂದೂವರೆ ಅಡಿ ಉದ್ದದ ಬಳಿಕ ತನ್ನಿಂತಾನೆ ಕತ್ತರಿಸಿ ಹಾಕುತ್ತದೆ. ಆಗ ಬಿದಿರಿನ ಕೋಲುಗಳ ಮೇಲೆ ಇಳಿ ಬಿಟ್ಟು, ನಾಲ್ಕರಿಂದ ಐದು ತಾಸು ಬಿಸಿಲಿನಲ್ಲಿ ಒಣಗಿಸುತ್ತಾರೆ. ಒಣಗಿದ ಬಳಿಕ ಅತ್ಯುತ್ತಮ ಗುಣಮಟ್ಟದ ಶ್ಯಾವಿಗೆ ಸಿದ್ಧಗೊಳ್ಳುತ್ತದೆ.

ಆರಂಭದ ದಿನಗಳಲ್ಲಿ ಆಟೊದಲ್ಲಿ ಶ್ಯಾವಿಗೆಯನ್ನು ಹಳ್ಳಿಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು. ಈಗ ಆ ಕಷ್ಟವಿಲ್ಲ. ಜನ ಖುದ್ದು ಇವರ ಬಳಿ ಬಂದು ಖರೀದಿಸುತ್ತಾರೆ. ಪ್ರತಿ ಕೆ.ಜಿ.ಶ್ಯಾವಿಗಿಗೆ ₹50 ಬೆಲೆ ನಿಗದಿಪಡಿಸಲಾಗಿದೆ. ಇ‌‌ದನ್ನೇ ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸಿದರೆ ₹100 ಆಗುತ್ತದೆ. ಬಲರಾಮ ಅವರ ಬಳಿ ಖರೀದಿಸಿದರೆ ಉತ್ತಮ ಗುಣಮಟ್ಟದ ಜತೆಗೆ ಹಣ ಕೂಡ ಉಳಿತಾಯ ಆಗುತ್ತದೆ.

‘50 ಕೆ.ಜಿ.ಶ್ಯಾವಿಗೆ ತಯಾರಿಸಿ ಮಾರಾಟ ಮಾಡಿದರೆ ಎಲ್ಲ ಖರ್ಚು ತೆಗೆದು ₹700 ರಿಂದ ₹800  ಆದಾಯ ಸಿಗುತ್ತದೆ. ಗ್ರಾಹಕರೇ ಗೋಧಿ ಹಿಟ್ಟು ತೆಗೆದುಕೊಂಡು ಬಂದರೆ ₹14 ಕೆ.ಜಿ.ಯಂತೆ ಶ್ಯಾವಿಗೆ ಮಾಡಿಕೊಡಲಾಗುತ್ತದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಬಲರಾಮ.

ಶ್ಯಾವಿಗೆ ತಯಾರಿಸುವುದರ ಜತೆಗೆ ಹಿಟ್ಟಿನ ಗಿರಣಿ ಕೂಡ ಬಲರಾಮ ನಡೆಸುತ್ತಿದ್ದಾರೆ. ಬೇಡಿಕೆ ಬಂದಾಗಲೆಲ್ಲ ಪೇಂಟಿಂಗ್‌ ಕೂಡ ಮಾಡುತ್ತಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು