ಶನಿವಾರ, ಜನವರಿ 23, 2021
28 °C
ಮಾರ್ಚ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯ

ಕಸಾಪ ಅಧ್ಯಕ್ಷ ಗಾದಿಗೆ ಹಲವರ ಕಣ್ಣು

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅವಧಿ ಬರುವ ಮಾರ್ಚ್‌ನಲ್ಲಿ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಹಲವರು ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಈಗಿನಿಂದಲೇ ಅದಕ್ಕೆ ಪೂರಕವಾಗಿ ತಾಲೀಮು ಆರಂಭಿಸಿದ್ದಾರೆ.

ಇನ್ನಷ್ಟೇ ಪರಿಷ್ಕೃತ ಮತದಾರರ ಪಟ್ಟಿ ಹೊರಬರಬೇಕಿದೆ. ಆದರೆ, ಅದಕ್ಕೂ ಮುನ್ನವೇ ಆಕಾಂಕ್ಷಿಗಳು ಮತದಾರರನ್ನು ಭೇಟಿ ಮಾಡಿ ಅವರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.

ಹಾಲಿ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಾ. ಅರವಿಂದ ಪಾಟೀಲ, ಲೇಖಕಿ ವಿನೋದಾ ಕರ್ಣಂ, ಪತ್ರಕರ್ತ, ಸಾಹಿತಿ ಸಿ. ಮಂಜುನಾಥ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ರಂಗಕರ್ಮಿ ಜಗದೀಶ್‌, ವಿಜಯಕುಮಾರ ಗೌಡ ಕೂಡ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲೇಖಕಿ ವಿನೋದಾ ಕರ್ಣಂ ಅವರು ಮೂರು ತಿಂಗಳ ಹಿಂದೆಯೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಪ್ರತಿಯೊಬ್ಬ ಮತದಾರರನ್ನು ಭೇಟಿಯಾಗಿ ಬೆಂಬಲ ಯಾಚಿಸುತ್ತಿದ್ದಾರೆ. ‘ಜಿಲ್ಲೆಯ ಇತಿಹಾಸದಲ್ಲಿ ಇದುವರೆಗೆ ಒಮ್ಮೆಯೂ ಮಹಿಳೆ ಅಧ್ಯಕ್ಷೆಯಾಗಿಲ್ಲ. ನನ್ನನ್ನು ಆಶೀರ್ವದಿಸುವ ಮೂಲಕ ಇತಿಹಾಸ ಬರೆಯಬೇಕು’ ಎಂದು ವಿನೋದಾ ಹೇಳುತ್ತಿದ್ದಾರೆ.

ಇನ್ನು, ಕಳೆದ ಚುನಾವಣೆಯಲ್ಲಿ ಸಿದ್ದರಾಮ ಕಲ್ಮಠ ಅವರಿಂದ ಸೋತಿದ್ದ ಡಾ. ಅರವಿಂದ ಪಾಟೀಲ ಮತ್ತೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವೃತ್ತಿಯಿಂದ ಸರ್ಜನ್‌, ಪ್ರವೃತ್ತಿಯಿಂದ ಸಾಹಿತಿ ಆಗಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ಪೂರಕವಾಗಿ ಕೆಲಸ ಆರಂಭಿಸಿದ್ದಾರೆ. ಪತ್ರಕರ್ತ ಸಿ. ಮಂಜುನಾಥ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿರುವ ಮಂಜುನಾಥ ಅವರು ಎರಡು ದಶಕಗಳಿಂದ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಿದ್ದರಾಮ ಕಲ್ಮಠ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ತಿಳಿಸುತ್ತಿದ್ದಾರೆ. ಮತದಾರರ ಅಂತಿಮ ಪಟ್ಟಿ ಹೊರಬಂದ ನಂತರ ಕೆಲಸ ಆರಂಭಿಸುವ ಮಾತುಗಳನ್ನು ಆಡಿದ್ದಾರೆ.

ಜಿಲ್ಲೆ ವಿಭಜನೆ ಗೊಂದಲ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ. ಬಳ್ಳಾರಿ ಜಿಲ್ಲೆ ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿದೆ.

ಆದರೆ, ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿದವರು ಗೊಂದಲಕ್ಕೆ ಒಳಗಾಗಿದ್ದಾರೆ. ಒಂದುವೇಳೆ ಹೊಸ ಜಿಲ್ಲೆ ಉದಯವಾದರೆ ಎರಡೂ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುತ್ತದೆಯೋ ಅಥವಾ ಅಖಂಡ ಬಳ್ಳಾರಿಯ ಒಂದೇ ಸ್ಥಾನಕ್ಕೆ ಚುನಾವಣೆ ಜರುಗುತ್ತದೆಯೋ ಎಂಬ ಗೊಂದಲದಲ್ಲಿದ್ದಾರೆ. ಹೀಗಾಗಿಯೇ ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

‘ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇನ್ನೂ ಎರಡ್ಮೂರು ತಿಂಗಳು ಸಮಯ ಇದೆ. ಅಷ್ಟರೊಳಗೆ ವಿಜಯನಗರ ಜಿಲ್ಲೆ ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಿದರೆ ಎರಡೂ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಬೇಕಾಗುತ್ತದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಿಂದ ತಲಾ ಒಬ್ಬೊಬ್ಬರು ಜಿಲ್ಲಾ ಅಧ್ಯಕ್ಷರಾಗುತ್ತಾರೆ’ ಎಂದು ಹಾಲಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಹಾಗೂ ಪರಿಷತ್ತಿನ ಹಿರಿಯ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

***
ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಒಬ್ಬ ಮಹಿಳೆಯೂ ಅಧ್ಯಕ್ಷೆ ಆಗಿಲ್ಲ. ಹಾಗಾಗಿ ನನಗೆ ಅವಕಾಶ ಮಾಡಿಕೊಡಬೇಕು. ಈ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವೆ.
–ವಿನೋದಾ ಕರ್ಣಂ, ಲೇಖಕಿ

***

ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವಂತೆ ಪರಿಷತ್ತಿನ ಮತದಾರರು, ಸ್ನೇಹಿತರಿಂದ ಒತ್ತಡ ಇದೆ. ಹಾಗಾಗಿ ಮತ್ತೊಮ್ಮೆ ಸ್ಪರ್ಧಿಸುವೆ.
–ಸಿದ್ದರಾಮ ಕಲ್ಮಠ, ಹಾಲಿ ಅಧ್ಯಕ್ಷ, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

***

ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಸೆ ಇದೆ. ಈ ಕುರಿತು ಸ್ನೇಹಿತರು, ಪರಿಷತ್ತಿನ ಮತದಾರರೊಂದಿಗೆ ಚರ್ಚಿಸಿ ಮುಂದುವರೆಯುವೆ.
–ಸಿ. ಮಂಜುನಾಥ್‌, ಪತ್ರಕರ್ತ–ಸಾಹಿತಿ

***

ಹಿಂದಿನ ಚುನಾವಣೆಯಲ್ಲಿ ಸಿದ್ದರಾಮ ಕಲ್ಮಠ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದೆ. ಈ ಸಲ ಮತದಾರರು ನನ್ನನ್ನು ಆಶೀರ್ವದಿಸುತ್ತಾರೆ ಎಂಬ ಭರವಸೆ ಇದೆ.
–ಡಾ. ಅರವಿಂದ ಪಾಟೀಲ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು