ಭಾನುವಾರ, ಜನವರಿ 19, 2020
28 °C
ಹಂಪಿ ಉತ್ಸವಕ್ಕೆ ದಿನಾಂಕ– ಬಜೆಟ್‌ ನಿಗದಿ; ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

ಸಂಭ್ರಮದಿಂದ ತುಂಗಾ ಆರತಿ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮಗ್ಗುಲಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಶನಿವಾರ ರಾತ್ರಿ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ತುಂಗೆಗೆ ಆರತಿ ಮಾಡಲಾಯಿತು.

ನದಿ ತಟದಲ್ಲಿ ವಿಶೇಷವಾಗಿ ಅಲಂಕರಿಸಿದ ವೇದಿಕೆಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪೂಜೆ ಸಲ್ಲಿಸಿದರು. ನಂತರ ನದಿಗೆ ಬಾಗಿನ ಸಮರ್ಪಿಸಿ, ತುಂಗಾ ಆರತಿ ಮಾಡಿದರು. ಈ ವೇಳೆ ಮಂತ್ರ ಘೋಷ ಮೊಳಗಿದವು. ಬಾನಂಗಳದಲ್ಲಿ ಸಿಡಿಮದ್ದಿನ ಚಿತ್ತಾರ ಇಡೀ ನದಿ ಪಾತ್ರಕ್ಕೆ ಬೆಳಕು ಚೆಲ್ಲಿತ್ತು.

ವಿಭೂತಿ, ಕುಂಕುಮದಿಂದ ಅಲಂಕರಿಸಿದ ಬಂಡೆಗಲ್ಲುಗಳ ಮೇಲೆ ದೀಪಗಳನ್ನು ಬೆಳಗಿಸಲಾಗಿತ್ತು. ಹರಿಯುವ ನದಿಯಲ್ಲಿ ದೀಪಗಳನ್ನು ಸಾಲಾಗಿ ಹರಿಬಿಡಲಾಗಿತ್ತು. ದೀಪಾಲಂಕಾರ ಮಾಡಿದ್ದ ಮಂಟಪದಲ್ಲಿ ಬಾಲಕಿಯರ ಭರತನಾಟ್ಯ ವಿಶೇಷ ಕಳೆ ತಂದುಕೊಟ್ಟಿತ್ತು. ಈ ಅಪರೂಪದ ಕ್ಷಣಕ್ಕೆ ವಿದೇಶಿಯರು ಸೇರಿದಂತೆ ನೂರಾರು ಜನ ಸಾಕ್ಷಿಯಾದರು. ಶಾಸಕ ಆನಂದ್‌ ಸಿಂಗ್‌ ತುಂಗೆಯಲ್ಲಿ ಮಿಂದೆದ್ದು, ಮಡಿಯಾಗಿ ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ‘ಹಂಪಿ ಉತ್ಸವಕ್ಕೆ ನಿರ್ದಿಷ್ಟ ದಿನಾಂಕ ಹಾಗೂ ಬಜೆಟ್‌ ನಿಗದಿಪಡಿಸಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದೆ. ಈ ಕುರಿತು ಎಲ್ಲರ ಸಲಹೆ ಪಡೆದು, ಶೀಘ್ರದಲ್ಲೇ ತೀರ್ಮಾನಕ್ಕೆ ಬರಲಾಗುವುದು’ ಎಂದು ಹೇಳಿದರು.

‘ಈ ಸಲದ ಹಂಪಿ ಉತ್ಸವಕ್ಕೆ ₹6ರಿಂದ ₹7 ಕೋಟಿ ಖರ್ಚಾಗುವ ಸಾಧ್ಯತೆ ಇದೆ. ಹಣಕಾಸು ಇಲಾಖೆಗೆ ₹5 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗಾಗಲೇ ₹3 ಕೋಟಿ ಬಿಡುಗಡೆಯಾಗಿದೆ. ಉತ್ಸವಕ್ಕೆ ಯಾವುದೇ ರೀತಿಯ ಕೊರತೆ ಆಗದಂತೆ ಹಣದ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಯಾರಿಗೂ ಚಿಂತೆ ಬೇಡ’ ಎಂದು ಅಭಯ ನೀಡಿದರು.

‘ನಾಡಿನಲ್ಲಿ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಸುಭಿಕ್ಷೆಯಾಗಿರಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಿ, ತುಂಗಾ ಆರತಿ ಮಾಡಲಾಗಿದೆ. ಉತ್ಸವಕ್ಕೆ ಕೊನೆಯ ಹಂತದ ಸಿದ್ಧತೆಗಳು ನಡೆದಿವೆ. ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಡಿ.ವೈ.ಎಸ್ಪಿ. ವಿ. ರಘುಕುಮಾರ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌, ವಿರೂಪಾಕ್ಷೇಶ್ವರ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ್‌ ರಾವ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಪಾಲಪ್ಪ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು