ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಂದಾವನ ಹಾಳುಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಸಮಾನ ಮನಸ್ಕರ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ
Last Updated 19 ಜುಲೈ 2019, 15:04 IST
ಅಕ್ಷರ ಗಾತ್ರ

ಹೊಸಪೇಟೆ: ಗಂಗಾವತಿ ತಾಲ್ಲೂಕಿನ ಆನೆಗುಂದಿ ಸಮೀಪದ ನವ ವೃಂದಾವನವನ್ನು ಹಾಳು ಮಾಡಿದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಸಮಾನ ಮನಸ್ಕರ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಅರ್ಧಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂತರ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

‘ನಡುಗಡ್ಡೆಯಲ್ಲಿರುವ ವ್ಯಾಸರಾಜರ ವೃಂದಾವನ ಅನೇಕ ಜನರಿಗೆ ಪೂಜ್ಯನೀಯ ಸ್ಥಳವಾಗಿದೆ. ನಿಧಿ ಆಸೆಗಾಗಿ ಆ ಪವಿತ್ರ ಸ್ಥಳವನ್ನು ಧ್ವಂಸಗೊಳಿಸಿ, ವಿಕೃತಿ ಮೆರೆದಿರುವುದು ಸರಿಯಲ್ಲ. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಕುರಿತು ಕೂಡಲೇ ಸಮಗ್ರ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಈ ರೀತಿಯ ಘಟನೆಗಳು ಭವಿಷ್ಯದಲ್ಲಿ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ವೃಂದಾವನದ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ, ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು. ಸ್ಮಾರಕಗಳ ರಕ್ಷಣೆಗೆ ಕಾವಲು ಸಮಿತಿ ರಚಿಸಬೇಕು. ವೃಂದಾವನದಲ್ಲಿ ಭಕ್ತರಿಗಾಗಿ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ವೇದಿಕೆಯ ಪ್ರಮುಖರಾದ ಆರ್‌. ಶ್ರೀನಿವಾಸ, ಡಿ. ಬಸವರಾಜ, ಶೇಕ್ಷಾವಲಿ, ಜಿ. ರಂಗಪ್ಪ, ಆರ್‌.ಬಿ. ರೇಖಾ, ಎ. ಮುರಳಿ, ಎಸ್‌. ರಾಜಶೇಖರ್‌, ಆರ್‌. ಪಂಪಾಪತೆಪ್ಪ, ಕೃಷ್ಣ ದೇಶಪಾಂಡೆ, ಆರ್‌.ವಿ. ಜೋಷಿ, ಶ್ರೀರಾಮ, ಎಚ್‌.ಎಸ್‌. ಸಂತೋಷ್‌, ಯಲ್ಲಪ್ಪ, ಸತ್ಯನಾರಯಣ, ಭಾರ್ಗವಿ, ಅರವಿಂದಕುಮಾರ, ಎಸ್‌. ಪರಸಪ್ಪ ಕಮಲಾಪುರಕರ, ಗೋಪಾಲಕೃಷ್ಣ, ವೈ. ರಾಮಚಂದ್ರಬಾಬು, ರವೀಂದ್ರ, ಮೊಹಮ್ಮದ್‌ ನೂರ್‌, ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT