ಬುಧವಾರ, ನವೆಂಬರ್ 25, 2020
20 °C

ಉಜ್ಜಯಿನಿ ಪೀಠ ವಿವಾದ: ಸ್ವಾಮೀಜಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು (ಬಳ್ಳಾರಿ ಜಿಲ್ಲೆ): ‘ಇಲ್ಲಿನ ಉಜ್ಜಯಿನಿ ಪೀಠದಲ್ಲಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಇರುವಾಗಲೇ ತ್ರಿಲೋಚನ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಿರುವ ಪ್ರಕ್ರಿಯೆ ಸರಿಯಲ್ಲ’ ಎಂದು ಉಜ್ಜಯಿನಿ ಗ್ರಾಮ ಪ್ರತಿಷ್ಠಾನದ ಅಧ್ಯಕ್ಷ ರೇವಯ್ಯ ಒಡೆಯರ್‌ ಆಕ್ಷೇಪಿಸಿದ್ದಾರೆ.

‘ಇತ್ತೀಚೆಗೆ ಲಕ್ಷ್ಮೇಶ್ವರದ ಮುಕ್ತಿ ಮಂದಿರದ ಸಭೆಯಲ್ಲಿ ಈ ನೇಮಕ ನಡೆದಿದೆ. ಆದರೆ ಅಪಾರ ಭಕ್ತರು ಮತ್ತು 6,800 ಶಾಖಾ ಮಠಗಳಿರುವ ಮಠಕ್ಕೆ ಪೀಠಾಧಿಪತಿಯನ್ನು ನೇಮಿಸುವಾಗ ಅನುಸರಿಸಬೇಕಾದ ನಿಯಮಾವಳಿಗಳು ಬಾಳೆಹೊನ್ನೂರಿನ ವೀರಸೋಮೇಶ್ವರ ಸ್ವಾಮೀಜಿ ಮತ್ತು ಕೇದಾರ ಮಠದ ಭೀಮಾಶಂಕರ ಸ್ವಾಮೀಜಿಗೆ ತಿಳಿದಿರಲಿಲ್ಲವೇ?’ ಎಂದು ಅವರು ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

‘ನಿಯಮ ಮೀರಿ ನೇಮಿಸಿರುವ ಸಭೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಭಾಗವಹಿಸಿದ್ದಿರಬೇಕು. ಅಂಥ ಸಂದರ್ಭಗಳಲ್ಲಿ ಕೈಗೊಳ್ಳುವ ತೀರ್ಮಾನ ಹೇಗೆ ಸರ್ವಮಾನ್ಯವಾಗುತ್ತದೆ’ ಎಂದು ಕೇಳಿದ್ದಾರೆ.

‘ಸಭೆಗೆ ಮೊದಲೇ ಏಕೆ ಪ್ರಕಟಣೆ ಕೊಡಲಿಲ್ಲ, ಕೊಟ್ಟಿದ್ದರೆ ಲಕ್ಷಾಂತರ ಭಕ್ತರು ಭಾಗವಹಿಸಿ ವೀರಶೈವ ಸಮುದಾಯದ ಶಕ್ತಿಯನ್ನು ಹೆಚ್ಚಿಸುತ್ತಿದ್ದರು. ಎಲ್ಲಾ ಪಂಚಾಚಾರ್ಯರನ್ನಾದರೂ ಆಹ್ವಾನಿಸಬೇಕಿತ್ತು. ಇದಾವುದನ್ನೂ ಮಾಡದೇ ಉಜ್ಜಯಿನಿ ಪೀಠಕ್ಕೆ ಯಾವುದೋ ಸ್ವಾಮಿಯನ್ನು ಪಟ್ಟ ಕಟ್ಟಿದ್ದೇವೆ ಎನ್ನಲಿಕ್ಕೆ ಅದು ಹುಡುಗಾಟವಾಯಿತೇ? 11 ವರ್ಷಗಳ ಹಿಂದೆ ಒಬ್ಬರಿಗೆ ಪಟ್ಟ ಕಟ್ಟಿ ಈಗ ಅದು ಸರಿ ಇಲ್ಲ ಎಂದು ಏಕಾಏಕಿ ಹೇಳಲು ಮನಸ್ಸಾದರೂ ಹೇಗೆ ಬಂತು ಉತ್ತರಿಸಿ’ ಎಂದು ಅವರು ಸ್ವಾಮೀಜಿಗಳನ್ನು ಆಗ್ರಹಿಸಿದ್ದಾರೆ.

‘ಹಾಲುಮತ ಕುಲಗುರು ರೇವಣಸಿದ್ದೇಶ್ವರ ಅವರದ್ದು ಎನ್ನಲಾಗಿರುವ ಬಾಳೆಹೊನ್ನೂರು ಪೀಠಕ್ಕೆ ಕಾಗಿನೆಲೆ ಸ್ವಾಮೀಜಿಯವರು ತಮಗೆ ಬೇಕೆನಿಸಿದವರನ್ನು ಅಧ್ಯಕ್ಷರನ್ನಾಗಿಸಿದರೆ ವೀರಸೋಮೇಶ್ವರ ಸ್ವಾಮೀಜಿ ಒಪ್ಪಿಕೊಳ್ಳುತ್ತಾರೆಯೇ’ ಎಂದು ‍ಪ್ರಶ್ನಿಸಿದ್ದಾರೆ.

‘ತ್ರಿಲೋಚನ ಸ್ವಾಮೀಜಿಯ ಬಗ್ಗೆ ನಮಗೆ ವಿಶ್ವಾಸವಿಲ್ಲ. ಅಂಥ ನಂಬಿಕೆ, ವಿಶ್ವಾಸವಿದ್ದರೆ ಅವರನ್ನೇ ವೀರಸೋಮೇಶ್ವರ ಸ್ವಾಮೀಜಿ ತಮ್ಮ ಪೀಠಕ್ಕೆ ನೇಮಕ ಮಾಡಿಕೊಳ್ಳಲಿ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.