ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಮಾತು ಉಳಿಸಿಕೊಂಡ ಸಚಿವ ಆನಂದ್ ಸಿಂಗ್; ದಶಕದ ಹೋರಾಟಕ್ಕೆ ಜಯ

ವಿಜಯನಗರ‌ ಜಿಲ್ಲೆ ರಚನೆಗೆ ಹಾದಿ ಸುಗಮ
Last Updated 18 ನವೆಂಬರ್ 2020, 8:09 IST
ಅಕ್ಷರ ಗಾತ್ರ
ADVERTISEMENT
""

ಹೊಸಪೇಟೆ: ವಿಶಾಲ ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸಬೇಕೆಂಬ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ದಶಕಗಳ ಹೋರಾಟಕ್ಕೆ ಜಯ ಸಿಗುವ ಕಾಲ ಬಂದೊದಗಿದೆ.

ವಿಜಯನಗರ ಜಿಲ್ಲೆ ರಚನೆಗೆ ಬುಧವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಸಂಭ್ರಮ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಜಿಲ್ಲೆ ರಚನೆ ಕುರಿತು ಚರ್ಚೆಗಳು ಆರಂಭಗೊಂಡಿವೆ. ಸರ್ಕಾರದ ಕ್ರಮವನ್ನು ಅನೇಕರು ಸ್ವಾಗತಿಸಿ, ಪೋಸ್ಟ್ ಮಾಡುತ್ತಿದ್ದಾರೆ.

ಹೋರಾಟದ ಹಿನ್ನೆಲೆ: ವಿಜಯನಗರ ಜಿಲ್ಲೆ ರಚಿಸಬೇಕೆಂಬ ಕೂಗು, ಅದಕ್ಕೆ ಸಂಬಂಧಿಸಿದಂತೆ ಹೋರಾಟಗಳು ಆರಂಭವಾಗಿದ್ದು 2007ರಲ್ಲಿ. ಆ ವರ್ಷ ಸತತ ಮೂರು ತಿಂಗಳು ಹೋರಾಟ ನಡೆದಿತ್ತು. ವಿಜಯನಗರ ಜಿಲ್ಲಾ ಹೋರಾಟ‌ ಸಮಿತಿ ರಚಿಸಿಕೊಂಡು ಜಿಲ್ಲೆಗಾಗಿ ಈ ಭಾಗದ ಜನ ಹೋರಾಟ ನಡೆಸಿದ್ದರು. ಆದರೆ, ಆ ಬೇಡಿಕೆ ಈಡೇರಿರಲಿಲ್ಲ. ಬಳಿಕ ಹೋರಾಟ ನಿಂತು ಬಿಟ್ಟಿತ್ತು. ಮನವಿ ಪತ್ರ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಿತ್ತು.

ಆದರೆ, 2019ರಲ್ಲಿ ಈ ವಿಷಯಕ್ಕೆ ಹೆಚ್ಚಿನ ಮಹತ್ವ ಬಂತು. ಈ ವಿಷಯವನ್ನು ಮುಂದಿಟ್ಟುಕೊಂಡು ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಅವರು, ವಿಜಯನಗರ ಜಿಲ್ಲೆ ಮಾಡುವುದೇ ನನ್ನ ಮುಖ್ಯ ಗುರಿ ಎಂದು ಅಬ್ಬರದ ಪ್ರಚಾರ ನಡೆಸಿದ್ದರು. ಮುಖ್ಯಮಂತ್ತಿ ಬಿ.ಎಸ್. ಯಡಿಯೂರಪ್ಪ ಕೂಡ ಆನಂದ್ ಸಿಂಗ್ ಅವರ ಬೇಡಿಕೆಗೆ ಸ್ಪಂದಿಸಿ, ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಮಾಹಿತಿ ಕ್ರೋಢಿಕರಿಸಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದರು. ಜಿಲ್ಲಾಡಳಿತ ಅದಕ್ಕೆ ಸಂಬಂಧಿಸಿದ ಮಾಹಿತಿ ಕ್ರೋಢಿಕರಿಸಿ ಜಿಲ್ಲೆ ರಚನೆ ಕುರಿತು ಸರ್ಕಾರಕ್ಕೆ‌ ವತದಿ ಸಲ್ಲಿಸಿತ್ತು.ಆದರೆ, ಬಳ್ಳಾರಿ ಶಾಸಕ ಜಿ.‌ಸೋಮಶೇಖರ್ ರೆಡ್ಡಿ ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ವಿಷಯ ನನೆಗುದಿಗೆ ಬಿದ್ದಿತ್ತು. ಬಳಿಕ ಆನಂದ್ ಸಿಂಗ್ ಅರಣ್ಯ ಸಚಿವರಾದರು. 'ಸಚಿವಗಿರಿಗಿಂತ ಜಿಲ್ಲೆ ಮಾಡುವುದೇ ನನ್ನ ಮೊದಲ ಕರ್ತವ್ಯ. ಅದನ್ನು ಮಾಡಿಯೇ ತೀರುತ್ತೇನೆ' ಎಂದು ಅನೇಕ ಸಲ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ಕೊಟ್ಟಿದ್ದರು.

ಸಚಿವ ಆನಂದ್ ಸಿಂಗ್

ಈಗ ನುಡಿದಂತೆ ನಡೆದುಕೊಂಡಿದ್ದಾರೆ. ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಈಗ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ ಸಿಕ್ಕಿರುವುದಕ್ಕೆ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ವೈ.ಯಮುನೇಶ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

‘ದಶಕಗಳ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ. ಈ ನಿರ್ಧಾರದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದಷ್ಟು ಶೀಘ್ರ ಮುಖ್ಯಮಂತ್ರಿ ಜಿಲ್ಲೆ ಘೋಷಿಸಬೇಕು. ಜಿಲ್ಲೆ ರಚನೆಗೆ ಶ್ರಮಿಸಿದ ಆನಂದ್ ಸಿಂಗ್ ಅವರು ಅಭಿನಂದನಾರ್ಹರು’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಅಗತ್ಯ ಏಕಿದೆ?: ಸದ್ಯ ಬಳ್ಳಾರಿ ಜಿಲ್ಲೆ ಹನ್ನೊಂದು ತಾಲ್ಲೂಕುಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ, ಹರಪನಹಳ್ಳಿ ತಾಲ್ಲೂಕುಗಳ ಹಳ್ಳಿಗಳು ಇನ್ನೂರು ಕಿ.ಮೀಗೂ ಹೆಚ್ಚು ದೂರದಲ್ಲಿವೆ. ಕಚೇರಿ ಸೇರಿದಂತೆ ಇತರೆ ಕೆಲಸಗಳಿಗೆ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ಸಮಸ್ಯೆಯಾಗುತ್ತಿತ್ತು.‌

ಭೌಗೋಳಿಕವಾಗಿ ಜಿಲ್ಲೆ ವಿಶಾಲವಾಗಿರುವುದರಿಂದ ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ವಿಜಯನಗರ ಜಿಲ್ಲೆ ರಚಿಸಬೇಕು. ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳನ್ನು ಅದರ ವ್ಯಾಪ್ತಿಗೆ ಸೇರಿಸಬೇಕು. ಹೀಗೆ ಮಾಡಿದರೆ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ. ಆಡಳಿತದ ಹಿತದೃಷ್ಟಿಯಿಂದಲೂ ಜಿಲ್ಲೆ ಆಗಬೇಕಿದೆ ಎಂಬ ವಾದ ಇದೆ. ಈಗ ಅದಕ್ಕೆ ಪುಷ್ಟಿ ಸಿಕ್ಕಿದೆ.

ವಿಜಯನಗರ ನೂತನ ಜಿಲ್ಲೆಗೆ ಸೇರಿಸಲು ಉದ್ದೇಶಿಸಿರುವ ತಾಲ್ಲೂಕುಗಳು
* ಹೊಸಪೇಟೆ (ಕೇಂದ್ರ ಸ್ಥಾನ)
* ಕಂಪ್ಲಿ
* ಹಗರಿಬೊಮ್ಮನಹಳ್ಳಿ
* ಕೊಟ್ಟೂರು
* ಹೂವಿನಹಡಗಲಿ
* ಹರಪನಹಳ್ಳಿ

ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿಸಲು ಉದ್ದೇಶಿಸಿರುವ ತಾಲ್ಲೂಕುಗಳು
* ಬಳ್ಳಾರಿ (ಕೇಂದ್ರ ಸ್ಥಾನ)
* ಸಂಡೂರು
* ಸಿರುಗುಪ್ಪ
* ಕೂಡ್ಲಿಗಿ
* ಕುರುಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT