ಶನಿವಾರ, ಅಕ್ಟೋಬರ್ 31, 2020
21 °C

ತಗ್ಗಿದ ತುಂಗಭದ್ರಾ ಒಳಹರಿವು: ಮುಳುಗಿದ ಹಂಪಿ ಸ್ಮಾರಕಗಳು ಗೋಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Hampi purandara mantapa

ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಮಂಗಳವಾರ ತಗ್ಗಿದ್ದು, ನದಿಯಲ್ಲಿ ನೀರಿನ ಹರಿವು ಕೂಡ ಇಳಿಮುಖಗೊಂಡಿದೆ.

ಸೋಮವಾರ ಸಂಪೂರ್ಣ ಮುಳುಗಡೆಯಾಗಿದ್ದ ಹಂಪಿಯ ವಿಜಯನಗರ ಕಾಲದ ಕಾಲು ಸೇತುವೆ, ಪುರಂದರ ಮಂಟಪದ ಮೇಲ್ಭಾಗ ಮಂಗಳವಾರ ಗೋಚರಿಸಿದವು. ಹಂಪಿ ಸ್ನಾನಘಟ್ಟ, ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನದ ಬಳಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಗೆ ಸಮನಾಗಿ ಹರಿಯುತ್ತಿದ್ದ ನೀರು ಇಳಿಮುಖವಾಗಿದ್ದು, ಮುಳುಗುವ ಭೀತಿ ದೂರವಾಗಿದೆ. 

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1,631.76 ಅಡಿ ನೀರಿನ ಸಂಗ್ರಹವಿದೆ. 54,500 ಕ್ಯುಸೆಕ್‌ ಒಳಹರಿವು ಇದ್ದರೆ, 88,069 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 28 ಗೇಟ್‌ಗಳನ್ನು ತೆರೆದು ನೀರು ಹರಿಸಲಾಗುತ್ತಿದೆ. 20 ಗೇಟ್‌ಗಳನ್ನು ತಲಾ 2.5 ಅಡಿ, ಎಂಟು ಗೇಟ್‌ಗಳನ್ನು ತಲಾ ಒಂದು ಅಡಿ ಮೇಲಕ್ಕೆತ್ತಿ ನೀರು ಬಿಡಲಾಗುತ್ತಿದೆ. ಸೋಮವಾರ 65,448 ಕ್ಯುಸೆಕ್‌ ಒಳಹರಿವು, 1,15,000 ಹೊರಹರಿವು ಇತ್ತು. 30 ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿತ್ತು.

‘ಸೋಮವಾರ ತುಂಗಾದಿಂದ 60,000 ಕ್ಯುಸೆಕ್‌ಗೂ ಅಧಿಕ, ಭದ್ರಾದಿಂದ 50,000 ಕ್ಯುಸೆಕ್‌ ನೀರು ನದಿಗೆ ಬಿಡಲಾಗಿತ್ತು. ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗಿತ್ತು. ಆದರೆ, ಮಂಗಳವಾರ ಎರಡೂ ಜಲಾಶಯಗಳಿಂದ ನದಿಗೆ ನೀರು ಹರಿಸುವ ಪ್ರಮಾಣ ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕೂಡ ತಗ್ಗಿದ್ದು, ಒಳಹರಿವು ಕಮ್ಮಿಯಾಗಿದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯ ಎಂಜಿನಿಯರ್‌ ವಿಶ್ವನಾಥ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು