ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪ್ರತಿನಿಧಿಗಳ ಭಾಷಣದಲ್ಲಿ ಮೌಲ್ಯ ಇರಲಿ’

Last Updated 8 ಫೆಬ್ರುವರಿ 2021, 9:58 IST
ಅಕ್ಷರ ಗಾತ್ರ

ಹೊಸಪೇಟೆ: ‘ಚುನಾಯಿತ ಜನಪ್ರತಿನಿಧಿಗಳ ಭಾಷಣದಲ್ಲಿ ಮೌಲ್ಯ, ವಸ್ತುನಿಷ್ಠ ವಿಷಯ ಇರಬೇಕು. ಹೀಗಿದ್ದರೆ ಯುವಜನಾಂಗ ರಾಜಕಾರಣದತ್ತ ಆಸಕ್ತಿ ತೋರಿಸಲು ಸಾಧ್ಯ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ತಿಳಿಸಿದರು.

ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ, ಅಭಿವೃದ್ಧಿ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಸೋಮವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ಕೊಡಲಿರುವ ತರಬೇತುದಾರರಿಗೆ ಹಮ್ಮಿಕೊಂಡಿರುವ ಎರಡನೇ ಸುತ್ತಿನ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಿಂದಿನ ರಾಜಕಾರಣಿಗಳ ಭಾಷಣಗಳಲ್ಲಿ ಮೌಲ್ಯ, ವಸ್ತುನಿಷ್ಠ ಸಂಗತಿಗಳು ಇರುತ್ತಿದ್ದವು. ಅವರ ಭಾಷಣ ಆಲಿಸಿದವರಲ್ಲಿ ರಾಜಕೀಯ ಪ್ರವೇಶಿಸುವ ಭಾವನೆ ಬರುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಂತಹ ವಾತಾವರಣ ಇಲ್ಲ. ಯುವ ಜನಾಂಗ ರಾಜಕೀಯ ರಂಗ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಅದು ಬದಲಾಗಬೇಕು. ಇಂತಹ ಕಾರ್ಯಾಗಾರ ಅದಕ್ಕೆ ಮುನ್ನುಡಿ ಹಾಡಬೇಕು’ ಎಂದರು.

ಕಾರ್ಯಾಗಾರದ ಸಂಚಾಲಕ ಎಚ್.ಡಿ.ಪ್ರಶಾಂತ್ ಮಾತನಾಡಿ, ‘ಪಂಚಾಯಿತಿ ಚುನಾವಣೆಗಳಲ್ಲಿ ನೂತನವಾಗಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ವಿದ್ಯಾವಂತರಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತುದಾರರು ಹೆಚ್ಚಿನ ಜ್ಞಾನದ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಂಡು ಸೂಕ್ತ ತರಬೇತಿ ನೀಡಿದರೆ ಈ ಕಾರ್ಯಾಗಾರ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.

ಎಸ್.ಐ.ಆರ್.ಡಿ. ಸಂಸ್ಥೆಯ ಪ್ರಾಧ್ಯಾಪಕ ಗಣೇಶ್ ಪ್ರಸಾದ್ ಮಾತನಾಡಿ, ‘ತರಬೇತಿ ಪಡೆದ ತರಬೇತುದಾರರು 280 ಕೇಂದ್ರಗಳಲ್ಲಿ ಮುಖಾಮುಖಿ ಕಾರ್ಯಾಗಾರವನ್ನು ಆಯೋಜಿಸಿ ಜನಪ್ರತಿನಿಧಿಗಳಿಗೆ ಅವರ ಕೌಶಲ, ಜವಾಬ್ದಾರಿ, ಕರ್ತವ್ಯ ಹಾಗೂ ಅವರ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿದರೆ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಜೊತೆಗೆ ಗ್ರಾಮದ ಅಭಿವೃದ್ಧಿಯೂ ಕೂಡ ಉತ್ತಮವಾಗಿ ಆಗುತ್ತದೆ’ ಎಂದು ತಿಳಿಸಿದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಜನಾರ್ದನ, ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಸ್ವಾಮಿ, ಎಸ್.ಐ.ಆರ್.ಡಿ. ಕಲಬುರ್ಗಿ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಅಂಬರಾಯ ಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT